ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಐತಿಹಾಸಿಕ ವಾಟರ್ ಗೇಟ್ ಬಳಿ ನಿರ್ಗತಿಕ ವಯೋವೃದ್ಧೆಯೊಬ್ಬರು ಕಳೆದ 45 ವರ್ಷಗಳಿಂದ ವಾಸವಾಗಿದ್ದು, ಬದುಕಿಗೆ ಒಂದು ಸೂರು ಕಲ್ಪಿಸಿಕೊಡುವಂತೆ ಅಳಲು ತೋಡಿಕೊಂಡಿದ್ದಾರೆ.
ಟಿಪ್ಪು ಆಡಳಿತಾವಧಿಯಲ್ಲಿ ವಾಟರ್ ಗೇಟ್ ಮುಂಭಾಗದಲ್ಲಿ ಚಿಕ್ಕ ಕೋಣೆ (ಗುಹೆಯ ಮಾದರಿ) ರಾತ್ರಿ ಪಾಳಿ ಕಾವಲುಗಾರರ ತಂಗು ತಾಣವಾಗಿತ್ತು. ಇದೀಗ, ಅದು ನಿರ್ಗತಿಕ ವೃದ್ದೆ ಗೌರಮ್ಮ ಎಂಬವರ ವಾಸಸ್ಥಾನವಾಗಿದೆ. ಇದೇ ಗುಹೆಯಲ್ಲಿ ಸುಮಾರು 45 ವರ್ಷಗಳಿಂದ ಆ ವೃದ್ಧೆ ಜೀವನ ಸಾಗಿಸುತ್ತಿದ್ದಾರೆ.
ಗೌರಮ್ಮ ಅವರು ಮನೆಗೆಲಸ, ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ, ವಯಸ್ಸು ಅವರ ಶಕ್ತಿಯನ್ನು ಕುಗ್ಗಿಸಿದೆ. ಈಗ 80 ವರ್ಷ ವಯಸ್ಸಿನ ಆಕೆಗೆ ತನ್ನವರು ಎಂದು ಹೇಳಿಕೊಳ್ಳಲು ಯಾರೂ ಇಲ್ಲದೆ, ಒಂಟಿ ಬದುಕು ಸಾಗಿಸುತ್ತಿದ್ದಾರೆ. ಕೆಲಸ ಮಾಡಲು ಆಗದ ವೃದ್ಧೆಗೆ ವಾಟರ್ ಗೇಟ್ ವೀಕ್ಷಿಸಲು ಬರುವ ಪ್ರವಾಸಿಗರು ಕೊಡುವ ಹಣದಿಂದ ಬದುಕು ನಿರ್ವಹಿಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ವಯೋವೃದ್ಧೆಗೆ ಸ್ಥಳೀಯ ಆಡಳಿತ, ಜನಪ್ರತಿನಿಧಿಗಳಾಗಲಿ ಯಾರೊಬ್ಬರೂ ಗಮನಹರಿಸಿಲ್ಲ ಎಂಬುದು ದುರ್ದೈವದ ಸಂಗತಿ.
ಸಂವಿಧಾನ ಎಲ್ಲರಿಗೂ ಬದುಕುವ ಹಕ್ಕು ನೀಡಿದೆ, ಸರ್ವರಿಗೂ ಮೂಲಭೂತ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯ ಕೂಡ ಹೌದು, ಇಂಥ ನಿರಾಶ್ರಿತರು, ಅನಾಥರು, ನಿರ್ಗತಿಕರಿಗೆ ಕನಿಷ್ಠ ಮೂಲಭೂತ ಸೌಕರ್ಯ ಮತ್ತು ವಸತಿ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ಇದರಿಂದ ಅದೆಷ್ಟೋ ಬಡ ನಿರ್ಗತಿಕ ಕುಟುಂಬಗಳು ಬೀದಿ ಬದಿ, ಸೇರಿದಂತೆ ಪಾಳು ಬಿದ್ದ ಕಟ್ಟಡಗಳಲ್ಲಿ ವಾಸಿಸುತ್ತಿದ್ದಾರೆ ಎಂಬುದು ಪ್ರಜ್ಞಾವಂತ ನಾಗರಿಕರ ಕಳಕಳಿ.
ಈ ಕುರಿತು ವಕೀಲ ಸಿ. ಎಸ್. ವೆಂಕಟೇಶ್ ಈದಿನ.ಕಾಮ್ ದೊಂದಿಗೆ ಮಾತನಾಡಿ, “ಆರ್ಟಿಕಲ್ 21 ರ ಪ್ರಕಾರ ಎಲ್ಲರಿಗೂ ವಾಸಿಸಲು ಅಗತ್ಯವಾದ ಮೂಲಭೂತ ಸೌಲಭ್ಯ ಪಡೆಯಲು ಹಕ್ಕಿದೆ. ಆದರೆ ಸ್ಥಳೀಯ ಆಡಳಿತಕ್ಕೆ ಇಚ್ಛಾಶಕ್ತಿಯ ಕೊರತೆಯಿಂದ ಬಡವರು ಅನ್ನುವ ಕೀಳರಿಮೆ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಇದೆ. ಅವರು ಕೂಡ ನಮ್ಮ ಹಾಗೆ ಮನುಷ್ಯರೇ ಅನಿಸುವುದಿಲ್ಲ. ಅವರಿಗಾಗಿ ಯಾವುದೆ ಸೌಲಭ್ಯ ಕಲ್ಪಿಸುವ ಪ್ರಯತ್ನ ಕೂಡ ನಡೆಯಲ್ಲ, ಇದುವರೆಗೆ ಶ್ರೀರಂಗಪಟ್ಟಣದ ವಾಟರ್ ಗೇಟ್ ಮುಂಭಾಗದಲ್ಲಿ ಬದುಕು ಸವೆಸುತ್ತಿರುವುದು ಯಾರೊಬ್ಬ ಅಧಿಕಾರಿಯ ಕಣ್ಣಿಗೂ ಕಂಡಿಲ್ಲ. ಈಗಲಾದರೂ ಗೌರಮ್ಮಗೆ ಪುನರ್ವಸತಿ ಒದಗಿಸಿ ಬದುಕಿಗೆ ಆಸರೆ ಕಲ್ಪಿಸಬೇಕು” ಎಂದು ಆಗ್ರಹಿಸಿದರು.

ಸೋಷಿಯಲಿಸ್ಟ್ ಪಾರ್ಟಿ ಮೈಸೂರು ಜಿಲ್ಲಾಧ್ಯಕ್ಷ ಹರೀಶ್ ಗೌಡ ಈದಿನ.ಕಾಮ್ ದೊಂದಿಗೆ ಮಾತನಾಡಿ, “ಸರ್ಕಾರ ಎಲ್ಲರಿಗೂ ಹಲವು ಭಾಗ್ಯಗಳ ಘೋಷಣೆ ಮಾಡುತ್ತಿದೆ, ಇಂತಹ ಬಡ ಬಗ್ಗರಿಗೆ ಅನಾಥಾಶ್ರಮ, ಪುನರ್ವಸತಿ ಕಲ್ಪಿಸಿ ಅವರಿಗೂ ಬದುಕಲು ವ್ಯವಸ್ಥೆ ಕಲ್ಪಿಸಬೇಕು. ಈ ಇಳಿ ವಯಸ್ಸಿನಲ್ಲಿ ನಡೆಯಲು ಸಾಧ್ಯವಾಗದೆ ಕೂತಲ್ಲಿಯೇ ಜೀವನ ನಡೆಸುವುದು ನಿಜಕ್ಕೂ ಕಣ್ಣೀರು ತರಿಸುವಂತದ್ದು, ಈಗಲಾದರೂ ವೃದ್ದೆಗೆ ವಸತಿ ಕಲ್ಪಿಸಿ” ಎಂದು ಒತ್ತಾಯಿಸಿದರು.
ಈದಿನ.ಕಾಮ್ ಜೊತೆ ಮಾತನಾಡಿದ ಗೌರಮ್ಮ, “ನನಗ್ಯಾರು ದಿಕ್ಕಿಲ್ಲ, ನಾನೊಬ್ಬಳು ಅನಾಥೆ, ಈ ಹಿಂದೆ ಅಲ್ಲಿ ಇಲ್ಲಿ ಜೀತ ಮಾಡಿ ಬದುಕು ಸವೆಸಿದೆ, ಗಂಡ ಕೂಡ ಸತ್ತೋದರು. ನಾನು ಹೇಗೋ ಶಕ್ತಿ ಇರುವರೆಗೆ ಕೂಲಿ ಮಾಡಿದ್ದೇನೆ, ಆದ್ರೆ ಈಗ ನಡೆಯಲು ಆಗಲ್ಲ, ಕೂಲಿ ಮಾಡುವ ಸಾಮರ್ಥ್ಯ ನನಗಿಲ್ಲ. ಸಾಯೋತನಕ ನನಗೊಂದು ಸೂರು ಕೊಡಿ, ಎಲ್ಲರೂ ಬಂದು ಕೇಳುತ್ತಾರೆ, ವಿಡಿಯೋ ಮಾಡಿಕೊಳ್ಳುತ್ತಾರೆ, ಆದರೆ ಯಾರಿಂದಲೂ ನನಗೆ ಸಹಾಯ ಆಗಿಲ್ಲ. ನಿಮ್ಮ ಸುದ್ದಿಯಿಂದ ನನಗೆ ನೆರವು ಸಿಗುವಂತಾಗಲಿ” ಎಂದು ಅಲವತ್ತುಕೊಂಡರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕಾವೇರಿಗೆ ನಮಿಸಲು ಅವಕಾಶ ನಿರಾಕರಣೆ; ನಿಗಮದ ಮುಖ್ಯ ಎಂಜಿನಿಯರ್ ಕ್ಷಮೆ ಕೋರುವಂತೆ ರೈತ ಸಂಘ ಆಗ್ರಹ
ವೃದ್ದೆ ಗೌರಮ್ಮ ವಿಚಾರವಾಗಿ ಪ್ರಭಾರ ತಹಸೀಲ್ದಾರ್ ಕುಮಾರ್ ಅವರು ಈದಿನ.ಕಾಮ್ ಜೊತೆ ಮಾತನಾಡಿ, “ತಕ್ಷಣವೇ ಪುರಸಭೆ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಸಂಪರ್ಕಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ವೃದ್ದೆ ವಾಸ್ತವ್ಯದ ಸ್ಥಳಕ್ಕೆ ಭೇಟಿ ನೀಡಲು ತಿಳಿಸಿ ಗೌರಮ್ಮ ಅವರಿಗೆ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಮಾಡುವಂತೆ ಸೂಚಿಸುವೆ” ಎಂದು ಭರವಸೆ ನೀಡಿದರು.