ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹರಿದು ಆರು ವರ್ಷದ ಬಾಲಕ ಮೃತಪಟ್ಟ ಘಟನೆ ಹುಲಸೂರ ತಾಲೂಕಿನ ಮಿರಕಲ್ ಗ್ರಾಮದಲ್ಲಿ ಜರುಗಿದೆ.
ಮಹಾರಾಷ್ಟ್ರದ ನಿಲಂಗ ಗ್ರಾಮದ ನಿವಾಸಿ ಗಣೇಶ್ ಲಕ್ಷ್ಮಣ್ (6) ಮೃತ ಬಾಲಕ. ಬಾಲಕನ ತಾಯಿಗೆ ಹೆರಿಗೆ ಆಗಿದ್ದರಿಂದ ತವರು ಮನೆಯಲ್ಲಿ ನೆಲೆಸಿದ್ದರು. ಗುರುವಾರ ಬೆಳಿಗ್ಗೆ ತಾಯಿ ಬಯಲು ಬಹಿರ್ದೆಸೆಗೆಂದು ತೆರಳಿದ್ದಾಗ ತಾಯಿಯೊಂದಿಗೆ ಬಾಲಕ ತೆರಳಿದ್ದನು. ರಸ್ತೆ ಮೇಲೆ ನಿಂತ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಾಲಕ ಹಿಂದಿನ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದನು.
ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಫಲಿಸದೇ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಹುಲಸೂರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಈ ಕುರಿತು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.