ನಾಗಾಸಾಧುವಿನ ಸೋಗಿನಲ್ಲಿ ಬಂದ ಖತರ್ನಾಕ್ ವ್ಯಕ್ತಿಯೊಬ್ಬ ಕಾರುಚಾಲಕನಿಗೆ ಮಂಕುಬೂದಿ ಎರಚಿ, ಚಿನ್ನದ ಉಂಗುರ ಪೀಕಿ ಪರಾರಿಯಾಗಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವೈಯಾಲಿ ಕಾವಲ್ ನಿವಾಸಿ ಕಾರು ಚಾಲಕ ವೆಂಕಟಕೃಷ್ಣಯ್ಯ ಎಂಬುವವರು ಇತ್ತೀಚೆಗೆ ರಸ್ತೆ ಬದಿಯಲ್ಲಿ ನಿಂತಿದ್ದಾಗ ನಕಲಿ ನಾಗಾಸಾಧುವೊಬ್ಬ ಬಂದಿದ್ದಾನೆ. ಚಾಲಕನನ್ನು ಕಂಡು 5 ನಿಮಿಷ ವಿಶ್ರಾಂತಿ ಪಡೆದುಕೊಳ್ಳಬೇಕು ಎಂದಿದ್ದಾನೆ. ಬಳಿಕ 5 ರುದ್ರಾಕ್ಷಿ ಕೊಟ್ಟು ಒಂದನ್ನು ವಾಪಸ್ ಕೊಡುವಂತೆ ಹೇಳಿದ್ದಾನೆ. ವಾಪಸ್ ಕೊಟ್ಟ ರುದ್ರಾಕ್ಷಿಯನ್ನು ಪೇಪರ್‌ನಲ್ಲಿ ಮಡಚಿ ಮತ್ತೆ ತೆಗೆದಿದ್ದಾನೆ. ಈ ವೇಳೆ ರುದ್ರಾಕ್ಷಿ ಹೂ ಆಗಿ ಬದಲಾಗಿತ್ತು. ನೋಡು ಇದು ಶುಭ ಸೂಚಕ ನಿನಗೆ ಒಳ್ಳೆಯದಾಗುತ್ತೆ ಅಂತ ಕಣ್ಕಟ್ ಮಾಡಿದ್ದಾನೆ.
ಬಳಿಕ ಚಿನ್ನದ ಉಂಗುರ ಬಿಚ್ಚಿ ಕೊಡಲು ಹೇಳಿದ್ದಾನೆ. ಉಂಗುರ ಸಿಕ್ಕಿದ್ದೇ ತಡ ಚಾಲಕನ ಹಣೆಗೆ ಬೂದಿ ಹಚ್ಚಿ ಮಂಕುಬಡಿಸಿದ್ದಾನೆ. ಚಾಲಕ ತಿರುಗಿ ನೋಡುವಷ್ಟರಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬಳಿಕ ಮನೆಯವರಿಗೆ ವಿಚಾರ ತಿಳಿಸಿದ ವೆಂಕಟಕೃಷ್ಣಯ್ಯ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡೋಂಗಿ ನಾಗಾಸಾಧುಗಾಗಿ ಹುಡುಕಾಟ ನಡೆಸಿದ್ದಾರೆ.
ಧಾರ್ಮಿಕತೆ ಮತ್ತು ಭಕ್ತಿ ಹೆಸರಿನಲ್ಲಿ ಮೋಸ ಮಾಡುವ ನಕಲಿ ನಾಗಾಸಾಧುಗಳು, ಬಾಬಾಗಳು ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಆಶೀರ್ವಾದ ನೀಡುವ ನೆಪದಲ್ಲಿ ಅಥವಾ ಮಂತ್ರದಿಂದ ಸಮಸ್ಯೆ ಪರಿಹಾರ ಮಾಡುತ್ತೇನೆ ಎಂದು ಹೇಳಿಕೊಂಡು ಸುಲಭವಾಗಿ ನಂಬಿಸಿ ಅಮಾಯಕರ ಹಣ, ಚಿನ್ನಾಭರಣ ದೋಚಿ ವಂಚಿಸುತ್ತಿದ್ದಾರೆ. ಯಾವುದೇ ಧಾರ್ಮಿಕ ವ್ಯಕ್ತಿ ಮಾತುಗಳ ಮೂಲಕ ಬೆದರಿಕೆ ಅಥವಾ ಭಯ ಹುಟ್ಟಿಸುವ ಪ್ರಯತ್ನ ಮಾಡಿದರೆ, ಅದನ್ನು ತಕ್ಷಣವಲ್ಲದಿದ್ದರೂ ಶಂಕಿತವಾಗಿ ಪರಿಗಣಿಸಿ, ಅಗತ್ಯವಿದ್ದರೆ ಪೊಲೀಸರಿಗೆ ಮಾಹಿತಿ ನೀಡುವುದು ಅತ್ಯಂತ ಅವಶ್ಯಕ. ಹಾಗೇ ಬೂದಿ, ರುದ್ರಾಕ್ಷಿಯಂತಹ ವಸ್ತುಗಳನ್ನ ಇಟ್ಟುಕೊಂಡು ಬರುವ ಡೋಂಗಿ ಬಾಬಾಗಳಿಂದ ದೂರವಿರುವುದು ಒಳಿತು.
ಇದನ್ನೂ ಓದಿ: ಬೆಂಗಳೂರು | 400 ಮರಗಳ ಮಾರಣಹೋಮಕ್ಕೆ ರೈಲ್ವೆ ಸಿದ್ಧತೆ; ಪರಿಸರವಾದಿಗಳ ಆಕ್ರೋಶ