ತನ್ನೂರಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಯುವಕರೊಬ್ಬರು ಕಲಿತ ಶಾಲೆಗೆ ಒಂದು ಲಕ್ಷ ರೂಪಾಯಿ ಮೌಲ್ಯದ ಪುಸ್ತಕಗಳನ್ನು ದೇಣಿಗೆ ನೀಡಿ ಮಕ್ಕಳ ಕಲಿಕೆಗೆ ಅಕ್ಷರ ಸಂಸ್ಕೃತಿ ಬಿತ್ತುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಭಾಟಸಾಂಗವಿ ಗ್ರಾಮದ ಮಿಲಿಂದ ಮೂಳೆ ಅವರು ತನ್ನೂರಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮಕ್ಕಳ ಕಲಿಕೆಗಾಗಿ ಒಂದು ಲಕ್ಷ ರೂ. ಮೌಲ್ಯದ ಪುಸ್ತಕಗಳನ್ನು ನೀಡಿದ್ದು, ಶಾಲೆಯಲ್ಲಿ ನೂತನ ಗ್ರಂಥಾಲಯ ನಿರ್ಮಿಸಿದ್ದಾರೆ. ಆ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪುಸ್ತಕ ಪ್ರೇಮಿ ಮಿಲಿಂದ ಮೂಳೆ ಅವರು ಎಂ.ಎಸ್ಸಿ. ಬಿ.ಇಡ್ ಓದಿದ್ದು, ಪಿ.ಎಚ್.ಡಿ ವ್ಯಾಸಂಗದ ಜೊತೆಗೆ ಭಾಲ್ಕಿಯ ಖಾಸಗಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ತಾಲೂಕಿನ ಕೆಲವು ಕಾಲೇಜಿಗಳಿಗೆ ಅಗತ್ಯ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಮಿಲಿಂದ, ಇದೀಗ ತಮ್ಮೂರಿನ ಸರ್ಕಾರಿ ಶಾಲೆ, ಶಿಕ್ಷಕ ಹಾಗೂ ಮಕ್ಕಳ ಮೇಲಿನ ಅಪಾರ ಕಾಳಜಿಗೆ ಅಭಿಮಾನದ ಕೊಡುಗೆಯಾಗಿ ಪುಸ್ತಕ ನೀಡಿದ್ದಾರೆ.

1ರಿಂದ 10ನೇ ತರಗತಿವೆರೆಗೆ ಇರುವ ಭಾಟಸಾಂಗವಿ ಗ್ರಾಮದ ಸರ್ಕಾರಿ ಮರಾಠಿ ಮಾಧ್ಯಮ ಶಾಲೆಯಲ್ಲಿ ಒಟ್ಟು 205 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಕಲಿತ ಶಾಲೆಗೆ ಏನಾದರೂ ಕೊಡುಗೆ ಕೊಡಬೇಕೆಂದು ನಿರ್ಧರಿಸಿದ ಮಿಲಿಂದ ಮೂಳೆಯವರಿಗೆ ಮಕ್ಕಳಿಗೆ ಓದಿನ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಪುಸ್ತಕಗಳ ಜೊತೆಗೆ ಕನ್ನಡ, ಹಿಂದಿ ಹಾಗೂ ಇಂಗ್ಲೀಷ್ ದಿನಪತ್ರಿಕೆ ಹಾಗೂ ಪುಸ್ತಕವಿಡಲು ಎರಡು ಕಪಾಟು ಖರೀದಿಸಿದ್ದಾರೆ. ʼಗ್ರಂಥಾಲಯ ಶಾಲೆಯ ಹೃದಯʼ ಎನ್ನುವಂತೆ ವಿದ್ಯಾರ್ಥಿಗಳ ಅಕ್ಷರ ಜ್ಞಾನ ಹೆಚ್ಚಿಸಲು ಪುಸ್ತಕಗಳೇ ದಾನ ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯ.
ತ್ರಿಭಾಷೆ ಪುಸ್ತಕ, ದಿನಪತ್ರಿಕೆ ಲಭ್ಯ:
ಉಪನ್ಯಾಸಕ ಮಿಲಿಂದ ಮೂಳೆಯವರು ಸತ್ಯಕಲಾ ರೂರಲ್ ಏಜ್ಯುಕೇಶನಲ್ ಟ್ರಸ್ಟ್ ಹುಟ್ಟುಹಾಕಿದ್ದು, ಅದರ ಮೂಲಕ ಗಡಿ ಭಾಗದ ತಾಲ್ಲೂಕಿನ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ವಿವಿಧ ಕಾರ್ಯಗಳ ಮೂಲಕ ಅಳಿಲು ಸೇವೆಗೈದು ಪ್ರಜ್ಞಾವಂತ ಸಮಾಜ ನಿರ್ಮಿಸಲು ಹಾತೊರೆಯುತ್ತಿದ್ದಾರೆ.
ಗ್ರಾಮದ ಮರಾಠಿ ಮಾಧ್ಯಮ ಶಾಲೆಯಾಗಿದ್ದರೂ ಕನ್ನಡ, ಇಂಗ್ಲೀಷ್ ಹಾಗೂ ಮರಾಠಿ ಭಾಷೆಯ ಕಥೆ, ಕಾದಂಬರಿ, ಮಹಾತ್ಮ,ರ ಜೀವನ ಚರಿತ್ರೆ, ವಚನ ಸಂಪುಟ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಬರಹ ಮತ್ತು ಭಾಷಣ ಸಂಪುಟ ಹಾಗೂ ಕೆಎಎಸ್, ಐಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳು ಇಲ್ಲಿವೆ. ಕನ್ನಡ ಮಾರಾಠಿ ಹಾಗೂ ಇಂಗ್ಲೀಷ್ ಮೂರು ದಿನಪ್ರತಿಕೆಗಳು ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಓದಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಪುಸ್ತಕ ಪ್ರೇಮಿ ಮಿಲಿಂದ ಮೂಳೆ ಈದಿನ.ಕಾಮ್ ದೊಂದಿಗೆ ಮಾತನಾಡಿ, “ನಾನು ಹಾಗೂ ನನ್ನ ಸಹೋದರರು ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದೇವೆ. ಒಬ್ಬ ಸಹೋದರ ಸರ್ಕಾರಿ ಇಂಜಿನಿಯರ್ ಇನ್ನೋರ್ವ ಸಹೋದರ ಎಂ.ಡಿ ಅಧ್ಯಯನ ನಡೆಸುತ್ತಿದ್ದಾನೆ. ಮೊದಲಿನಿಂದಲೂ ಓದಿನ ಮೇಲೆ ಆಸಕ್ತಿ ಹೊಂದಿರುವ ನಮ್ಮ ಕುಟುಂಬಕ್ಕೆ ಊರಿನ ಶಾಲೆ ಮೇಲೆ ಸಹಜವಾದ ಪ್ರೀತಿ, ಅಭಿಮಾನ ಅಷ್ಟೇ ಹೆಮ್ಮೆಯೂ ಇದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

“ಕಲಿತ ಶಾಲೆಗೆ ಏನಾದರೂ ದೇಣಿಗೆ ನೀಡುವಂತೆ ಶಿಕ್ಷಕರು ಕೇಳಿದರು. ಮಕ್ಕಳ ಶಿಕ್ಷಣಕ್ಕೆ ಬುನಾದಿಯೇ ಪುಸ್ತಕಗಳು, ವಿದ್ಯಾರ್ಥಿಗಳಿಗೆ ಓದಿನ ಹವ್ಯಾಸವಿದ್ದರೆ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಿದೆ ಎಂಬುದು ಅರಿತು ಪುಸ್ತಕಗಳೇ ಕೊಡುಗೆಯಾಗಿ ನೀಡಿದ್ದೇನೆ.ಮುಂದೆಯೂ ಮಕ್ಕಳ ಕಲಿಕೆಗೆ ಏನಾದರೂ ಅಗತ್ಯವಿದ್ದರೂ ಸಹಕರಿಸುವೆ” ಎಂದು ಮಿಲಿಂದ ಮೂಳೆ ಹೇಳಿದ್ದಾರೆ.
“ನಮ್ಮ ಶಾಲೆಯಲ್ಲಿ ಓದಿದ ಮಿಲಿಂದ ಮೂಳೆಯವರು ಶಾಲೆಯ ಮಕ್ಕಳಿಗೆ ಓದಲು ಪುಸ್ತಕ, ದಿನಪತ್ರಿಕೆಗಳ ವ್ಯವಸ್ಥೆ ಜೊತೆಗೆ ಹಳೆ ಮೇಜು, ಟೇಬಲ್ ದುರಸ್ತಿಗೆ ನೆರವು ನೀಡಿದ್ದಾರೆ. ಇದರಿಂದ ಮಕ್ಕಳ ಜೊತೆಗೆ ಶಾಲೆಯ 15 ಶಿಕ್ಷಕ, ಸಿಬ್ಬಂದಿ ಗ್ರಾಮಸ್ಥರ ಓದುಗ ಆಸಕ್ತರಿಗೆ ತುಂಬಾ ಅನುಕೂಲವಾಗಿದೆ. ತಾತ್ಕಾಲಿಕವಾಗಿ ಒಂದು ಕೋಣೆ ಗ್ರಂಥಾಲಯವಾಗಿ ಮಾಡಲಾಗಿದೆ. ಎಲ್ಲಾ ಮಕ್ಕಳು, ಶಿಕ್ಷಕರು ಬಿಡುವಿನ ವೇಳೆ ಓದುತ್ತಿದ್ದಾರೆ. ಸದ್ಯ ಎರಡು ಹೊಸ ಕೋಣೆ ನಿರ್ಮಾಣ ಹಂತದಲ್ಲಿವೆ. ಮುಂದಿನ ದಿನಗಳಲ್ಲಿ ಸುಸ್ಸಜಿತ ಗ್ರಂಥಾಲಯ ನಿರ್ಮಿಸಲಾಗುವುದ. ಮಕ್ಕಳ ಹೆಚ್ಚಿನ ಕಲಿಕೆಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿಸುವೆ ಎಂದು ಭರವಸೆ ನೀಡಿದ್ದಾರೆ. ಕಲಿತ ಶಾಲೆಯ ಮೇಲೆ ಅನನ್ಯ ಅಭಿಮಾನ ಹಾಗೂ ಪ್ರೀತಿ ಇಟ್ಟುಕೊಂಡಿರುವ ನಮ್ಮ ಶಾಲೆಯ ಹಳೆ ವಿದ್ಯಾರ್ಥಿ ಎಂಬುವುದೇ ನಮಗೆ ಹೆಮ್ಮೆಯಿದೆ” ಎಂದು ಶಾಲೆಯ ಮುಖ್ಯಶಿಕ್ಷಕ ಬಬನ ಬಿರಾದರ್ ಈದಿನ.ಕಾಮ್ ದೊಂದಿಗೆ ಮಾತನಾಡಿ ಖುಷಿ ಹಂಚಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗೆದ್ದ ಗ್ಯಾರಂಟಿಯನ್ನು ಗೆಲುವನ್ನಾಗಿ ಮಾಡಿಕೊಳ್ಳದ ಮೂರ್ಖರು
ಯಾವುದೇ ದೇಶದ ಬೌದ್ಧಿಕ ಹಾಗೂ ಸಾಮಾಜಿಕ ಪ್ರಗತಿಯಲ್ಲಿ ಗ್ರಂಥಾಲಯಗಳು ಬಹಳ ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರದಂತೆ ತನ್ನ ಜ್ಞಾನದಿಂದಲೇ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿ ಎಂದು ತಿಳಿದು ನಮ್ಮೂರಿನ ಶಾಲೆಗೆ ಲಕ್ಷ ಮೌಲ್ಯದ ಪುಸ್ತಕ ದೇಣಿಗೆ ನೀಡಿದ ಮಿಲಿಂದ ಮೂಳೆಯವರ ಸಾಮಾಜಿಕ ಕಳಕಳಿ ಅಪಾರವಾಗಿದೆ. ಇದರಿಂದ ಶಾಲೆಯ ಮಕ್ಕಳೊಂದಿಗೆ ಗ್ರಾಮದ ಹವ್ಯಾಸಿ ಓದುಗರಿಗೂ ಅಕ್ಷರ ಸಂಸ್ಕೃತಿ ಹೆಚ್ಚಿಸಿಕೊಳ್ಳಲು ಪ್ರೋತ್ಸಾಹದಾಯಕವಾಗಿದೆ ಎನ್ನುತ್ತಾರೆ ಗ್ರಾಮಸ್ಥ ಲಕ್ಷ್ಮಣ ಸಿಂಗಾರೆ.
ಪುಸ್ತಕ ಪ್ರೇಮಿ ಮಿಲಿಂದ ಮೂಳೆ ಅವರಿಗೆ ಅಭಿನಂದನೆ ತಿಳಿಸಲು ಸಂಪರ್ಕಿಸಿ- 9731295156