- ಹುಮನಾಬಾದ್ ಪಟ್ಟಣದಲ್ಲಿ ಜರುಗಿದ ಶರಣ-ಸೂಫಿ-ಸಂತರ ಸಮಾವೇಶ
- ಬಹುತ್ವ ಭಾರತದಲ್ಲಿ ಯಾವುದೇ ಜಾತಿ-ಧರ್ಮದವರು ಬೇರೆಯಾಗಲು ಸಾಧ್ಯವೇ ಇಲ್ಲ
ಈ ದೇಶದಲ್ಲಿ ಸಮಸ್ಯೆಗಳ ಮೇಲೆ ಚುನಾವಣೆಗಳು ನಡೆಯುವುದ್ದಿಲ್ಲ. ಜಾತಿ-ಧರ್ಮಗಳ ಆಧಾರಿತವಾಗಿ ಚುನಾವಣೆ ನಡೆಸಿ ಜಾತಿ-ಧರ್ಮಗಳ ಮಧ್ಯೆ ದ್ವೇಷ ಬಿತ್ತುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿರುವುದು ಈ ದೇಶದ ಬಹುದೊಡ್ಡ ದುರಾದೃಷ್ಟ ಎಂದು ಆಳಂದ ಶ್ರೀ ತೋಂಟದಾರ್ಯ ಅನುಭವ ಮಂಟಪದ ಸಂಚಾಲಕರಾದ ಶ್ರೀ ಕೋರಣೇಶ್ವರ ಸ್ವಾಮೀಜಿ ಹೇಳಿದರು.
ಸೌಹಾರ್ದ ಕರ್ನಾಟಕ ಸಮಿತಿಯಿಂದ ಹುಮನಾಬಾದ್ ಪಟ್ಟಣದ ಸೂಪರ್ ಫಂಕ್ಸನ್ ಸಭಾಂಗಣದಲ್ಲಿ ಆಯೋಜಿಸಿದ್ದ ಶರಣ-ಸೂಫಿ-ಸಂತರ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದರು.
“ಸಮಾನತೆ ಆಧಾರದ ಮೇಲೆ ಭಾರತೀಯ ಭಾವನೆ ಮೂಡಿಸಿಕೊಳ್ಳಬೇಕಿದೆ, ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಹಾಗೂ ಮಾನಸಿಕ ಗುಲಾಮಗಿರಿಯಿಂದ ಮುಕ್ತರಾಗಲು ಜ್ಯೋತಿಭಾ ಫುಲೆ ಹೇಳಿರುವಂತೆ ನಾವು ಶರಣ-ಸೂಫಿ-ಸಂತರ ವಿಚಾರಧಾರೆಗಳು ಮೈಗೂಡಿಕೊಳ್ಳಬೇಕು. ದಮನೀತ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಟ್ಟು ಸಮಾನತೆ ಸಮಾಜ ರೂಪಿಸುವ ಮೂಲಕ ಕಲ್ಯಾಣ ರಾಜ್ಯ ನಿರ್ಮಿಸಲು ಬಸವಾದಿ ಶರಣರ ಮಾರ್ಗದಲ್ಲಿ ಸಾಗಬೇಕಿದೆ” ಎಂದು ನುಡಿದರು.
“ಯಾರೂ ಕೂಡ ಒತ್ತಾಯದಿಂದ ಲಿಂಗಾಯತ, ಬೌದ್ಧ, ಮುಸ್ಲಿಂ ಆಗಲಿಲ್ಲ, ಅಸಮಾನತೆ ಸಮಾಜದ ನರಕ ಯಾತನೆಯಿಂದ ಮುಕ್ತರಾಗಿ ಸಮಾನತೆಯಿಂದ ಬದುಕಬೇಕೆಂಬ ಉದ್ದೇಶದಿಂದ ಧರ್ಮ ಸ್ವೀಕರಿಸಿದರು. ಆದರೆ ಇಂದಿಗೂ ಮನುವಾದ ನಮ್ಮನ್ನು ಮತ್ತೆ ಅವೈಚಾರಿಕತೆ, ಅವೈಜ್ಞಾನಿಕ ತತ್ವದೆಡೆಗೆ ಸೆಳೆಯಲು ಪ್ರಯತ್ನ ನಡೆಯುತ್ತಿಉದೆ. ಆದರಿಂದ ಅದೆಲ್ಲಕ್ಕೂ ಕಿವಿಗೊಡದೆ ಜಾತಿ-ಧರ್ಮ-ಲಿಂಗ-ಭೇದ ಮರೆತು ನಾವೆಲ್ಲರೂ ಭಾರತೀಯರು ಎಂಬ ಭಾವನೆಯೊಂದಿಗೆ ಸೌಹಾರ್ತೆಯಿಂದ ಜೀವಿಸಿ ಮಹಾತ್ಮರ ತತ್ವಾರ್ದಶಗಳನ್ನು ಅನುಸರಿಸೋಣ” ಎಂದರು.
ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ, ಸರ್ವಜನಾಂಗದ ಶಾಂತಿಯ ತೋಟವಾದ ಈ ನಾಡಿನಲ್ಲಿ ಶರಣ-ಸೂಫಿ-ಸಂತರು ಮಾನವೀಯ ಮೌಲ್ಯಗಳ ಉಳಿವಿಗಾಗಿ ಶ್ರಮಿಸಿದರು. ಅಸಮಾನತೆ, ಮೌಢ್ಯ, ಕಂದಚಾರ. ಜಾತಿ ತಾರತಮ್ಯ ವಿರುದ್ಧ ಬಂಡೆದ್ದು ಎಲ್ಲರನ್ನೂ ಅಪ್ಪಿಕೊಂಡು ಸಮತೆಯ ನಾಡು ಕಟ್ಟಿದರು. ಇಲ್ಲಿ ಪುರೋಹಿತಶಾಹಿ ವ್ಯವಸ್ಥೆ ಹಿಂದೂ, ಮುಸ್ಲಿ ಮಧ್ಯೆ ದ್ವೇಷದ ಕಿಚ್ಚು ಹೊತ್ತಿಸಿ ತಾವು ಅಧಿಕಾರ ಚಲಾಯಿಸುತ್ತಿದ್ದಾರೆ. ಬಹುತ್ವ ಭಾರತದಲ್ಲಿ ನಾವ್ಯಾರು ಬೇರೆಯಾಗಲು ಸಾಧ್ಯವೇ ಇಲ್ಲ. ನಮ್ಮೊಳಗಿನ ಅಂಧಶ್ರದ್ಧೆ ಹೋಗಲಾಡಿಸಲು ಶ್ರಮಿಸಿ ವೈಚಾರಿಕತೆಯಿಂದ ಬದುಕುವಂತೆ ಮಾರ್ಗ ತೋರಿದ ಶರಣ ಸಿದ್ಧಾಂತ ಅನುಷ್ಠಾನಕ್ಕೆ ತರಬೇಕು” ಎಂದರು.
“ದೇಶದಲ್ಲಿ ಬಿಜೆಪಿ ನೇತ್ರತ್ವದ ಸರ್ಕಾರದ ಬಂದ ನಂತರ ನಿರುದ್ಯೋಗ, ಬಡತನ, ಹಸಿವು, ಕೋಮುವಾದ, ಜಾತಿ ತಾರತಮ್ಯ ಮಿತಿಮೀರಿದೆ. ಮಣಿಪುರದಲ್ಲಿ ಜರುಗಿದ ಜನಾಂಗೀಯ ಹಿಂಸಚಾರ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಇಂಥ ಅಮಾನವೀಯ ಘಟನೆಗಳು ನಾವೆಲ್ಲರೂ ತ್ರೀವವಾಗಿ ಖಂಡಿಸಿ ಸಮ -ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು” ಎಂದು ಕರೆ ನೀಡಿದರು.

ಆರ್ಬಿಟ್ ಸಂಸ್ಥೆಯ ಫಾದರ್ ವಿಕ್ಟರ್ ಮಾತನಾಡಿ, “ಶರಣ ಸೂಫಿ ಸಂತರ ವಿಚಾರಧಾರೆ ಬದುಕಿನಲ್ಲಿ ಅಳವಡಿಕೊಂಡರೆ ಯಾವುದೇ ಜಾತಿ ಧರ್ಮಗಳ ಮಧ್ಯೆ ದ್ವೇಷ ಹುಟ್ಟಲು ಸಾಧ್ಯವಿಲ್ಲ. ನಾವೆಲ್ಲರೂ ಭಾರತೀಯರು ಎಂದು ಸಹೋದರತೆ ಭಾವನೆ ಮೂಡಿದರೆ ದೇಶದಲ್ಲಿ ಸಾಮರಸ್ಯ ಉಳಿಯುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ‘ಇಂಡಿಯಾ’ ಗೆಲ್ಲದಿದ್ದರೆ ಮಣಿಪುರ, ಹರಿಯಾಣದಂತೆ ದೇಶ ಬದಲು: ಎಂ ಕೆ ಸ್ಟಾಲಿನ್
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಜಯಕುಮಾರ ಸಿಂಧೆ, ಸಾಮಾಜಿಕ ಚಿಂತಕ ಶಾಲಿವಾನ್ ಗಡವಂತಿ, ಎಮ್. ಎನ್.ಖಾದ್ರಿ ಸೇರಿದಂತೆ ಪ್ರಮುಖರಾದ ಸೈಯದ್ ಇಸಾಮೋದ್ದೀನ್ , ಬಸವರಾಜ ಮಾಳಗೆ, ಆರತಿ ಹಳ್ಳಿಕೇಡ್, ಶ್ರೀದೇವಿ ಚುಡೆ, ಗೌಸೋದ್ದೀನ್ , ರೇಷ್ಮಾ ಹಂಸರಾಜ, ಪ್ರಭು ಖಾನಾಪುರೆ, ಶಶಿಕುಮಾರ ಡಾಂಗೆ. ಲಖನ್ ಮಹಾಜನ್ ಸೇರಿ ಇತರರಿದ್ದರು.
ಭವ್ಯ ಮೆರವಣಿಗೆ:
ಸಮಾವೇಶಕ್ಕೂ ಮುನ್ನ ಪಟ್ಟಣದ ಹಳೆ ತಹಸೀಲ್ ಕಚೇರಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಪ್ರವಾಸಿ ಮಂದಿರದ ಮಾರ್ಗವಾಗಿ ಕಲ್ಯಾಣ ಮಂಟಪಕ್ಕೆ ತೆರಳಿತು, ಮೆರವಣಿಗೆಯಲ್ಲಿ ಕೋಲಾಟ ತಂಡದವರ ನೃತ್ಯ ಗಮನ ಸೆಳೆಯಿತು.