ಮಹಿಳೆಯರು ಅಬಲೆಯರಲ್ಲ ಸಬಲೆಯರು, ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ್ ಅಭಿಪ್ರಾಯಪಟ್ಟರು.
ಬೀದರ್ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಮಹಿಳೆಯರಿಗೆ ಅನೇಕ ಸಂವಿಧಾನಾತ್ಮಕ ಸೌಲಭ್ಯಗಳಿವೆ, ಅವುಗಳು ಸದುಪಯೋಗ ಪಡೆದು ಗುರಿ ತಲುಪಬೇಕು” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಲಬುರಗಿ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಮಾತನಾಡಿ, “ಇಂದಿನ ಯುವತಿಯರ ಮೇಲೆ ಗುರುತರ ಜವಾಬ್ದಾರಿ ಇದೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಸ್ತ್ರೀಯರಿಗೆ ಅಷ್ಟೊಂದು ಅವಕಾಶಗಳು ಇರಲಿಲ್ಲ. ನಿಮ್ಮ ಮುಂದೆ ಅನೇಕ ಮಹಿಳಾ ಸಾಧಕಿಯರ ದೊಡ್ಡ ಪಟ್ಟಿಯೇ ಇದೆ. ಬದುಕಿನಲ್ಲಿ ಅನೇಕ ಕಷ್ಟ ನಷ್ಟಗಳು ಎದುರಾಗುತ್ತವೆ. ಆದರೆ, ಎದುರಾಗುವ ಸಮಸ್ಯೆಗಳನ್ನು ಮೆಟ್ಟಿ ನಿಂತು ಗುರಿ ಸಾಧಿಸಬೇಕು” ಎಂದು ನುಡಿದರು.
ಬೀದರ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜಯಶ್ರೀ ಪ್ರಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಮಹಿಳೆಯರು ಕೌಟುಂಬಿಕ ಜವಾಬ್ದಾರಿಯೊಂದಿಗೆ ಸಾಮಾಜಿಕ ರಂಗಗಳಲ್ಲಿಯೂ ಛಾಪು ಮೂಡಿಸಿದ್ದಾರೆ. ಹೆಣ್ಣು ಬರೀ ಅಲಂಕಾರಿಕ, ಭೋಗದ ವಸ್ತುವಲ್ಲ, ಅವಳಿಗೂ ಪುರುಷರ ಸರಿಸಮ ನಿಲ್ಲುವ ಎಲ್ಲ ಶಕ್ತಿ, ಸಾಮರ್ಥ್ಯಗಳಿವೆ, ಸಾಧನೆಗೆ ಕೊನೆ ಇಲ್ಲ. ಆದರೆ, ಈ ಶರೀರಕ್ಕೆ ಕೊನೆಯಿದೆ” ಎಂದರು,
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕಾಲೇಜಿನ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿರ್ಮಲಾ ಸೀತಾರಾಮನ್ ಮುಕ್ತಮನಸ್ಸಿನಿಂದ ಚರ್ಚೆಯಲ್ಲಿ ಭಾಗವಹಿಸುವರೇ ?
ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ಶೀಲಾ ಎನ್. ಎಸ್., ಅರ್ಜುಮಂದ ಅಜರ, ಡಾ. ರಾಜಕುಮಾರ ಆಲ್ಲೂರೆ, ಡಾ.ಸುಚಿತಾನಂದ ಮಲ್ಕಾಪೂರೆ ಸೇರಿದಂತೆ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಮಹಾದೇವಿ ಹೆಬ್ಬಾಳೆ ಕಾರ್ಯಕ್ರಮ ನಿರೂಪಿಸಿದರು, ಪಾಳೇದ ಮಹೇಶ್ವರಿ ವಂದಿಸಿದರು.