- ಕಿಟಕಿಗಳ ಬಳಿ ಇರುವ ಆಸನಗಳಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರಿಗೆ ತೀವ್ರ ಗಾಯ
- ಲಾರಿ ಚಾಲಕನ ವಿರುದ್ಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
ಮಂಡ್ಯ ಜಿಲ್ಲೆಯ ಹುಲ್ಲೇನಹಳ್ಳಿ ಬಳಿ ಕಿಟಕಿ ಮೂಲಕ ಬಸ್ ಹತ್ತುವ ವೇಳೆ ಮಹಿಳಾ ಪ್ರಯಾಣಿಕರೊಬ್ಬರ ಕೈ ಮುರಿದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿರುಚಿದ ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಇದು ತಪ್ಪು ಮಾಹಿತಿಯಾಗಿದ್ದು, ಲಾರಿಯೊಂದು ಬಸ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯ ಕೈ ತುಂಡಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸ್ಪಷ್ಪನೆ ನೀಡಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ‘ಶಕ್ತಿ ಯೋಜನೆ’ಯನ್ನು ಜಾರಿಗೊಳಿಸಿದ ಬಳಿಕ, ಮಹಿಳಾ ಪ್ರಯಾಣಿಕರ ವಿರುದ್ಧ ಸಾಕಷ್ಟು ತಿರುಚಿತ ವಿಡಿಯೋಗಳನ್ನು ವಿರೋಧಿಗಳು ಮತ್ತು ಕಿಡಿಗೇಡಿಗಳು ಹಂಚಿಕೊಳ್ಳುತ್ತಿದ್ದಾರೆ. ಅಂತೆಯೇ, ಅಪಘಾತದಿಂದ ಮಹಿಳೆಯ ಕೈ ತುಂಡಾದ ಘಟನೆಯ ವಿಡಿಯೋವನ್ನು, ಆಕೆ ಕಿಟಕಿ ಮೂಲಕ ಬಸ್ ಹತ್ತಲು ಹೋಗಿ ಕೈಮುರಿದುಕೊಂಡಿದ್ದಾರೆ ಎಂದು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿತ್ತು.
ಈ ಬಗ್ಗೆ ಭಾನುವಾರ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿರುವ ನಿಗಮ, “ಜೂನ್ 18ರಂದು ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗದ ನಂಜನಗೂಡು ಘಟಕದ ವಾಹನ ಸಂಖ್ಯೆ KA-10-F-151 ನಂಜನಗೂಡಿನಿಂದ ಟಿ.ನರಸೀಪುರಕ್ಕೆ ತೆರಳುತ್ತಿತ್ತು. ಮಧ್ಯಾಹ್ನ ಸುಮಾರು 1.45ಕ್ಕೆ ಬಸವರಾಜಪುರದ ಹತ್ತಿರ ಎದುರು ದಿಕ್ಕಿನಿಂದ ಅತಿ ವೇಗವಾಗಿ ಬಂದ ಲಾರಿಯು ಬಸ್‌ನ ಬಲಹಿಂಬದಿಯ ಕಿಟಕಿಯ ಬಳಿ ಢಿಕ್ಕಿ ಹೊಡೆದಿದೆ” ಎಂದು ಹೇಳಿದೆ.
“ಈ ಅಪಘಾತದಲ್ಲಿ ಕಿಟಕಿಗಳ ಬಳಿಯ ಆಸನಗಳಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದ್ದು, ಹೆಚ್.ಡಿ.ಕೋಟೆ ತಾಲೂಕು ಮಾಗುಡಿಲು ನಿವಾಸಿ ಶಾಂತ ಕುಮಾರಿ(33) ಅವರ ಬಲಗೈ ತುಂಡಾಗಿದೆ. ನಂಜನಗೂಡು ತಾಲೂಕು ಹುಲ್ಲಹಳ್ಳಿ ನಿವಾಸಿ ರಾಜಮ್ಮ(50) ಅವರಿಗೆ ಬಲಗೈಗೆ ತೀವ್ರ ಪೆಟ್ಟಾಗಿದೆ. ಈ ಬಗ್ಗೆ ನಿಗಮದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡಿಸಿದ್ದು, ಗಾಯಾಳುಗಳನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ ಉತ್ತಮ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸಂಸ್ಥೆಯೂ ಭರಿಸುತ್ತದೆ. ಈ ಅಪಘಾತದಲ್ಲಿ ಸಂಸ್ಥೆಯ ಚಾಲಕರ ತಪ್ಪಿಲ್ಲ” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ₹100 ಸನಿಹಕ್ಕೆ 1ಕೆಜಿ ಟೊಮೆಟೊ ದರ!
ನಿಗಮವೂ ಲಾರಿ ಚಾಲಕನ ವಿರುದ್ಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.