ಅಫಜಲಪುರ ತಾಲೂಕಿನ ಘತ್ತರಗಾದ ಭಾಗ್ಯವಂತಿಯ ದರ್ಶನಕ್ಕೆ ಬಂದು, ಅಲ್ಲಿಯ ಭೀಮಾ ನದಿಯಲ್ಲಿ ಸ್ನಾನಕ್ಕೆ ಇಳಿದ ಓರ್ವ ಯುವಕ ನೀರುಪಾಲಾಗಿದ್ದಾನೆ.
ಯಾದಗಿರಿ ಜಿಲ್ಲೆಯ ಯಂಕಂಚಿ ಗ್ರಾಮದ ಸಚಿನ್ ರಾಜಾರಾಮ್ ಕಾಂಬಳೆ (23) ಎಂದು ಹೇಳಲಾಗುತ್ತಿದೆ. ಶ್ರಾವಣ ಮಾಸದ ಅಂಗವಾಗಿ ಯುವಕ ಘತ್ತರಗಾ ಭಾಗ್ಯವಂತಿಯ ದರ್ಶನಕ್ಕೆಂದು ಬಂದಿದ್ದ, ಸ್ನಾನ ಮಾಡಲು ನದಿಗಿಳಿದ ವೇಳೆ ಶುಕ್ರವಾರ ಈ ದುರ್ಘಟನೆ ಜರುಗಿದೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಯುವಕನ ಶವ ಪತ್ತೆಗೆ ಕಾರ್ಯಾಚರಣೆ ನಡೆಸಿದರು, ಶವ ಪತ್ತೆಯಾಗಲಿಲ್ಲ. ಶನಿವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.