ಅಕ್ಟೋಬರ್ 28 ಮತ್ತು 29ರಂದು ಸಿ ಗ್ರೂಪಿನ ಹುದ್ದೆ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆಸುತ್ತಿದ್ದು, ಈ ಪರೀಕ್ಷೆಗೆ ಹಾಜರಾಗಲು ಪರೀಕ್ಷಾರ್ಥಿಗಳಿಗೆ ವಸ್ತ್ರ ಸಂಹಿತೆ ವಿಧಿಸಲಾಗಿದೆ. ಇದು ಕಾನೂನು ಬಾಹಿರ. ಅಕ್ಟೋಬರ್ 28 ಮತ್ತು 29ರ ಪರೀಕ್ಷೆಗೆ ಸೂಚಿಸಿರುವ ವಸ್ತ್ರ ಸಂಹಿತೆಯನ್ನು ಹಿಂಪಡೆಯಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆಗ್ರಹಿಸಿದರು.
ನಗರದ ಪಕ್ಷದ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, “ನ.5 ರಂದು ಒಂದೇ ದಿನ ಮೂರು ಪರೀಕ್ಷೆ ನಡೆಸುತ್ತಿರುವುದರಿಂದ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತದೆ. ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಇವರೆಲ್ಲ ಪರೀಕ್ಷೆ ಬರೆಯದೆ ದುಡ್ಡು ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ ಎನಿಸುತ್ತದೆ. ತಕ್ಷಣವೇ ರಾಜ್ಯ ಸರ್ಕಾರ ಪರೀಕ್ಷೆಯನ್ನು ಮುಂದೂಡಬೇಕು. ಬುರ್ಖಾ ಹಾಕಿ ಬರುವ ಮುಸ್ಲಿಂ ಹೆಣ್ಣು ಮಕ್ಕಳಿಗೆ ಒಂದೂವರೆ ಗಂಟೆ ಮುಂಚೆ ಬರುವಂತೆ ಹೇಳಿದ್ದಾರೆ. ದೂರದ ಊರಿನಿಂದ ಬರುವವರು ತಡವಾಗಿ ಬಂದರೆ ಅವರ ಕತೆ ಏನು? ಈ ನಿಯಮಗಳನ್ನು ಬದಲಾಯಿಸಬೇಕು” ಎಂದು ಒತ್ತಾಯಿಸಿದರು.
“ಹುಲಿ ಉಗುರು ವಿವಾದದ ಬಗ್ಗೆ ಮಾತನಾಡಿದ ಅವರು, ಕಾನೂನು ಬಾಹಿರವಾಗಿ ಹುಲಿ ಉಗುರು ಇಟ್ಟುಕೊಂಡಿರುವವರನ್ನೆಲ್ಲಾ ಬಂಧಿಸಬೇಕು. ನಟ ದರ್ಶನ್, ಜಗ್ಗೇಶ್, ನಿಖಿಲ್ ಅವರನ್ನು ಬಂಧಿಸಿ, ಎಲ್ಲರಿಗೂ ಒಂದೇ ಕಾನೂನು ಇರಬೇಕು” ಎಂದರು.
“ರಾಮನಗರವನ್ನು ಬೆಂಗಳೂರಿಗೆ ಸೇರಿಸಲು ವಿರೋಧ ವ್ಯಕ್ತಪಡಿಸಿದ ಅವರು, ಕುಮಾರಸ್ವಾಮಿಯವರು 110 ಹಳ್ಳಿಗಳನ್ನು ಬಿಬಿಎಂಪಿ ವಲಯಕ್ಕೆ ಸೇರಿಸಿದರು. ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ರಿಯಲ್ ಸ್ಟೇಟ್ ಮಾತ್ರ ಗೊತ್ತು, ಅಭಿವೃದ್ಧಿ ಗೊತ್ತಿಲ್ಲ. ಅಂದು ಬಿಬಿಎಂಪಿ ವಲಯಕ್ಕೆ ಸೇರಿದ 110 ಹಳ್ಳಿಗಳಿಗೆ ಇಂದಿಗೂ ಸರಿಯಾದ ನೀರಿನ ವ್ಯವಸ್ಥೆ ಮಾಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎನ್‌ಸಿಇಆರ್‌ಟಿ: ಶಿಕ್ಷಣತಜ್ಞ ನಿರಂಜನಾರಾಧ್ಯ ಆರೋಪ
ವಿಚಿತ್ರ ನಿಯಮಗಳನ್ನು ಹಿಂಪಡೆಯಿರಿ
“700 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲಾಗುತ್ತಿದ್ದು, ಸುಮಾರು 2.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಪರೀಕ್ಷಾರ್ಥಿಗಳಿಗೆ ವಿಚಿತ್ರ ನಿಯಮಗಳನ್ನು ಮಾಡಲಾಗಿದೆ. ಅದರಲ್ಲೂ, ಮಹಿಳೆಯರಿಗೆ ತಾಳಿ ಸೇರಿ ಎಲ್ಲ ಆಭರಣಗಳನ್ನು ಬಿಚ್ಚಿಟ್ಟು ಬರುವಂತೆ ಸೂಚಿಸಿದೆ. ಪೂರ್ತಿ ತೋಳಿನ ಬಟ್ಟೆ ಧರಿಸಬಾರದು, ಜೀನ್ಸ್ ಧರಿಸಬಾರದು ಎಂದಿದ್ದು, ಅರ್ಧ ತೋಳಿನ ಬಟ್ಟೆ ಧರಿಸಲು ಸೂಚಿಸಿದ್ದಾರೆ. ಇದು ನಿಯಮ ಬಾಹಿರ” ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಲೋಹಿತ್ ಹನುಮಾಪುರ ಹೇಳಿದರು.
“ಈ ನಿಯಮಗಳು ನಮ್ಮ ಸಂವಿಧಾನ ಮತ್ತು ಧರ್ಮಕ್ಕೆ ವಿರುದ್ಧವಾಗಿದೆ. ಆ ಅಧಿಕಾರಿಗಳಿಗೆ ಈ ಬಗ್ಗೆ ಜ್ಞಾನ ಇಲ್ಲ ಎನಿಸುತ್ತದೆ. ದೂರದ ಊರಿನಿಂದ ಬಂದ ಪರೀಕ್ಷಾರ್ಥಿಗಳು ಚಿನ್ನದ ಆಭರಣಗಳನ್ನು ಎಲ್ಲಿಟ್ಟು ಹೋಗಬೇಕು. ನವೆಂಬರ್ 5 ರಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೊಲೀಸ್ ಪೇದೆ ಹುದ್ದೆ ನೇಮಕಾತಿಗೆ ಪರೀಕ್ಷೆ ನಡೆಸುತ್ತಿದ್ದು, ಅದೇ ದಿನ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಪರೀಕ್ಷೆ ಕೂಡ ನಡೆಸುತ್ತಿದೆ. ಇದರ ಜೊತೆ ಮತ್ತೊಂದು ಪರೀಕ್ಷೆ ಕೂಡ ಅಂದೇ ನಡೆಯಲಿದ್ದು, ಇದರಿಂದ ಎರಡು ಮೂರು ಪರೀಕ್ಷೆ ಬರೆಯುವವರಿಗೆ ತೊಂದರೆಯಾಗುತ್ತದೆ, ಇದು ಕೇಂದ್ರ ಮತ್ತು ರಾಜ್ಯದ ನಡುವೆ ಹೊಂದಾಣಿಕೆ ಇಲ್ಲ ಎನ್ನುವುದನ್ನು ಸೂಚಿಸುತ್ತದೆ” ಎಂದರು.