- ಜುಲೈ 25ಕ್ಕೆ ಅರ್ಜಿಗಳ ವಿಚಾರಣೆಯನ್ನು ಮುಂದೂಡಿದ ಸುಪ್ರಿಂ ಕೋರ್ಟ್
- ಮೀಸಲಾತಿ ಬಗ್ಗೆ ರಾಜಕೀಯ ಹೇಳಿಕೆ ನೀಡುತ್ತಿರುವ ಬಗ್ಗೆ ನ್ಯಾಯಪೀಠ ಅಸಮಾಧಾನ
ಕರ್ನಾಟಕದಲ್ಲಿ ಮುಸ್ಲಿಮರ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿ ಮಂಗಳವಾರ ಮತ್ತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ. ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿದೆ.
ಅಲ್ಲಿಯವರೆಗೂ ಸಂಪುಟ ಸಭೆಯ ನಿರ್ಧಾರವನ್ನು ಜಾರಿಗೊಳಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶ ಮುಂದುವರಿಯಲಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಇತರೆ ಹಿಂದುಳಿದ ವರ್ಗಗಳ 2ಬಿ ಮೀಸಲಾತಿ ಅಡಿ ಮುಸ್ಲಿಮರಿಗೆ ನೀಡಲಾಗಿದ್ದ ಕೋಟಾವನ್ನು ರದ್ದುಗೊಳಿಸುವ ನಿರ್ಧಾರದ ಅಡಿ ಯಾವುದೇ ಹೊಸ ನೇಮಕಾತಿ ಮತ್ತು ಪ್ರವೇಶಾತಿಗಳನ್ನು ನಡೆಸಬಾರದು ಎಂದು ಈ ಹಿಂದಿನ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿತ್ತು. ಅದು ಮುಂದಿನ ಆದೇಶದವರೆಗೂ ಮುಂದುವರಿಯಲಿದೆ.
ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್, ಬಿವಿ ನಾಗರತ್ನ ಮತ್ತು ಅಹ್ವಾನುದ್ದೀನ್ ಅಮಾನುಲ್ಲಾ ಅವರನ್ನು ಒಳಗೊಂಡ ನ್ಯಾಯಪೀಠವು, ಅರ್ಜಿಯು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವಾಗ ರಾಜಕೀಯ ಹೇಳಿಕೆಗಳು ನೀಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಮುಸ್ಲಿಂ ಮೀಸಲನ್ನು ಹಿಂದಕ್ಕೆ ಪಡೆಯುವ ವಿಚಾರದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಚುನಾವಣಾ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ ಎಂಬುದನ್ನು ಅರ್ಜಿದಾರರ ಪರ ವಕೀಲ ದುಷ್ಯಂತ್ ದವೆ ಪೀಠದ ಗಮನ ಸೆಳೆದರು.
ಇದಕ್ಕೆ ಮೌಖಿಕವಾಗಿ ಹೇಳಿಕೆ ನೀಡಿದ ನ್ಯಾಯಪೀಠವು, ಇದು ನಿಜವೇ ಆಗಿದ್ದರೆ, ನ್ಯಾಯಾಲಯದಲ್ಲಿ ಅರ್ಜಿಯು ವಿಚಾರಣೆಯ ಹಂತದಲ್ಲಿರುವಾಗ ರಾಜಕೀಯ ಹೇಳಿಕೆಗಳು ನೀಡುವುದು ಸಲ್ಲದು. ನ್ಯಾಯಾಲಯದ ಆದೇಶ ಇರುವ ಸಂದರ್ಭದಲ್ಲಿ ಇನ್ನಷ್ಟು ಪಾವಿತ್ರ್ಯ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದೆ.
ಈ ಬಗ್ಗೆ ಅಮಿತ್ ಷಾ ನ ಮೇಲೆ ಸ್ವಯಂ ಪ್ರೇರಿತ ಕೇಸು ದಾಖಲೆ ಮಾಡಬೇಕಲ್ಲಾ ?