ವಸತಿ ನಿಲಯದ ಅಡುಗೆ ಸಹಾಯಕರಿಂದ ಲಂಚದ ಹಣ ಪಡೆಯುತ್ತಿದ್ದ ವೇಳೆ ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್ ವಾರ್ಡನ್ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದ ಮೆಟ್ರಿಕ್ ನಂತರ ಸ್ನಾತಕೋತ್ತರ ಬಾಲಕರ ವಸತಿ ನಿಲಯದ ವಾರ್ಡನ್ ಶಿವಶರಣಪ್ಪ ಅಡುಗೆ ಸಹಾಯಕರ ಹಾಜರಾತಿಗಾಗಿ 15 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವಸತಿ ನಿಲಯದ ಅಡುಗೆ ಸಹಾಯಕರ ಪ್ರತಿ ತಿಂಗಳು ಹಾಜರಾತಿ ನೀಡಲು 20 ಸಾವಿರ ರೂ. ನೀಡಲು ಲಂಚ ನೀಡುವಂತೆ ಬೇಡಿಕೆ ಮಾಡುತ್ತಿದ್ದರು. ಲಂಚ ನೀಡದಿದ್ದರೆ ಹಾಜರಾತಿ ಮತ್ತು ಸಂಬಳ ನೀಡುವುದಿಲ್ಲ ಎನ್ನುತ್ತಿದ್ದರು. ಇದರಿಂದ ಬೇಸತ್ತು ಅಡುಗೆ ಸಹಾಯಕರೊಬ್ಬರು ಲೋಕಾಯುಕ್ತರಿಗೆ ದೂರು ನೀಡಿದರು.
ಲೋಕಾಯುಕ್ತ ಎಸ್‍ಪಿ ಬಿ.ಕೆ.ಉಮೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಗೀತಾ ಬೇನಾಳ, ಅಸಿಸ್ಟೆಂಟ್ ಸಬ್ ಇನ್ಸಪೆಕ್ಟರ್ ಬಸವರಾಜ, ಸಿಬ್ಬಂದಿಗಳಾದ ಪ್ರದೀಪ್, ಫೈಮುದ್ದಿನ್, ರೇಣುಕಮ್ಮ, ಪೌಡಪ್ಪ, ಸಂತೋಷಮ್ಮ, ಗುಂಡಪ್ಪ ನೇತ್ರತ್ವದ ತಂಡ ಕಾರ್ಯಚರಣೆ ನಡೆಸಿ ಅಧಿಕಾರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವರದಿ ಮಾಹಿತಿ : ಮೈಲಾರಿ ದೊಡಮನಿ