ಅಫಘಾತಗಳ ರಸ್ತೆ ಎಂಬ ಕುಖ್ಯಾತಿ ಪಡೆದಿರುವ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್-ವೇನಲ್ಲಿ ಮತ್ತೊಂದು ಅಪಘಾತ ಮಂಗಳವಾರ ನಡೆದಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಇಬ್ಬರು ಮತ್ತು ಮತ್ತೊಂದು ವಾಹನದ ಚಾಲಕ ಮೃತಪಟ್ಟಿದ್ದಾರೆ. ಮೃತರನ್ನು ಉತ್ತರ ಪ್ರದೇಶ ಮೂಲದ ನೀರಜ್ ಕುಮಾರ್ (50), ಅವರ ಪತ್ನಿ ಸೆಲ್ವಿ (47) ಹಾಗೂ ಮಂಡ್ಯದ ಚಾಲಕ ನಿರಂಜನ್ (35) ಎಂದು ಗುರುತಿಸಲಾಗಿದೆ.
ನೀರಜ್ ಮತ್ತು ಅವರ ಪತ್ನಿ ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು. ಮೈಸೂರಿನಿಂದ ಬರುತ್ತಿದ್ದ ಮತ್ತೊಂದು ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆಗರಿ ಬಂದು ಕಾರಿಗೆ ಡಿಕ್ಕಿಹೊಡೆದಿದೆ. ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದಲೇ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡಿದೆ ಎಂದು ಹೇಳಲಾಗಿದೆ.