ಕಮಲನಗರ ತಾಲ್ಲೂಕಿನ ಠಾಣಾಕುಶನೂರ ಠಾಣೆ ಪಿಎಸ್‌ಐ ಅಯ್ಯಂಗಾರ್ ಮೇಲೆ 30 ವರ್ಷದ ಹಿಂದೆ ಮಾರಣಾಂತಿಕ ಹಲ್ಲೆ ನಡೆಸಿ ನಾಪತ್ತೆಯಾಗಿದ್ದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಮಲನಗರ ತಾಲ್ಲೂಕಿನ ಮುಧೋಳ(ಬಿ) ತಾಂಡಾದ ದೇವಿದಾಸ ರಾಠೋಡ್ (60) ಎಂಬಾತ ಆರೋಪಿಯನ್ನು ಮಹಾರಾಷ್ಟ್ರದ ಮರಖೇಲ್ ವ್ಯಾಪ್ತಿಯ ಲೋಣಿ ತಾಂಡಾದಲ್ಲಿ ಅಲ್ಲಿನ ಮುಖ್ಯ ಪೇದೆ ದೀಪಕ ನೆರವಿನಿಂದ ಬಂಧಿಸಲಾಗಿದೆ.
1993ರ ನವೆಂಬರ್ 13 ರಂದು ಠಾಣಾಕುಶನೂರ ಠಾಣೆಯ ಅಂದಿನ ಪಿಎಸ್‌ಐ ಅಯ್ಯಂಗಾರ್ ಮೇಲೆ ಡಕಾಯಿತರ ಗುಂಪೊಂದು ಆಯುಧಗಳಿಂದ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ. ದರೋಡೆಗಾಗಿ 129 ಜನ ಅಕ್ರಮ ಕೂಟ ರಚಿಸಿಕೊಂಡು ಕಂಟ್ರಿ ಪಿಸ್ತೂಲ್ ಇತರ ಮಾರಕಾಸ್ತ್ರಗಳೊಂದಿಗೆ ಭವಾನಿ ಬಿಜಲಗಾಂವ್ ಮತ್ತು ಅಕ್ಕಪಕ್ಕದ ಗ್ರಾಮಗಳಿಗೆ ಹೋಗುತ್ತಿರುವ ಮಾಹಿತಿ ಆಧರಿಸಿ ಪಿಎಸ್‌ಐ ಅಯ್ಯಂಗಾರ್ ಮತ್ತು ಸಿಬ್ಬಂದಿ ತಡೆಯಲು ಹೋದಾಗ ಹಲ್ಲೆ ಮಾಡಿದ್ದು, 127 ಜನರ ವಿರುದ್ಧ ಠಾಣಾಕುಶನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಬ್ಬರು ತಲೆಮರೆಸಿಕೊಂಡಿದ್ದರಿಂದ ಪ್ರಕರಣ ಎಲ್‌ಪಿಆರ್ ನಲ್ಲಿತ್ತು. ಅದರಲ್ಲಿ ದೇವಿದಾಸ ರಾಠೋಡ್ ಕೂಡ ಒಬ್ಬನಾಗಿದ್ದ.
ಈ ಹಿಂದೆ ಘೋರ ಅಪರಾಧ ಆರೋಪಿತನ ಪತ್ತೆ ಹಚ್ಚಿ ಬಂಧನಕ್ಕೆ ಕಳುಹಿಸಿದ ಭಾಲ್ಕಿ ಡಿವೈಎಸ್ ಪಿ ಶಿವಾನಂದ ಪವಾಡಶೆಟ್ಟಿ, ಕಮಲನಗರ ಸಿಪಿಐ ರಾಮಪ್ಪಾ ಸಾವಳಗಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಠಾಣಾಕುಶನೂರು ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಎಸ್.ಪಿ. ಚನ್ನಬಸವಣ್ಣ ಲಂಗೋಟಿ ಪ್ರಶಂಸನಾ ಪತ್ರದೊಂದಿಗೆ ಬಹುಮಾನ ನೀಡಿ ಶ್ಲಾಘಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | 82ರ ಇಳಿ ವಯಸ್ಸಿನಲ್ಲೂ ಆರದ ಉತ್ಸಾಹ; ಸ್ವತಃ ಖರ್ಚಿನಲ್ಲೇ ಊರಿನ ರಸ್ತೆ ದುರಸ್ತಿ
ಈ ಸಂದರ್ಭದಲ್ಲಿ ಠಾಣಾಕುಶನೂರು ಠಾಣೆ ಪಿ.ಎಸ್.ಐ ಉದ್ದಂಡಪ್ಪಾ, ಎಎಸ್‌ಐ ಅನಿಲಕುಮಾರ ಹಾಗೂ ಸಿಬ್ಬಂದಿಗಳಾದ ಸಂಗಮೇಶ್, ಸಂಜೀವಕುಮಾರ, ಬಾಲಾಜಿ ಇದ್ದರು.