ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಮಹಿಷ ದಸರಾ ಉತ್ಸವದಲ್ಲಿ ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ಸಾಹಿತಿ, ಚಿಂತಕ ಪ್ರೊ.ಕೆ.ಎಸ್. ಭಗವಾನ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್ 153 ಹಾಗೂ 153 A ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.
ಮೈಸೂರಿನ ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಗಂಗಾಧರ್ ಸಿ. ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಮಹಿಷ ಉತ್ಸವದಲ್ಲಿ ಒಕ್ಕಲಿಗರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬಳಿಕ ಆ ಸಮುದಾಯದವರಿಂದ ವಿರೋಧ ವ್ಯಕ್ತವಾಗಿತ್ತು.
ಭಗವಾನ್ ಹೇಳಿದ್ದೇನು?
ನಮ್ಮದು ಬುದ್ಧ ಧರ್ಮವಾಗಿದೆ. ಬುದ್ಧ ನಮ್ಮಲ್ಲಿ ಹುಟ್ಟಿದವನಾಗಿದ್ದಾನೆ. ಆದರೆ, ಹಿಂದು ಧರ್ಮ ಹೊರಗಿನಿಂದ ಬಂದಿದೆ. ಬುದ್ಧ ಗುರುಗಳು ಜ್ಞಾನವನ್ನು ಕೊಟ್ಟಿದ್ದಾರೆ. ವೈದಿಕರು ಅಜ್ಞಾನವನ್ನು ಸಮಾಜಕ್ಕೆ ಕೊಡುತ್ತಿದ್ದಾರೆ. ಜನಿವಾರದಿಂದ ಜಾತಿ ಗುರುತಿಸುತ್ತಾರೆ. ಬ್ರಾಹ್ಮಣರು ವೈದಿಕರು ಬೇರೆ ದೇಶದಿಂದ ಬಂದಿರುವವರು. ಎಲ್ಲ ಶೂದ್ರರು ಬ್ರಾಹ್ಮಣರ ಗುಲಾಮರು. ಶೂದ್ರನನ್ನು ದೇವರು ಸೃಷ್ಟಿ ಮಾಡಿರುವುದೇ ಬ್ರಾಹ್ಮಣರ ಸೇವೆ ಮಾಡಲು ಎಂದು ತಿಳಿಸಿದ್ದಾರೆ. ಇಂತಹ ಧರ್ಮವು ನಮಗೆ ಬೇಕಿಲ್ಲ. ಒಕ್ಕಲಿಗರು ಸಂಸ್ಕೃತಿ ಹೀನರು. ಈ ಮಾತು ನನ್ನದಲ್ಲ ಕುವೆಂಪು ಅವರದ್ದು. ನಾನು ಹೇಳಿದರೆ ನನ್ನನ್ನು ಹೊಡೆಯುವುದಕ್ಕೆ ಬರುತ್ತಾರೆ. ನಿಜ ಹೇಳಿದವರನ್ನು ಯಾರೂ ಬಿಡುವುದಿಲ್ಲ. ಆದರೆ ನಿಜ ಹೇಳಿಯೇ ಸಾಯಬೇಕು ಎಂದು ಮಹಿಷ ದಸರಾದಲ್ಲಿ ಭಾಗವಹಿಸಿದ್ದ ಸಾಹಿತಿ ಕೆ.ಎಸ್. ಭಗವಾನ್ ತಮ್ಮ ಭಾಷಣದ ವೇಳೆ ಈ ರೀತಿಯ ಹೇಳಿಕೆ ನೀಡಿದ್ದರು.
ಗಡಿಪಾರಿಗೆ ಆಗ್ರಹ
ಇದೇ ವಿಚಾರವಾಗಿ ಮೈಸೂರಿನ ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ಪೊಲೀಸ್ ಇಲಾಖೆ ಭಗವಾನ್ ವಿರುದ್ಧ ಎಫ್‌ಐಆರ್ ಹಾಕಿರುವುದರಿಂದ ಆತನನ್ನು ಬಂಧಿಸಿ ಗಡಿಪಾರು ಮಾಡಬೇಕು. ಭಗವಾನ್ ಅವರನ್ನು ತನಿಖೆಗೆ ಒಳಪಡಿಸಿ, ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಸಿ ಜಿ ಗಂಗಾಧರ್, ಜಿಲ್ಲಾ ಗೌರವಾಧ್ಯಕ್ಷ ಡಾ.ಸಿ.ವೈ.ಶಿವೇಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ ಕಾರ್ಯದರ್ಶಿ ಚೇತನ್ ಉಪಸ್ಥಿತರಿದ್ದರು.