ಉಡುಪಿ ನಗರದ ಅಜ್ಜರಕಾಡು ವಾರ್ಡಿನ ಕಾಡಬೆಟ್ಟು ಎಂಬಲ್ಲಿರುವ ಶ್ರೀಲಕ್ಷ್ಮಿ ಇನ್ಫಾಸ್ಟಕ್ಚರ್‌ನ ಮಾಲೀಕ ಅಮೃತ್ ಶೆಣೈ ನಿರ್ಮಿಸಿರುವ ಒಂಬತ್ತು ಮಹಡಿಯ ವೈಜರ್ ವಸತಿ ಸಮುಚ್ಚಯದಲ್ಲಿ ಫ್ಲಾಟ್ ಕೊಡುವುದಾಗಿ ಹಣ ಪಡೆದು ವಂಚಿಸಲಾಗಿದೆ ಎಂದು ಫ್ಲಾಟ್ ನಿವಾಸಿಗಳು ಆರೋಪಿಸಿದ್ದಾರೆ.
ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಸತಿ ಸಮುಚ್ಚಯದ ನಿವಾಸಿ ಮತ್ತು ವಕೀಲ ಗಿರೀಶ್ ಐತಾಳ್ ಮಾತನಾಡಿ, “ಫ್ಲಾಟ್ ನಿರ್ಮಾಣ ಕಾಮಗಾರಿ 2014ರಿಂದ ಆರಂಭಿಸಲಾಗಿದೆ. ಇದರಲ್ಲಿ ಫ್ಲಾಟ್ ಕೊಡುವುದಾಗಿ ನಂಬಿಸಿ ಒಂದೇ ಫ್ಲಾಟ್‌ಗೆ ಒಂದಕ್ಕಿಂತ ಹೆಚ್ಚು ಮಂದಿಯಿಂದ ಹಣ ಪಡೆದು, ಯಾರಿಗೂ ಈವರೆಗೆ ನೋಂದಾಣಿ ಮಾಡಿ ಕೊಟ್ಟಿಲ್ಲ. ಅಲ್ಲದೆ ವಸತಿ ಸಮುಚ್ಚಯಕ್ಕೆ ಮಾಡಿರುವ ಸಾಲವನ್ನು ಮರು ಪಾವತಿಸದೆ 36 ಕುಟುಂಬಗಳನ್ನು ಬೀದಿ ಪಾಲು ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ವಸತಿ ಸಮುಚ್ಚಯದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದರೂ ಇಲ್ಲಿರುವ 36 ಫ್ಲಾಟ್‌ಗಳ ಪೈಕಿ 30 ಫ್ಲಾಟ್‌ಗಳಲ್ಲಿ ಸುಮಾರು 150 ಮಂದಿ ವಾಸ ಮಾಡಿಕೊಂಡಿದ್ದಾರೆ. ಒಂದು ಫ್ಲಾಟ್‌ಗೆ ಎರಡು ಮೂರು ಮಂದಿಯಿಂದಲೂ ಹಣ ಪಡೆದಿರುವುದರಿಂದ ಅವರು ಬಂದು ವಾಸ ಮಾಡಬಹುದು ಎಂಬ ಭೀತಿಯಲ್ಲಿ ಇವರೆಲ್ಲ ಬಂದು ಕುಳಿತಿದ್ದಾರೆ. ಇವರು ವಿದ್ಯುತ್, ನೀರು ಸೇರಿದಂತೆ ಯಾವುದೇ ಮೂಲ ಸೌಕರ್ಯ ಇಲ್ಲದೆ ಬದುಕು ನಡೆಸುತ್ತಿದ್ದಾರೆ” ಎಂದರು.
“ಒಂದೇ ಫ್ಲಾಟ್‌ಗೆ ಒಂದೇ ಬ್ಯಾಂಕಿನಲ್ಲಿ ಬೇರೆ ಬೇರೆಯವರ ಹೆಸರಿನಲ್ಲಿ ಸಾಲ ಕೂಡ ಮಂಜೂರಾಗಿದೆ. ಈ ಬಗ್ಗೆ ಕೆನರಾ ಬ್ಯಾಂಕಿನ ಉಪಮಹಾಪ್ರಬಂಧಕರಿಗೂ ದೂರು ನೀಡಲಾಗಿದೆ. ಹೀಗೆ ಹಣ ಕೊಟ್ಟು ಫ್ಲಾಟ್ ಸಿಗದವರು 10ಕ್ಕೂ ಅಧಿಕ ಮಂದಿ ಇದ್ದಾರೆ. ವಸತಿ ಸಮುಚ್ಚಯದ ಕಾಮಗಾರಿ ಇನ್ನು ಶೇ. 40ರಷ್ಟು ಬಾಕಿ ಇದೆ. ಆರು ಫ್ಲಾಟ್‌ಗಳ ಕಾಮಗಾರಿ ಇನ್ನೂ ನಡೆದಿಲ್ಲ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಅಕ್ಕಿ ಕೊಡಲು ನಿರಾಕರಿಸಿದ ಬಗ್ಗೆ ‘ಮನ್ ಕಿ ಬಾತ್’ನಲ್ಲಿ ಮಾತಾಡುವಿರಾ; ದಿನೇಶ್ ಗುಂಡೂರಾವ್ ಪ್ರಶ್ನೆ
“ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಈ ನಿಟ್ಟಿನಲ್ಲಿ ಜೂ. 19ರಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು. ಕಾನೂನು ಹೋರಾಟಕ್ಕಾಗಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು. ಇವರಿಂದ ಇನ್ನು ಯಾರೂ ಮೋಸ ಹೋಗಬಾರದು ಮತ್ತು ನಮಗೆ ನ್ಯಾಯ ಸಿಗಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ವಸತಿ ಸಮುಚ್ಚಯದ ನಿವಾಸಿಗಳಾದ ಅಬ್ದುಲ್ ರಝಾಕ್, ಪಾಂಡುರಂಗ ರಾವ್, ಜೆಸಿಂತಾ ಮೆಂಡೋನ್ಸಾ, ಜೋಷಿತಾ ಮಥಾಯಸ್ ಮೊದಲಾದವರು ಇದ್ದರು.