ಮಸೀದಿ ಅಭಿವೃದ್ಧಿ ಅನುದಾನ ಸೇರಿ ಸಮುದಾಯದ ಕಲ್ಯಾಣಕ್ಕೆ ನೀಡುವ ಹಣ ದುರ್ಬಳಕೆ ಮಾಡಿದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಖ್ಫ್ ಸಚಿವ ಝಮೀರ್ ಅಹಮದ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ಹಾವೇರಿಯಲ್ಲಿ ಹಾವೇರಿ-ಗದಗ ಜಿಲ್ಲೆಗಳ ವಖ್ಫ್ ಅದಾಲತ್ ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಮಸೀದಿ ಅಭಿವೃದ್ಧಿ, ಕಬರಸ್ಥಾನ ನಿರ್ವಹಣೆ ಸೇರಿ ಸಮುದಾಯದ ಕಲ್ಯಾಣಕ್ಕೆ ನೀಡುವ ಅನುದಾನದ ಹಣ ದುರ್ಬಳಕೆ ಆಗುತ್ತಿರುವ ದೂರುಗಳು ಬಂದಿವೆ. ಅದೇ ರೀತಿ ಅನುದಾನ ಕೊಡಿಸಿದ್ದೇವೆ ಎಂದು ಲಂಚ ಪಡೆಯುತ್ತಿರುವ ಬಗ್ಗೆಯೂ ಮಾಹಿತಿ ಬಂದಿದ್ದು, ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ ಎಂದು ಹೇಳಿದರು.

ಯಾರಾದರೂ ಲಂಚ ಕೇಳಿದರೆ ಮೊದಲು ಪೊಲೀಸ್ ಠಾಣೆಗೆ ದೂರು ನೀಡಿ ನನ್ನ ಗಮನಕ್ಕೆ ತನ್ನಿ. ಅವರನ್ನು ಜೈಲಿಗೆ ಹಾಕಿಸುವ ಕೆಲಸ ನಾನೇ ಮಾಡುತ್ತೇನೆ. ಯಾರೇ ಆಗಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಕ್ಫ್ ಆಸ್ತಿ ಉಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಅದು ದೇವರ ಕೆಲಸ ಎಂದು ಹೇಳಿದ ಸಚಿವರು, ವಕ್ಫ್ ಬೋರ್ಡಿನಿಂದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಹಾಗೂ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ರಾಯಚೂರು | ಏಮ್ಸ್ ಮಂಜೂರಾತಿಗಾಗಿ ಹೈಕಮಾಂಡ್‌ಗೆ ಒತ್ತಾಯಿಸುವೆ : ಕೇಂದ್ರ ಸಚಿವ ವಿ ಸೋಮಣ್ಣ
ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು. ಇದು ದುರುದ್ದೇಶದಿಂದ ಕೂಡಿದೆ. ವಕ್ಫ್ ಆಸ್ತಿ ಸರ್ಕಾರದ್ದಲ್ಲ. ಅದು ಸಮುದಾಯದ್ದು. ಕಾಯ್ದೆ ತಿದ್ದುಪಡಿಗೆ ನಮ್ಮ ವಿರೋಧ ಇದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಾವೇರಿ-ಗದಗ ಜಿಲ್ಲೆಯ 32 ಮಸೀದಿಗಳ ಅಭಿವೃದ್ಧಿಗೆ ₹8.50 ಕೋಟಿ ರೂ. ಅನುದಾನದ ಚೆಕ್ ವಿತರಿಸಲಾಯಿತು.
ವಕ್ಫ್ ಅದಾಲತ್ ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಎರಡೂ ಜಿಲ್ಲೆಗಳಲ್ಲಿ ಬಾಕಿ ಇರುವ ಖಾತೆ ಸೇರಿದಂತೆ ಸರ್ವೆ ಹಾಗೂ ಇತರೆ ಪ್ರಕರಣಗಳನ್ನು ಒಂದು ತಿಂಗಳಲ್ಲಿ ಇತ್ಯರ್ಥಪಡಿಸಲು ಗಡುವು ನೀಡಿದರು.
ಈ ಸಂದರ್ಭ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ಮಾಜಿ ಸಂಸದ ಐ ಜಿ ಸನದಿ, ಮಾಜಿ ಶಾಸಕ ಅಜ್ಜಮ್ ಪೀರ್ ಖಾದ್ರಿ, ಯಾಸೀರ್ ಪಟಾನ್, ಫೈಸ್ ಇಬ್ರಾಹಿಂ, ಸಿರಾಜ್ ಉಪಸ್ಥಿತರಿದ್ದರು.

