ಸಿರವಾರ ತಾಲ್ಲೂಕು ಕವಿತಾಳ ಪಿ.ಎಸ್.ಐ ವೆಂಕಟೇಶ ಅವರು ಅಸ್ಪೃಶ್ಯರ ದೂರುಗಳನ್ನು ದಾಖಲು ಮಾಡಿಕೊಳ್ಳಲು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕ ಸಂಘಟನೆ ಜಿಲ್ಲಾಧ್ಯಕ್ಷ ಗಂಗಪ್ಪ ತೋರಣದಿನ್ನಿ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 15 ದಿನದೊಳಗೆ ಕವಿತಾಳ ಪಿಎಸ್‌ಐ ವೆಂಕಟೇಶ್ ಅವರನ್ನು ಅಮಾನತು ಮಾಡಬೇಕು. ಇಲ್ಲವಾದಲ್ಲಿ ಡಿಸೆಂಬರ್ 10 ರಂದು ಎಸ್.ಪಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನವೆಂಬರ್ 15 ರಂದು ತೋರಣದಿನ್ನಿ ಕ್ರಾಸ್ ನಲ್ಲಿ ಶ್ರೀ ಯಲ್ಲಮ್ಮ ದೇವಿ ಜಾತ್ರೆಯ ವೇಳೆ ನಾಯಕ ಮತ್ತು ಮಾದಿಗ ಸಮುದಾಯದವರ ನಡುವೆ ನಡೆದ ಗಲಾಟೆಯಲ್ಲಿ ಮಾದಿಗ ಸಮುದಾಯದ ಯುವಕ ಮಾವುತ್ಸಂಗ್ ನಲಿನ್ ಕುಮಾರ್‌ಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆ ದಾಖಲಾಗಿದ್ದರು. ಆದರೂ ಸಹ ಯಾರೊಬ್ಬ ಪೊಲೀಸರು ಅಲ್ಲಿಗೆ ತೆರಳಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಹಲ್ಲೆಗೊಳಗಾದ ಯುವಕ ದೂರು ದಾಖಲಿಸಲು ಠಾಣೆಗೆ ಬಂದರೂ ದೂರು ದಾಖಲಿಸದೆ ರಾಜೀ ಸಂಧಾನಕ್ಕೆ ಮುಂದಾಗಿದ್ದಾರೆ. ಮೇಲಾಧಿಕಾರಿಗಳ ಗಮನಕ್ಕೆ ತಂದಾಗ ಎರಡು-ಮೂರು ದಿನಗಳ ನಂತರ ದೂರು ದಾಖಲಿಸಿಕೊಳ್ಳಲಾಗಿದೆ.
ಮಾದಿಗ ಜನಾಂಗದವರು ಮೇಲೆ ಸುಳ್ಳು ಪ್ರಕರಣವನ್ನು ಕೂಡಲೇ ದಾಖಲಿಸಲಾಗಿದೆ. ಅದು ಅಲ್ಲದೆ ದೂರಿನಲ್ಲಿ ಪ್ರಸ್ತಾಪಿಸಿದ ವ್ಯಕ್ತಿಗಳಲ್ಲಿ ಕೆಲವರು ಸುಕ್ಷೇತ್ರ ಹುಲಿಗಿ ಹಾಗೂ ಮಸ್ಕಿಯಲ್ಲಿದ್ದರು. ಪ್ರತ್ಯಕ್ಷ ಸಾಕ್ಷಿಗಳೆಂದು ಹೆಸರಿಸಿದವರಿಗೂ ದೂರಿನ ಬಗ್ಗೆ ಮಾಹಿತಿ ಇಲ್ಲ. ಹೀಗೆ ದಲಿತರು ಮತ್ತು ಮೇಲ್ವರ್ಗದವರ ನಡುವೆ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ ಪಿಎಸ್‌ಐ ವೆಂಕಟೇಶ್ ಅವರನ್ನು 15 ದಿನಗಳೊಳಗೆ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ರಾಯಚೂರು | ಮಹಾರಾಷ್ಟ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲು ಇವಿಎಂ ದುರ್ಬಳಕೆ: ವಸಂತ ಕುಮಾರ್
ಸುದ್ದಿಗೋಷ್ಠಿಯಲ್ಲಿ ಮಾವುತ್ಸುಂಗ ನಲಿನ್ ಕುಮಾರ್, ಜೋಸೆಫ್, ಕರಿಯಪ್ಪ ತೋರಣದಿನ್ನಿ, ಮೌನೇಶ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
