ಹಿರಿಯ ರಂಗಕರ್ಮಿ ನ. ರತ್ನ (89) ಅವರು ಹೃದಯಾಘಾತದಿಂದ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮೈಸೂರಿನ ಸರಸ್ವತಿಪುರಂನಲ್ಲಿ ವಾಸವಾಗಿದ್ದ ಅವರು, ಇಂದು ಕೊನೆಯುಸಿರೆಳೆದಿದ್ದಾರೆ.
ತಮಿಳುನಾಡಿನ ಚಿದಂಬರಂನಲ್ಲಿ 1934ರ ಡಿಸೆಂಬರ್ 12ರಂದು ನ. ರತ್ನ ಅವರು ಜನಿಸಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ, ಬಿಎಡ್ ಪದವಿ ಪಡೆದಿದ್ದ ಅವರು, ಅಮೆರಿಕದಲ್ಲಿ ಉನ್ನತ ವ್ಯಾಸಂಗ ನಡೆಸಿದ್ದರು. ವಾಕ್ ಶ್ರವಣ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದು, ವೃತ್ತಿಯಲ್ಲಿ ವಾಕ್ ಶ್ರವಣ ಚಿಕಿತ್ಸಾ ತಜ್ಞರಾಗಿದ್ದರು.
1966ರಲ್ಲಿ ಆಯಿಷ್ ಸ್ಥಾಪನೆಯಾದಾಗ ಪ್ರಥಮ ನಿರ್ದೇಶಕರಾಗಿ ನೇಮಕಗೊಂಡಿದ್ದರು. 1985–87ರಲ್ಲಿ ಅಲಿ ಯವರ್ ಜಂಗ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಡಿಸಾಬಿಲಿಟೀಸ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಮೈಸೂರಿನಲ್ಲಿ ಸಮತೆಂತೊ (ಸರಸ್ವತಿಪುರಂನ ಮಧ್ಯದ ತೆಂಗಿನ ತೋಪು) ರಂಗ ತಂಡ ಕಟ್ಟಿ ರಂಗಭೂಮಿ ಚಟುವಟಿಕೆಗಳಲ್ಲಿಯೂ ಅವರು ತೊಡಗಿಕೊಂಡಿದ್ದರು. ‘ಎಲ್ಲಿಗೆ ಮತ್ತು ಇತರ ಕತೆಗಳು’, ‘ಬೊಂತೆ’, ‘ಗೋಡೆ ಬೇಕೆ ಗೋಡೆ’ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಪುನರ್ಜನ್ಮ, ಭಿನ್ನ ಬೆನಕ, ಬೋಳಾಚಾರಿಗೆ ನಮನ ಮೊದಲಾದ ರೇಡಿಯೊ ನಾಟಕಗಳನ್ನು ಕೂಡ ರಚಿಸಿದ್ದಾರೆ. 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ರಂಗ ಕ್ಷೇತ್ರದಲ್ಲಿನ ಅವರ ಕೊಡುಗೆಗಾಗಿ 2005ರಲ್ಲಿ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, 2013ರಲ್ಲಿ ರಾಜ್ಯೋತ್ಸವ, ಎಂ.ಎನ್.ರಾಯ್ ಪ್ರಶಸ್ತಿ, ಬಿ.ವಿ. ಕಾರಂತ ಪ್ರಶಸ್ತಿ, ಹೆಲನ್ ಕೆಲರ್ ಸಹಿತ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.
ಮೃತರ ಅಂತ್ಯಕ್ರಿಯೆ ಮೈಸೂರಿನಲ್ಲಿ ಬುಧವಾರ ಸಂಜೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನ. ರತ್ನ ಅವರ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. “ಹಿರಿಯ ರಂಗಕರ್ಮಿ ಮತ್ತು ವಾಕ್‌ಶ್ರವಣ ಶಿಕ್ಷಣ ತಜ್ಞ ಡಾ. ನ.ರತ್ನ ಅವರ ಅಗಲಿಕೆ ಎಂದೆಂದೂ ತುಂಬಲಾರದ ನಷ್ಟ. ಅಧ್ಯಾಪನ ಮತ್ತು ರಂಗಚಟುವಟಿಕೆಗಳ ಜೊತೆಗೆ ಮೈಸೂರಿನ ಪ್ರಖ್ಯಾತ ವಾಕ್ ಶ್ರವಣ ಚಿಕಿತ್ಸಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಡಾ.ನ.ರತ್ನ ಅವರು ದೈಹಿಕ ನ್ಯೂನತೆ ಹೊಂದಿರುವ ಸಾವಿರಾರು ಜನರ ಪಾಲಿನ ಜೀವದಾತರಾಗಿದ್ದರು. ಈ ಪುಣ್ಯಪುರುಷನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಿರಿಯ ರಂಗಕರ್ಮಿ ಮತ್ತು ವಾಕ್‌ಶ್ರವಣ ಶಿಕ್ಷಣ ತಜ್ಞ ಡಾ.ನ.ರತ್ನ ಅವರ ಅಗಲಿಕೆ ಎಂದೆಂದೂ ತುಂಬಲಾರದ ನಷ್ಟ.
ಅಧ್ಯಾಪನ ಮತ್ತು ರಂಗಚಟುವಟಿಗಳ ಜೊತೆಗೆ ಮೈಸೂರಿನ ಪ್ರಖ್ಯಾತ ವಾಕ್ ಶ್ರವಣ ಚಿಕಿತ್ಸಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಡಾ.ನ.ರತ್ನ ಅವರು ದೈಹಿಕ ನ್ಯೂನತೆ ಹೊಂದಿರುವ ಸಾವಿರಾರು ಜನರ ಪಾಲಿನ ಜೀವದಾತರಾಗಿದ್ದರು.
ಈ ಪುಣ್ಯಪುರುಷನ… pic.twitter.com/2niYMQtOA1
— CM of Karnataka (@CMofKarnataka) June 19, 2024