ಬೀದರ ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಹೆಚ್ಚುವರಿಯಾಗಿ ₹250 ಕೋಟಿ ಅನುದಾನ ನೀಡಲಾಗಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೀದರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ʼಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ-4ರ ಅಡಿಯಲ್ಲಿ ಅನೇಕ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಭಾಗಶಃ ಪೂರ್ಣಗೊಂಡಿದ್ದು, ಇನ್ನೂ ಕೆಲವು ಕಾರ್ಯ ಪ್ರಗತಿಯಲ್ಲಿವೆ. 15ನೇ ಹಣಕಾಸು ಆಯೋಗದ ಅನುದಾನದಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರು ಪೂರೈಕೆ ಮತ್ತು ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳು ಕೈಗೊಳ್ಳಲಾಗಿದೆ ಹಾಗೂ ರಾಜ್ಯ ಹಣಕಾಸು ಆಯೋಗದಿಂದ SCSP ಮತ್ತು TSP ಯೋಜನೆಗಳ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.
ಸ್ವಚ್ಛ ಭಾರತ ಮಿಷನ್ ಅರ್ಬನ್ 2.0 ಯೋಜನೆಯಡಿ ನಗರ ಪ್ರದೇಶಗಳಲ್ಲಿ ಗೃಹ ಶೌಚಾಲಯ ಮತ್ತು ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಅಮೃತ 2.0 ಯೋಜನೆ ಅಡಿಯಲ್ಲಿ ಉದ್ಯಾನವನ ಹಾಗೂ ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹುಮನಾಬಾದನಲ್ಲಿ 3 ಉದ್ಯಾನವನ ನಿರ್ಮಾಣ ಮತ್ತು ಬೀದರ್ ನಗರದಲ್ಲಿರುವ ಪಾಪನಾಶ ಕೆರೆ ₹5 ಕೋಟಿ ಮತ್ತು ಗೊರನಳ್ಳಿ ಕೆರೆ ₹15 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆʼ ಎಂದು ತಿಳಿಸಿದರು.
ಐದು ಹೊಸ ಇಂದಿರಾ ಕ್ಯಾಂಟೀನ್ :
ಜಿಲ್ಲೆಯಲ್ಲಿ ಹೊಸದಾಗಿ 5 ಇಂದಿರಾ ಕ್ಯಾಂಟೀನ್‌ಗಳು ಆರಂಭವಾಗಲಿವೆ. ಬೀದರ ನಗರದ ನೌಬಾದ್, ಓಲ್ಡ್ ಸಿಟಿ ಹಾಗೂ ಬಿ.ವ್ಹಿ.ಭೂಮರೆಡ್ಡಿ ಕಾಲೇಜು ಸಮೀಪ ಹೊಸ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುವುದು. ಚಿಟ್ಟಗುಪ್ಪ ಮತ್ತು ಹಳ್ಳಿಖೇಡ (ಬಿ) ಪಟ್ಟಣದಲ್ಲಿ ತಲಾ ಒಂದು ಇಂದಿರಾ ಕ್ಯಾಂಟೀನ್ ಆರಂಭವಾಗಲಿವೆʼ ಎಂದು ಮಾಹಿತಿ ನೀಡಿದರು.
ಇ-ಖಾತಾಗೆ ಸಂಬಂಧಿಸಿದ ಕಾರ್ಯಗಳು ಕೂಡ ತ್ವರಿತವಾಗಿ ಪ್ರಗತಿ ಕಾಣಬೇಕು ಅಧಿಕಾರಿಗಳಿಗೆ ತಿಳಿಸಿದರು.
ಹುಮನಾಬಾದ ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ್ ಮಾತನಾಡಿ, ʼಹುಮನಾಬಾದ, ಚಿಟ್ಟಗುಪ್ಪಾ, ಹಳ್ಳಿಖೇಡ (ಬಿ) ಪುರಸಭೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕುʼ ಎಂದು ಸಚಿವರಿಗೆ ಮನವಿ ಮಾಡಿದರು
ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ʼಹೊಸದಾಗಿ ಆಗಿರುವ ಮಹಾನಗರ ಪಾಲಿಕೆಗೆ ಬೀದರ ದಕ್ಷಿಣ ವಿಧಾನ ಸಭಾ ಕ್ಷೇತ್ರದ 8 ಗ್ರಾಮಗಳು ಸೇರ್ಪಡೆಯಾಗಿದ್ದು, ಅವುಗಳ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕುʼ ಎಂದು ಸಚಿವರಿಗೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಇದ್ದರೆ ಇರಬೇಕು ಇಂಥ ಸರ್ಕಾರಿ ಶಾಲೆ : ಹಳ್ಳಿ ಶಾಲೆಗೆ ಬಣ್ಣದ ಚಿತ್ತಾರ!
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಪೌರಾಡಳಿತ ಮತ್ತು ಹಜ್ ಸಚಿವರ ಆಪ್ತ ಕಾರ್ಯದರ್ಶಿ ಕೆ.ಮುರಳಿಧರ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಬೀದರ ನಗರಸಭೆ ಆಯುಕ್ತ ಶಿವರಾಜ ರಾಠೋಡ ಹಾಗೂ ಎಲ್ಲ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.