ಬೆಂಗಳೂರಿನಿಂದ ಕರ್ನಾಟಕದ ಉತ್ತರ ಭಾಗಕ್ಕೆ ಸಂಪರ್ಕ ಒದಗಿರುವ ತುಮಕೂರು ರಸ್ತೆಯಲ್ಲಿರುವ ಪೀಣ್ಯ ಮೇಲುರಸ್ತೆಯಲ್ಲಿ ಇದೀಗ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅದಾಗ್ಯೂ, ಪ್ರತಿ ಶುಕ್ರವಾರ ಮಾತ್ರ ಈ ಫ್ಲೈಓವರ್‌ನಲ್ಲಿ ಭಾರೀ ವಾಹನಕ್ಕೆ ಅವಕಾಶ ಇರುವುದಿಲ್ಲ ಎಂಬ ಷರತ್ತನ್ನೂ ವಿಧಿಸಲಾಗಿದೆ.
ಪೀಣ್ಯ ಮೇಲುರಸ್ತೆಯ ಎರಡು ಪಿಲ್ಲರ್‌ಗಳಲ್ಲಿ ದೋಷ ಕಾಣಿಸಿಕೊಂಡಿದ್ದ ಪರಿಣಾಮ 2 ವರ್ಷಗಳ ಹಿಂದೆ ಫ್ಲೈಓವರ್‌ನಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಬಳಿಕ, ಲಘು ವಾಹನಗಳ ಸಂಚಾರಕ್ಕೆ ಮಾತ್ರವೇ ಅವಕಾಶ ನೀಡಲಾಗಿತ್ತು. ಇದೀಗ, ಜುಲೈ 29ರ ಸೋಮವಾರದಿಂದ ಬಸ್, ಲಾರಿ, ಟ್ರಕ್ ಸೇರಿದಂತೆ ಭಾರೀ ವಾಹನಗಳ ಸಂಚಾರಕ್ಕೂ ಮೇಲುರಸ್ತೆಯಲ್ಲಿ ಅವಕಾಶ ನೀಡಲಾಗಿದೆ.
ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆ ನೀಡಿದ್ದು, ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಸೋಮವಾರದಿಂದ ಫ್ಲೈಓವರ್ ಮುಕ್ತವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರತಿ ಶುಕ್ರವಾರ ಹೊರತುಪಡಿಸಿ ಉಳಿದ 6 ದಿನಗಳ ಕಾಲ ಭಾರೀ ವಾಹನಗಳ ಸಂಚಾರಕ್ಕೆ ಮೇಲುರಸ್ತೆ ಮುಕ್ತವಾಗಿರಲಿದೆ. ಪ್ರತಿ ಶುಕ್ರವಾರ ಫ್ಲೈಓವರ್‌ನ ನಿರ್ವಹಣೆ ಮತ್ತು ಪರಿಶೀಲನೆ ನಡೆಯಲಿದ್ದು, ಅಂದು ಭಾರೀ ವಾಹನಗಳ ಸಂಚಾರಕ್ಕೆ ಫ್ಲೈಓವರ್‌ನಲ್ಲಿ ಅವಕಾಶ ಇರುವುದಿಲ್ಲ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.