ಟೊಮೆಟೊ ಬೆಲೆ ಇಳಿಕೆಯಿಂದ ಇತ್ತೀಚೆಗೆ ನಿರಾಳರಾಗಿದ್ದ ಜನ ಇದೀಗ, ಈರುಳ್ಳಿ ದರದ ಏರಿಕೆಯಿಂದ ಮತ್ತೆ ಕಂಗಾಲಾಗಿದ್ದಾರೆ. ಈ ವರ್ಷ ವಾಡಿಕೆಯಂತೆ ಮಳೆಯಿಲ್ಲದೆ, ಬರ ಎದುರಾಗಿದೆ. ಹೀಗಾಗಿ, ನಿತ್ಯ ಅಗತ್ಯವಿರುವ ತರಕಾರಿಗಳ ಬೆಲೆ ಏರಿಕೆ ಕಾಣುತ್ತಿದೆ. ಈಗಾಗಲೇ ಜನ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸುಸ್ತಾಗಿದ್ದಾರೆ. ಹಬ್ಬದ ಸಮಯದಲ್ಲಿ ಎಲ್ಲ ತರಕಾರಿಗಳ ದರ ಕೊಂಚ ಮಟ್ಟಿಗೆ ಏರಿಕೆ ಕಾಣುತ್ತದೆ. ಆದರೆ, ದೀಪಾವಳಿ ಹಬ್ಬಕ್ಕೂ ಮುನ್ನವೇ ಈರುಳ್ಳಿ ದರದ ಏರಿಕೆ ಜನರ ನಿದ್ದೆಗೆಡಿಸಿದೆ. ಇನ್ನು ಮೂರ್ನಾಲ್ಕು ದಿನದಲ್ಲಿ ಈರುಳ್ಳಿ ದರ ಶತಕ ಬಾರಿಸುವ ಸಾಧ್ಯತೆಯಿದೆ.
ರಾಜ್ಯಕ್ಕೆ ಬೇಡಿಕೆಯಷ್ಟು ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಇದರಿಂದ ಸಗಟು ಮತ್ತು ಚಿಲ್ಲರೆ ಮಾರಾಟ ದರ ಏರಿಕೆ ಕಾಣುತ್ತಿದೆ. ಈರುಳ್ಳಿ ದರ ಶೇ.57ಕ್ಕೂ ಹೆಚ್ಚು ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಕೆಜಿಗೆ ಗರಿಷ್ಠ ₹70 ರಂತೆ ಮಾರಾಟವಾಗುತ್ತಿದೆ. ಮುಂದೆಯೂ ಬೇಡಿಕೆಗೆ ಅನುಗುಣವಾಗಿ ಈರುಳ್ಳಿ ಪೂರೈಕೆಯಾಗದಿದ್ದರೆ, ಈ ದರ ಶತಕ ದಾಟಿ ಮುಂದೆ ಹೋಗುವ ಎಲ್ಲ ಸಾಧ್ಯತೆಯಿದೆ.
ಈ ವರ್ಷ ಭೀಕರ ಬರಗಾಲ ಎದುರಾಗಿದ್ದು, ವಾಡಿಕೆಯಂತೆ ರಾಜ್ಯದಲ್ಲಿ ಮಳೆ ಬಿದ್ದಿಲ್ಲ. ರಾಜ್ಯದಲ್ಲಿರುವ ಬಹುತೇಕ ಜಲಾಶಯಗಳು ನೀರಿಲ್ಲದೇ ಬರಿದಾಗಿವೆ. ಜುಲೈ ಆರಂಭಿಕ ದಿನಗಳಲ್ಲಿ ಜೋರಾಗಿ ಬಿದ್ದ ಮಳೆ ಕ್ರಮೇಣ ಕಡಿಮೆಯಾಯಿತು. ಮುಂಗಾರನ್ನು ನಂಬಿಕೊಂಡಿದ್ದ ರೈತರಿಗೆ ಮಳೆ ಸಂಪೂರ್ಣ ಕೈಕೊಟ್ಟಿತ್ತು. ಹಿಂಗಾರು ಮಳೆಯೂ ಕೂಡ ಸಕಾಲಕ್ಕೆ ಆಗಿಲ್ಲ.
ಸದ್ಯ ಎಲ್ಲ ಕೃಷಿ ಉತ್ಮನ್ನಗಳ ಬೆಲೆಯೂ ಗಗನಕ್ಕೇರುವ ಲಕ್ಷಣವಿದೆ. ಅಡುಗೆ ಮನೆಯಲ್ಲಿ ಹೆಚ್ಚಾಗಿ ರಾರಾಜಿಸುವ ಟೊಮೆಟೊ ಮತ್ತು ಈರುಳ್ಳಿ ಒಂದಾಂದ ಮೇಲೊಂದರಂತೆ ದರದಲ್ಲಿ ಏರಿಕೆ ಕಾಣುತ್ತಿವೆ. ಕೆಲವು ತಿಂಗಳ ಹಿಂದೆ ಟೊಮೆಟೊ ಕೆಜಿಗೆ ₹200 ತಲುಪಿತ್ತು. ಆ ವೇಳೆ, ಗ್ರಾಹಕರು ಟೊಮೆಟೊವನ್ನು ಗ್ರಾಂ ಲೆಕ್ಕದಲ್ಲಿ ಖರೀದಿ ಮಾಡುತ್ತಿದ್ದರು. ಟೊಮೆಟೊ ದರ ಈಗ ಸಂಪೂರ್ಣವಾಗಿ ಇಳಿಕೆಯಾಗಿದೆ. ಸದ್ಯ ಈಗಲಾದರೂ ಟೊಮೆಟೊ ದರ ಇಳಿಯಿತಲ್ಲ ಎಂದು ಜನರು ನಿಟ್ಟುಸಿರು ಬಿಡುವ ಹೊತ್ತಿಗೆ ಈರುಳ್ಳಿ ದರ ಏರಿಕೆ ಕಾಣುವತ್ತ ದಾಪುಗಾಲು ಇಡುತ್ತಿದೆ.
ಈರುಳ್ಳಿಯನ್ನು ವರ್ಷದ ಎಲ್ಲ ಕಾಲಗಳಲ್ಲಿಯೂ ಬೆಳೆಯಬಹುದು. ಬೀಜ ಅಥವಾ ಗೆಡ್ಡೆ ಬಿತ್ತನೆ ಮಾಡಲು ಪ್ರಾರಂಭ ಮಾಡಲು ಜೂನ್-ಜುಲೈ, ಸೆಪ್ಟೆಂಬರ್-ಅಕ್ಟೋಬರ್ ಮತ್ತು ಜನವರಿ-ಫೆಬ್ರವರಿ ತಿಂಗಳುಗಳು ಉತ್ತಮ. ಸಾಮಾನ್ಯವಾಗಿ ಈರುಳ್ಳಿಯನ್ನು ಎರೆ ಹೊಲದಲ್ಲಿ ಬೆಳೆಯಲಾಗುತ್ತದೆ. ಹವಾಮಾನ ಮತ್ತು ಮಣ್ಣಿನ ಗುಣದ ಅನುಸಾರವಾಗಿ 4 ರಿಂದ 6 ದಿವಸಗಳಿಗೊಮ್ಮೆ ನೀರು ಉಣಿಸಬೇಕು. ಸೂರ್ಯನ ಬೆಳಕು, ನೀರು ಮತ್ತು ಉಷ್ಣಾಂಶದಲ್ಲಿ ಏರಿಳಿತವಾದಲ್ಲಿ ಸಂಪೂರ್ಣ ಬೆಳೆ ನಾಶವಾಗುತ್ತದೆ. ಈ ಬಾರಿ ಸಕಾಲಕ್ಕೆ ಮಳೆ ಬಾರದ ಕಾರಣ ಅನೇಕ ರೈತರು ಈರುಳ್ಳಿ ಬೆಳೆಯುವ ಸಾಹಸ ಮಾಡಿಲ್ಲ. ಕಳೆದ ಬಾರಿ ಈರುಳ್ಳಿ ರೈತರನ್ನು ಕೈಹಿಡಿದಿಲ್ಲ. ಹೀಗಾಗಿ ದಾಸ್ತಾನು ಹೆಚ್ಚಿಲ್ಲ.
ಈ ವರ್ಷ ಕಡಿಮೆ ಪ್ರಮಾಣದಲ್ಲಿಯಾದರೂ ಈರುಳ್ಳಿ ಬಿತ್ತನೆ ಆಗಿತ್ತು. ಸಮಯಕ್ಕೆ ಸರಿಯಾಗಿ ಮಳೆ ಆಗದ ಕಾರಣ ನಾಟಿ ಮಾಡಿದ ಕೆಲ ಕಡೆ ಬೀಜ ಮೊಳಕೆಯೊಡೆದಿಲ್ಲ. ಹೀಗಾಗಿ, ಇಳುವರಿಯಲ್ಲಿ ಕುಸಿತ ಕಂಡಿದೆ. ಇದು ಬೆಲೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಜೊತೆಗೆ ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಮಹಾರಾಷ್ಟ್ರದ ನಾಸಿಕ್, ಸೋಲಾಪುರದಿಂದ ಈರುಳ್ಳಿ ಬರುತ್ತದೆ. ಆದರೆ, ಈ ಬಾರಿ ಅಲ್ಲಿಂದ ಬೇಡಿಕೆಯಷ್ಟು ಈರುಳ್ಳಿ ಬಂದಿಲ್ಲ.
ಉತ್ತರ ಕರ್ನಾಟಕದಲ್ಲಿ ಮುಖ್ಯವಾಗಿ ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ, ಧಾರವಾಡ, ಗದಗ, ಬೆಳಗಾವಿ, ಚಳ್ಳಕೆರೆ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಈರುಳ್ಳಿಯನ್ನು ಬೆಳೆಯುತ್ತಾರೆ. ಜೊತೆಗೆ ದಕ್ಷಿಣದ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಈರುಳ್ಳಿ ಸರಬರಾಜು ಆಗುತ್ತದೆ.
2019ರಲ್ಲಿ ಕ್ವಿಂಟಲ್ ಈರುಳ್ಳಿ ಬೆಲೆ ಬರೋಬ್ಬರಿ ₹15 ಸಾವಿರಕ್ಕೆ ತಲುಪಿತ್ತು. ಮುಂದಿನ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ಈರುಳ್ಳಿ ಮಾರುಕಟ್ಟೆಗೆ ಬಾರದಿದ್ದರೆ, ಈರುಳ್ಳಿ ದರ ಕೆಜಿಗೆ ಶತಕ ಅಲ್ಲದೇ, ಶತಕದ ಆಚೆಗೂ ದಾಟಲಿದೆ ಎಂದು ಸಗಟು ವ್ಯಾಪಾರಸ್ಥರು ಹೇಳಿದ್ದಾರೆ.
ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಎಲ್ಲ ತರಕಾರಿ, ಹೂ, ಹಣ್ಣುಗಳ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿತ್ತು. ಹಬ್ಬ ಮುಗಿದರೂ ಬೆಲೆಯಲ್ಲಿ ಇಳಿಕೆ ಕಾಣದ ಈರುಳ್ಳಿ ಕಳೆದ 10 ದಿನಗಳಿಂದಲೂ ಬೆಲೆ ಏರಿಕೆ ಕಾಣುತ್ತಲೇ ಇದೆ. ದೊಡ್ಡ ಗಾತ್ರದ ಈರುಳ್ಳಿಯ ಸಗಟು ದರವು ಶುಕ್ರವಾರ ಕ್ವಿಂಟಲ್ಗೆ ₹ 5,800 ರಿಂದ ₹6 ಸಾವಿರ ಇದೆ.
ಕಳೆದ ತಿಂಗಳು ಬೆಂಗಳೂರಿನ ಯಶವಂತಪುರ ಎಪಿಎಂಸಿಗೆ ದಿನಕ್ಕೆ ಸರಾಸರಿ 70–75 ಸಾವಿರ ಚೀಲ ಈರುಳ್ಳಿ ಬರುತ್ತಿತ್ತು. ಆದರೆ, ಈ ತಿಂಗಳು ಸರಾಸರಿ 40–50 ಸಾವಿರ ಚೀಲ ಮಾತ್ರ ಬರುತ್ತಿದೆ ಎಂದು ಸಗಟು ವ್ಯಾಪಾರಿಗಳು ಹೇಳುತ್ತಾರೆ.
ಈರುಳ್ಳಿ ದರ ಏರಿಕೆಗೆ ಕಾರಣಗಳು
- ಮಳೆಯ ಕೊರತೆ
- ಹಲವೆಡೆ ತಗ್ಗಿದ ಇಳುವರಿ
- ಕೆಲವು ಭಾಗಗಳಲ್ಲಿ ಬೆಳೆ ನಾಶ
- ಬೇಡಿಕೆಗೆ ತಕ್ಕಂತೆ ಪೂರೈಕೆ ಆಗದ ಈರುಳ್ಳಿ
ರಾಜ್ಯದ ನಾನಾ ಕಡೆ ಈರುಳ್ಳಿ ದರ ಹೀಗಿದೆ:
- ಉಡುಪಿ ಜಿಲ್ಲೆಯಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟ ದರವು ಶುಕ್ರವಾರ ಕೆ.ಜಿಗೆ ₹70ಕ್ಕೆ ಇದೆ.
- ಮಂಗಳೂರಲ್ಲಿ ಚಿಲ್ಲರೆ ದರ ಕೆ.ಜಿಗೆ ₹60ರಿಂದ ₹65ರವರೆಗೆ ಮಾರಾಟ ಆಗುತ್ತಿದೆ.
- ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಗಟು ದರ ಕ್ವಿಂಟಲ್ಗೆ ದಪ್ಪ ಈರುಳ್ಳಿ ₹4,000 ಇದೆ.
- ಧಾರವಾಡ, ವಿಜಯಪುರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಈರುಳ್ಳಿ ದರ ಕೆಜಿಗೆ ₹ 60 ರಿಂದ ₹ 70ಕ್ಕೆ ಏರಿಕೆಯಾಗಿದೆ.
- ಚಿತ್ರದುರ್ಗ ಜಿಲ್ಲೆಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಈರುಳ್ಳಿಗೆ ಶುಕ್ರವಾರ ₹60 ದರ ಇತ್ತು.
- ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಸರಾಸರಿ ಒಂದು ಕೆ.ಜಿಗೆ ₹ 60-80 ಮಾರಾಟವಾಗುತ್ತಿದೆ.
ವ್ಯಾಪಾರಸ್ಥರು ಏನು ಹೇಳುತ್ತಾರೆ?
“ಈರುಳ್ಳಿ ಬೇಡಿಕೆ ಹೆಚ್ಚಾಗಿದೆ. ಆದರೆ, ಬೇಡಿಕೆಯನ್ನು ಪೂರ್ತಿ ಮಾಡುವಷ್ಟು ಈರುಳ್ಳಿ ನಮ್ಮ ಬಳಿ ಇಲ್ಲ. ಒಂದೊಂದು ತಳಿಯ ಈರುಳ್ಳಿ ಬೆಲೆ ಒಂದೊಂದು ರೀತಿ ಇದೆ. ಸದ್ಯ ನಮ್ಮ ಬಳಿ ಇರುವ ಮಧ್ಯಮ ಗಾತ್ರದ ಈರುಳ್ಳಿ ಬೆಲೆ ಕೆಜಿಗೆ ₹65 ನಂತೆ ಮಾರಾಟವಾಗುತ್ತಿದೆ. ರಾಜಿ ಈರುಳ್ಳಿ ಕೆಜಿಗೆ ₹130ನಂತೆ ಮಾರಾಟವಾಗುತ್ತಿದೆ. ಮಾರುಕಟ್ಟೆಗಳಲ್ಲಿ ಈರುಳ್ಳಿ ಸಿಗುತ್ತಿಲ್ಲ. ಹೆಚ್ಚಿನ ದರ ಕೊಟ್ಟು ಈರುಳ್ಳಿ ತರಬೇಕಾಗಿದೆ. ನಮ್ಮ ಕೈಮೀರಿ ಬಂಡವಾಳ ಹಾಕಿ ಈರುಳ್ಳಿ ತರಬೇಕೆಂದರೆ ಅದು ಅಸಾಧ್ಯ” ಎಂದು ಪ್ರಕಾಶನಗರದ ತರಕಾರಿ ಅಂಗಡಿ ಮಾಲೀಕ ಯೂಸೂಫ್ ಈ ದಿನ.ಕಾಮ್ಗೆ ಹೇಳಿದರು.
“ಬುಧವಾರ ಮತ್ತು ಗುರುವಾರ ಈರುಳ್ಳಿ ದರ ಕೆಜಿಗೆ ₹45 ಇತ್ತು. ಇದೀಗ, ಕೆಜಿ ₹65-₹80ಕ್ಕೆ ಮಾರಾಟವಾಗುತ್ತಿದೆ. ಈ ದರ ಮುಂದಿನ ದಿನಗಳಲ್ಲಿ ಕೆಜಿಗೆ ₹100 ತಲುಪಬಹುದು. ಏಕೆಂದರೆ, ಬೇಡಿಕೆಯಷ್ಟು ಈರುಳ್ಳಿ ಸದ್ಯ ಮಾರುಕಟ್ಟೆಗೆ ಬಂದಿಲ್ಲ. ಈ ದರ ಡಿಸೆಂಬರ್ ಮುಗಿಯುವವರೆಗೂ ಇರಬಹುದು. ಈ ವರ್ಷ ಹೆಚ್ಚಿನ ರೈತರು ಬೆಳೆ ಬೆಳೆದಿಲ್ಲ. ಹವಾಮಾನದ ವೈಪರೀತ್ಯದಿಂದಾಗಿ ಸರಿಯಾದ ಸಮಯಕ್ಕೆ ಇಳುವರಿ ಬಂದಿಲ್ಲ” ಎಂದು ಈ ದಿನ.ಕಾಮ್ಗೆ ಪ್ರಕಾಶ್ನಗರದ ಮತ್ತೊಬ್ಬ ತರಕಾರಿ ವ್ಯಾಪಾರಸ್ಥರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಬಂದ್ | ಫ್ರೀಡಂ ಪಾರ್ಕ್ನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಆಟೋ, ಕ್ಯಾಬ್ ಚಾಲಕರು
‘ಈ ದಿನ’ದೊಂದಿಗೆ ಗ್ರಾಹಕರ ಮಾತು
“ಈ ವರ್ಷ ಮಳೆಯ ಕಾರಣದಿಂದ ಬೇಡಿಕೆಯಷ್ಟು ಈರುಳ್ಳಿ ಬಂದಿಲ್ಲ. ಈ ಹಿಂದೆ ಟೊಮೆಟೊ ದರ ₹200 ತಲುಪಿತ್ತು. ಇದೀಗ, ಕೆಜಿಗೆ ₹16 ಇದೆ. ಅದೇ ರೀತಿ ನಿನ್ನೆ ನಾನು ಈರುಳ್ಳಿ ಖರೀದಿ ಮಾಡಿದಾಗ ಕೆಜಿಗೆ ₹45 ಇತ್ತು. ಇವತ್ತು ₹65 ಇದೆ. ಹವಾಮಾನ ವೈಪರೀತ್ಯದಿಂದ ಹೀಗಾದಾಗ ಯಾರನ್ನೂ ದೂರಲು ಆಗುವುದಿಲ್ಲ” ಎಂದು ಈ ದಿನ.ಕಾಮ್ಗೆ ಗ್ರಾಹಕ ಮೊಹಮ್ಮದ್ ಹೇಳಿದರು.
ಮತ್ತೋರ್ವ ಗ್ರಾಹಕಿ ಅನ್ನಪೂರ್ಣ ಈ ದಿನ.ಕಾಮ್ ಜತೆಗೆ ಮಾತನಾಡಿ, “ದಸರಾ ಹಬ್ಬದ ದಿನ ತರಕಾರಿ ಬೆಲೆಗಳೆಲ್ಲ ಗಗನಕ್ಕೇರಿದ್ದವು. ಈಗ ಕೆಲ ತರಕಾರಿಗಳ ಬೆಲೆ ಕೊಂಚ ಇಳಿಕೆ ಕಂಡಿದೆ. ಆದರೆ, ಈರುಳ್ಳಿ ದರ ಏರುತ್ತಲೇ ಇದೆ. ಇದರಿಂದ ಗ್ರಾಹಕರು ಪರಿತಪಿಸುವಂತಾಗಿದೆ. ಈ ಹಿಂದೆ, ಟೊಮೆಟೊ ದರ ಹೆಚ್ಚಾದಾಗ ಟೊಮೆಟೊ ಕೊಳ್ಳುವುದನ್ನೇ ಬಿಟ್ಟಿದ್ದೆವು. ಇದೀಗ ಈರುಳ್ಳಿ ಏರಿಕೆ ಕಾಣುತ್ತಿದೆ. ಈಗಲೇ ಹೆಚ್ಚಿನ ಈರುಳ್ಳಿ ಖರೀದಿಸಿ ಇಟ್ಟುಕ್ಕೊಳ್ಳುತ್ತೇನೆ” ಎಂದರು.