ದಕ್ಷಿಣ ಕನ್ನಡ ಜಿಲ್ಲೆಯ ವಾಮಂಜೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಮುಸ್ಲಿಂ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆ ಮೂಲಕ ಈ ಪ್ರಕರಣದಲ್ಲಿ ಬಂಧಿತರಾದ ಒಟ್ಟು ಆರೋಪಿಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಬಂಧಿತ ಆರೋಪಿಗಳನ್ನು ಯತಿರಾಜ್, ಸಚಿನ್, ಅನಿಲ್, ಸುಶಾಂತ್ ಮತ್ತು ಆದರ್ಶ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಈ ಹಿಂದೆ ಇದೇ ಪ್ರಕರಣದಲ್ಲಿ 15 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಐವರನ್ನು ಬಂಧಿಸುವ ಮೂಲಕ ತನಿಖೆಗೆ ಮತ್ತಷ್ಟು ಬಲ ಬಂದಿದೆ ಎಂದಿದ್ದಾರೆ.

ಗುಂಪು ಹತ್ಯೆಯಾದ ವ್ಯಕ್ತಿಯನ್ನು ಕೇರಳದ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಳ್ಳಿ ಗ್ರಾಮದ ನಿವಾಸಿ ಮುಹಮ್ಮದ್ ಅಶ್ರಫ್(38) ಎಂದು ಗುರುತಿಸಲಾಗಿದೆ.
ಮಾಧ್ಯಮಗಳಲ್ಲಿ ವಿಚಾರ ತಿಳಿಯುತ್ತಿದ್ದಂತೆಯೇ ಮೃತನ ಗುರುತನ್ನು ಆತನ ಕುಟುಂಬಸ್ಥರು ಪತ್ತೆ ಹಚ್ಚಿದ್ದಾರೆ. ಮೃತ ವ್ಯಕ್ತಿಯು ಸಣ್ಣ ಪ್ರಮಾಣದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಈ ಕುರಿತು ಮಾಹಿತಿ ನೀಡಿದ ಮೃತರ ತಮ್ಮ ಅಬ್ದುಲ್ ಜಬ್ಬಾರ್(36) ಅವರು, “ಘಟನೆಯ ಬಗ್ಗೆ ಪೊಲೀಸರು ನಮಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ನಾವು ಮಂಗಳೂರಿಗೆ ಬಂದಿದ್ದೇವೆ. ಮೃತದೇಹವು ನನ್ನ ಅಣ್ಣನದ್ದೇ ಆಗಿರುತ್ತದೆ. ನನ್ನ ಅಣ್ಣನಿಗೆ ನಿರ್ದಿಷ್ಟವಾದ ಕೆಲಸ ಇರಲಿಲ್ಲ. ಅವರು ಊರೂರು ತಿರುಗುತ್ತಾ ಸಿಕ್ಕಿದ ಕೆಲಸ ಮಾಡುತ್ತಿದ್ದರು. ಅವರು ಎಲ್ಲಿ ಇರುತ್ತಿದ್ದರು ಎಂಬ ಸ್ಪಷ್ಟ ಮಾಹಿತಿ ನಮಗೆ ಇರಲಿಲ್ಲ. ಕೆಲವೊಮ್ಮೆ ಅವರು ಮನೆಗೆ ಬರುತ್ತಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಅಮ್ಮನನ್ನು ಭೇಟಿಯಾಗಲು ಊರಿಗೆ ಬಂದು ಹೋಗಿದ್ದರು. ಆಮೇಲೆ ಎಲ್ಲಿದ್ದರು ಎಂಬ ಮಾಹಿತಿ ನಮಗೆ ಇರಲಿಲ್ಲ” ಎಂದು ತಿಳಿಸಿದ್ದಾರೆ.
“ಮೃತದೇಹವನ್ನು ನಗರದ ಕೇಂದ್ರ ಜುಮಾ ಮಸೀದಿ ಝೀನತ್ ಭಕ್ಷ್ ಮಸೀದಿಯಲ್ಲಿ ಸ್ನಾನ ಮಾಡಿಸಿ, ಬಳಿಕ ಸ್ವಗ್ರಾಮವಾದ ವಯನಾಡಿಗೆ ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಪೊಲೀಸ್ ಬಂದೋಬಸ್ತಿನಲ್ಲಿ ಕೇರಳ-ಕರ್ನಾಟಕದ ಗಡಿ ಭಾಗವಾದ ತಲಪಾಡಿಯ ತನಕ ಕೊಂಡೊಯ್ಯಲಾಗಿತ್ತು. ಆ ಬಳಿಕ ಆ್ಯಂಬುಲೆನ್ಸ್‌ನಲ್ಲಿ ವಯನಾಡ್‌ಗೆ ಕೊಂಡೊಯ್ಯಲಾಗಿದೆ” ಎಂದು ಈ ಪ್ರಕರಣ ಬೆಳಕಿಗೆ ತರಲು ಶ್ರಮಿಸಿದ್ದ ದ.ಕ. ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಈದಿನ ಡಾಟ್ ಕಾಮ್‌ಗೆ ತಿಳಿಸಿದ್ದಾರೆ.

ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರ ಪ್ರಕ್ರಿಯೆಯ ವೇಳೆ ಕಾಂಗ್ರೆಸ್‌ನ ಮುಖಂಡರಾದ ಶಾಹುಲ್ ಹಮೀದ್ ಕೆ.ಕೆ.
ಸುಹೈಲ್ ಕಂದಕ್, ಮಾಜಿ ಮೇಯರ್ ಅಶ್ರಫ್, ವಹಾಬ್ ಕುದ್ರೋಳಿ, ಅನ್ವರ್ ಸಾದತ್ ಬಜತ್ತೂರು,ಅನಸ್ ವಿಟ್ಲ, ಜಲೀಲ್ ಕೃಷ್ಣಾಪುರ, ಮುನೀರ್ ಕಾಟಿಪಳ್ಳ, ಇಮ್ತಿಯಾಝ್ ಬಿ.ಕೆ, ರಿಯಾಝ್ ಕಡಂಬು, ಸುನಿಲ್ ಬಿಜಿಲಕೇರಿ, ಸೋಶಿಯಲ್ ಫಾರೂಕ್, ಲಾರೆನ್ಸ್ ಡಿಸೋಜ, ಮುಹಮ್ಮದ್ ಬಪ್ಪಳಿಗೆ, ಸಂತೋಷ್ ಬಜಾಲ್, ಯು ಟಿ ತೌಸೀಫ್, ಶಫೀಕ್ ಅರಫಾ, ಅನಸ್, ಇಸ್ಮಾಯೀಲ್, ಕೇರಳದ ಕಾಂಗ್ರೆಸ್ ಮುಖಂಡರಾದ ಹರ್ಷದ್ ವರ್ಕಾಡಿ ಸೇರಿದಂತೆ ಇನ್ನಿತರ ಹಲವು ನಾಯಕರು ಉಪಸ್ಥಿತರಿದ್ದರು.
ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು, ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.