‘ಮನುಷ್ಯ ಬದುಕಿನ ತಾತ್ವಿಕತೆಗೆ ‘ಬದುಕಲಾರದ ಬಲವಂತರು’ ಕೃತಿ ಮುಖಾಮುಖಿ ಆಗುತ್ತದೆ. ಯಕಃಶ್ಚಿತ ಕಾರಣಕ್ಕೂ ದಾರುಣಗಳು ನಡೆದು ಹೋಗುತ್ತವೆ ಎಂಬುದನ್ನು ಕಾದಂಬರಿಯ ಲೇಖಕಿ ಎಂ.ಪಿ.ಉಮಾದೇವಿ ತೋರಿಸಿದ್ದಾರೆ’ ಎಂದು ಧಾರವಾಡದ ಪ್ರಾಧ್ಯಾಪಕಿ, ಲೇಖಕಿ ಪ್ರೊ.ವಿನಯಾ ಒಕ್ಕುಂದ ತಿಳಿಸಿದರು.
ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಅಹರ್ನಿಶಿ ಪ್ರಕಾಶನ ಸಂಸ್ಥೆಯವರು ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ-ಮಾತುಕತೆ-ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
‘ವೈದ್ಯರೂ ಆಗಿರುವ ಲೇಖಕಿ ಮುಂದೆ ದೈವಿಕ ಅನುಸಂಧಾನದ ಮಾರ್ಗ ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದೇ ಬಾರಿ ಹಲವು ಬದುಕು ಬದುಕಿದ ಅವರ ಅನುಭವ ದ್ರವ್ಯ ಈ ಕೃತಿ’ ಎಂದು ತಿಳಿಸಿದರು.

‘ಕಾದಂಬರಿ ಎರಡು ಕುಟುಂಬದ ಕಥೆ. ಊರು, ದೇಶ, ಕಾಲದ ಹಂಗನ್ನು ಕಳಚಿಕೊಳ್ಳುತ್ತಾ ಸಾಗುತ್ತದೆ. ದಂಗೆದ್ದು ಹೋಗುವ ಸ್ತಬ್ಧಗೊಳಿಸುವ ಅನುಭವ ಈ ಕಾದಂಬರಿಯಲ್ಲಿದೆ. ಸ್ತ್ರೀವಾದ ಚಿಂತನೆಯ ಏರುಗಚ್ಚಿನ ಸಂದರ್ಭದಲ್ಲಿ ದಮನಿತ ವ್ಯವಸ್ಥೆಯ ಆಲೋಚನಾ ಕ್ರಮಕ್ಕೆ ಕೃತಿ ತನ್ನನ್ನು ಒಡ್ಡಿಕೊಂಡಿದೆ. ಹೆಣ್ಣಿನ ಶೋಷಣೆಯ ಎಲ್ಲ ನೆಲೆಯ ಅನಾವರಣದ ಕಾಲದ ಹಲವು ಪ್ರಶ್ನೆಗಳನ್ನು ಉಮಾದೇವಿ ಅವರ ಕೃತಿಗಳು ಓದುಗರ ಮುಂದಿಡುತ್ತವೆ’ ಎಂದು ತಿಳಿಸಿದರು.
“ಈ ನಾಡಿನಲ್ಲಿ ಚಳವಳಿಗಳು ಉತ್ತುಂಗದಲ್ಲಿದ್ದಾಗ ಬದುಕಲಾರದ ಬಲವಂತರು ಕಾದಂಬರಿ ರಚಿಸಲಾಗಿದೆ. ಇದು ಅತ್ಯಂತ ದಮನಕಾರಿ ವ್ಯವಸ್ಥೆಯನ್ನು ಒಳಗೊಂಡಿದೆ. ಸ್ತ್ರೀವಾದಿ ಚಿಂತನೆಯಲ್ಲಿ ಕಾದಂಬರಿಯನ್ನು ನೋಡುವ ಕ್ರಮ ಇದಾಗಿದ್ದು, ಸ್ವಾತಂತ್ರ್ಯ ಮತ್ತು ಸಮಾನತೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಸಲ್ಲ ಎಂಬುದನ್ನು ಕಾದಂಬರಿ ಮೂಲಕ ಲೇಖಕರು ತೋರಿಸಿಕೊಟ್ಟಿದ್ದಾರೆ. ಸಿದ್ಧ ಮಾನದಂಡ ಮತ್ತು ಪೂರ್ವಕಲ್ಪಿತ ನಿರ್ಧಾರಗಳನ್ನು ವಿರೋಧ ಮಾಡುತ್ತ ಎರಡು ಕುಟುಂಬಗಳ ನಡುವೆ ನಡೆಯುವ ಕಥೆಯನ್ನು ತುಂಬ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಆಧುನಿಕ ವಿದ್ಯಮಾನಗಳು ಬಂದಾಗ ಆಧುನಿಕತೆ ಕೆಲವೊಮ್ಮೆ ನಮ್ಮೊಳಗಿರುವ ಬಿರುಕುಗಳಿಗೆ ಈ ಕಾದಂಬರಿ ಮತ್ತಷ್ಟು ನೀರೆರೆಯಿತು ಎಂಬ ಭಾವನೆಯನ್ನು ಸೃಷ್ಟಿ ಮಾಡುತ್ತದೆ” ಎಂದು ಪ್ರೊ.ವಿನಯಾ ಒಕ್ಕುಂದ ಅಭಿಪ್ರಾಯಿಸಿದರು.

ಕೃತಿ ಪುರಪ್ಪೆಮನೆಯವರ ‘ಯಕ್ಷಗಾನ ಮೀಮಾಂಸೆ ವೃತ್ತಿಪರ ಪ್ರೇಕ್ಷಕಿಯ ಟಿಪ್ಪಣಿಗಳು’ ಪುಸ್ತಕದ ಕುರಿತು ಪ್ರೊ. ಮೇಟಿ ಮಲ್ಲಿಕಾರ್ಜುನ ಮಾತನಾಡಿದರು. ‘ಟಿಪ್ಪಣಿಗಳಲ್ಲಿ ಒಬ್ಬ ಹೆಣ್ಣುಮಗಳು ಪಾರಂಪರಿಕ ಆಟ ಕಟ್ಟುವ ಬಗೆಯಲ್ಲಿ ಎದುರಾಗುವ ಸವಾಲು ಗುರುತಿಸುವಿಕೆ, ವಸ್ತುನಿಷ್ಠತೆ ಕಾಣುತ್ತೇವೆ. ಆಸಕ್ತಿಕರವಾಗಿ, ಆಕರ್ಷಣೀಯವಾಗಿ ಕಂಡರೂ ಗ್ರಹಿಸುತ್ತಾ ಹೋದ ಹಾಗೆ ಅಸಮಾನತೆ, ಅದರ ರೂಪತೆಗಳು ಕಾಣುತ್ತವೆ’ ಎಂದರು.
‘ಹೊರಮಯ ಜಗತ್ತಿನ ಚಹರೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ನಮ್ಮ ಆಂತರ್ಯದಲ್ಲಿ, ಚಿಂತನೆಯಲ್ಲಿ ಏನೂ ಬದಲಾವಣೆ ಆಗಿಲ್ಲ. ಗಾಢವಾದ, ಪರಿಪೂರ್ಣ ತಿಳಿವಳಿಕೆ ನೀಡುವುದು ಮೀಮಾಂಸೆ. ಯಕ್ಷಗಾನದ ಎಲ್ಲ ಸಂಗತಿಗಳು, ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸರಿಯಾಗಿ ಅರ್ಥ ಸಾಧ್ಯ’ ಎಂದು ತಿಳಿಸಿದರು.

“ಎನ್.ಕೆ.ರಾಜಲಕ್ಷ್ಮೀ ಅನುವಾದಿಸಿರುವ ಸಮ್ಮತಿ–ಭಯಪೂರಿತ ಅಸಮರೂಪತೆ ಪುಸ್ತಕದಲ್ಲಿ ಲಿಂಗತ್ವ ಸಂಬಂಧದಲ್ಲಿನ ಅಸಮರೂಪತೆ ಉಂಟು ಮಾಡುವ ಸಮಸ್ಯೆ ಬಗ್ಗೆ ಚರ್ಚೆ ಇದೆ. ಅಸಮರೂಪತೆ ಹಾಗೂ ಅಸಮಾನತೆ ಬೇರೆ ಬೇರೆ ಅರ್ಥವನ್ನು ಹೊಂದಿದ್ದು ಅದನ್ನು ನಾವು ಗಮನಿಸಬೇಕು” ಎಂದು ಪ್ರೊ. ಮೇಟಿ ಮಲ್ಲಿಕಾರ್ಜುನ ತಿಳಿಸಿದರು.
ಇದನ್ನು ಓದಿದ್ದೀರಾ? ಹಸುವಿನ ಹರಿದ ಕೆಚ್ಚಲಿನಿಂದ ದ್ವೇಷದ ವಿಷ ಹಿಂಡಲು ಹೊರಟವರು…
ಅನುವಾದಕಿ ಹಾಗೂ ಮಂಗಳೂರು ವಿವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಎನ್.ಕೆ.ರಾಜಲಕ್ಷ್ಮಿ ಹಾಗೂ ಕೃತಿ ಪುರಪ್ಪೆಮನೆ ಮಾತನಾಡಿ, ತಮ್ಮ ಪುಸ್ತಕಗಳ ಆಳ ಅಗಲವೇನು, ಪ್ರಸ್ತುತತೆ ಏನು, ಸಮಾಜದೊಡನೆ ತಮ್ಮ ಪುಸ್ತಕಗಳ ನಂಟು ಏನು ಎಂದು ತಿಳಿಸಿದರು. ರೇಖಾಂಬಾ ವಂದನಾರ್ಪಣೆ ಮಾಡಿದರು. ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ನಿರ್ವಹಿಸಿದರು.

