ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜನವರಿ 20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ‘ಬೆಂಗಳೂರಿನ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ’ ಪ್ರತಿಭಟನೆ ನಡೆಸಲಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಹಿಂದ ರೈತ ಘಟಕದ ರಾಜ್ಯಾಧ್ಯಕ್ಷ ಎ.ಎಂ. ಲಿಂಗರಾಜು, “ಕಳೆದ 2024 ಡಿಸೆಂಬರ್ 18 ರಂದು ಸಂಸತ್ತಿನಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ಭಾರತ ಸಂವಿಧಾನದ ಜನಕ, ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನವಾಗಿ ‘ಅಂಬೇಡ್ಕರ್, ಅಂಬೇಡ್ಕರ್ ಅಂಬೇಡ್ಕರ್’ ಎಂದು ಹೇಳುವುದು ನಿಮಗೆ ವ್ಯಸನ ಆಗಿಬಿಟ್ಟಿದೆ, ಆ ಹೆಸರು ಹೇಳುವುದನ್ನ ಬಿಟ್ಟು ದೇವರ ಹೆಸರು ಹೇಳಿದ್ದರೆ, ನೇರವಾಗಿ ಸ್ವರ್ಗಕ್ಕೆ ದಾರಿ ಪ್ರಾಪ್ತಿಯಾಗುತ್ತಿತ್ತು’ ಎಂದು ಹೇಳಿಕೆ ನೀಡಿ ಡಾ. ಅಂಬೇಡ್ಕರ್ ಅವರನ್ನು ಮೊದಲ ಬಾರಿಗೆ ಸಂಸತ್ತಿನ ಅಧಿವೇಶನದಲ್ಲಿ ಅಪಮಾನಿಸುವ ಮೂಲಕ ಕೋಟ್ಯಾಂತರ ಅಂಬೇಡ್ಕರ್ ಅಭಿಮಾನಿ ಮತ್ತು ಅನುಯಾಯಿಗಳ ಮನಸ್ಸಿಗೆ ಆಘಾತವನ್ನು ಉಂಟು ಮಾಡಿದ್ದಾರೆ” ಎಂದು ಹೇಳಿದ್ದಾರೆ.
“ಈ ರೀತಿ ಅಂಬೇಡ್ಕರ್ ಅವರನ್ನು ಅಪಮಾನಿಸುವುದು ಆರ್‌ಎಸ್‌ಎಸ್ ಮತ್ತು ಬಿಜೆಪಿ ಒಂದು ವ್ಯವಸ್ಥಿತ ಸಂಚಿನ ರೀತಿಯಂತೆ ಕಂಡುಬಂದಿದೆ. ಬಾಬಾ ಸಾಹೇಬರು ರಚಿಸಿದ ಸಂವಿಧಾನವನ್ನ ಬದಲಾವಣೆ ಮಾಡುತ್ತೇವೆ. ಸಂವಿಧಾನವನ್ನು ತೆಗೆದುಬಿಡುತ್ತೇವೆ. ಈ ದೇಶದ ಸಂವಿಧಾನ ಸರಿಯಿಲ್ಲ ಸೇರಿದಂತೆ ಹಲವಾರು ಕುಚೋದ್ಯದ ಮಾತುಗಳನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಖಂಡರು ಹೇಳಿದ್ದಾರೆ. ಇದನ್ನು ನಾವು ಸುದ್ದಿ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಕಂಡಿದ್ದೇವೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಿಂಡೆನ್ ಬರ್ಗ್ ರಿಸರ್ಚ್ ಸಂಸ್ಥೆಯನ್ನು ಸ್ಥಗಿತಗೊಳಿಸಿದ ಸ್ಥಾಪಕ ನಾಥನ್ ಆಂಡರ್ಸನ್
“ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಅವರು ರಚಿಸಿದ ಭಾರತ ಸಂವಿಧಾನವನ್ನ ಹೀಯಾಳಿಸಿ ಅಪಮಾನಿಸುವುದರ ಹಿಂದೆ ದಲಿತ ಸಮುದಾಯಕ್ಕೆ ನೋವು ನೀಡಿ, ಸ್ವಾಭಿಮಾನವನ್ನು ಕೆಣಕುವ ಉದ್ದೇಶ ಇಟ್ಟುಕೊಂಡಿದ್ದಾರೆ. ಭಾರತ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಸತತ 2 ವರ್ಷ 11 ತಿಂಗಳು 18 ದಿವಸಗಳ ಕಾಲ ಏಕಾಂಗಿಯಾಗಿ 9 ರಾಷ್ಟ್ರಗಳನ್ನ ಪರ್ಯಟನೆ ಮಾಡಿ, ದೇಶದ ಪ್ರಜೆಗಳಿಗೆ ಸುಭದ್ರವಾದ ಒಂದು ಸಂವಿಧಾನವನ್ನು ರಚನೆ ಮಾಡಿ ನೀಡಿದ ಮಹಾಪುರುಷ ಡಾ.ಬಿ ಆರ್ ಅಂಬೇಡ್ಕರ್ ಅವರ ಕುರಿತು ಈ ರೀತಿ ನೀಡಿರುವ ಹೇಳಿಕೆಯನ್ನ ಅಹಿಂದ ಸಂಘಟನೆ ತೀವ್ರವಾಗಿ ಖಂಡಿಸಿದೆ” ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಹಿಂದ ಬೆಂಗಳೂರು ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಜೆ ಆರ್, ಪರಿಶಿಷ್ಟ ಜಾತಿ ಘಟಕದ ರಾಜ್ಯಾಧ್ಯಕ್ಷ ಆರ್. ಕೇಶವಮೂರ್ತಿ, ಅಹಿಂದ ರಾಜ್ಯ ಸಮಿತಿಯ ಕಾರ್ಯಾಧ್ಯಕ್ಷ ಮಾಲೇಗೌಡ ಭಾಗವಹಿಸಿದ್ದರು.