ಆಲಮಟ್ಟಿ ಜಲಾಶಯದ ಅಣೆಕಟ್ಟು ಎತ್ತರವನ್ನು ಹೆಚ್ಚಿಸುವ ನಿರ್ಧಾರದಿಂದ ಸರಕಾರ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ಆಲಮಟ್ಟಿ ಅಣೆಕಟ್ಟು ಎತ್ತರ ಆಗಲೇಬೇಕು ಎಂದು ವಿಜಯಪುರ ಜಿಲ್ಲೆ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಸರಕಾರವನ್ನು ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಅಣೆಕಟ್ಟು ಎತ್ತರವನ್ನು ಹೆಚ್ಚಳ ಮಾಡುವಂತೆ ರೈತರು ನಡೆಯುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಒಂದು ವರ್ಷದವರೆಗೆ ಜನಪ್ರಿಯ ಯೋಜನೆಗಳು ನಿಂತರೂ ಚಿಂತೆಯಿಲ್ಲ. ಆದರೆ ಅಣೆಕಟ್ಟು ಎತ್ತರ ಹೆಚ್ಚಳ ನಿಲ್ಲಬಾರದು. ಈ ಭಾಗದ ರೈತರ ತ್ಯಾಗಕ್ಕೆ ಬೆಲೆ ಬರಬೇಕಾದರೆ, ಅಣೆಕಟ್ಟು ಎತ್ತರವಾಗಲೇಬೇಕಿದೆ ಎಂದರು.
ಅಣೆಕಟ್ಟು ಎತ್ತರ ಹೆಚ್ಚಳ ನಮ್ಮ ಪಕ್ಷದ ಹಾಗೂ ಸರ್ಕಾರದ ಬದ್ಧತೆ ಸಹ ಹೌದು. ಸರ್ಕಾರ ಈ ಕಾರ್ಯಸಾಧನೆ ಮಾಡಲಿದೆ ಎಂಬ ವಿಶ್ವಾಸವಿದೆ. ರೈತರ ವಿಷಯ ಬಂದಾಗ ಪಕ್ಷಭೇದ ಮರೆತು ಒಂದಾಗುತ್ತೇವೆ. ಸರ್ಕಾರಗಳು ಕೃಷ್ಣ, ಕಾವೇರಿಗೆ ನೀಡಿದ ಆದ್ಯತೆಯನ್ನು ಉಳಿದ ನದಿಗಳಿಗೂ ನೀಡಬೇಕು. ಭೀಮೆಯ ಬಗ್ಗೆ ಗಮನಹರಿಸಲಿ. ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಘೋಷಣೆಯಾಗಬೇಕಿದೆ. ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಕೃಷ್ಣೆಗೆ ಅನುದಾನ ನೀಡಿಲ್ಲ. ಆದರೆ ಇನ್ನೂ ಮೂರು ವರ್ಷಗಳಿವೆ. ಖಂಡಿತವಾಗಿಯೂ ಆದ್ಯತೆಯ ದೊಡ್ಡ ಅನುದಾನ ದೊರಕುವ ನಿರೀಕ್ಷೆ ಇದೆ ಎಂದರು.
ಸರ್ಕಾರ ಈ ವಿಷಯದಲ್ಲಿ ರೈತರಿಗೆ ಅನ್ಯಾಯ ಮಾಡಬಾರದು. ಈ ವಿಷಯದಲ್ಲಿ ಆತಂಕ್ಕೊಳಗಾಗಿರುವ ರೈತರು ಪ್ರತ್ಯೇಕತೆ ಬೇಡಿಕೆ ಇರಿಸಿದ್ದಾರೆ. ನಮ್ಮ ನಾಡು ಕಟ್ಟಲು ಅನೇಕ ಮಹನೀಯರು ಶ್ರಮಿಸಿದ್ದಾರೆ. ಹೀಗಾಗಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಂಡು ಪ್ರತ್ಯೇಕತೆ ಭಾವನೆ ಬೆಳೆಯದಂತೆ ನೋಡಿಕೊಳ್ಳಬೇಕಾಗಿರುವುದು ಸರ್ಕಾರದ ಜವಾಬ್ದಾರಿ ಎಂದರು.
ಇದನ್ನೂ ಓದಿ : ವಿಜಯಪುರ | ಶಾಲೆಗೆ ಹೋಗುವಾಗ ಪುಢಾರಿಗಳ ಕಿರುಕುಳ; ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ರೈತರ ವಿಷಯದಲ್ಲಿ ರಾಜಕಾರಣ ಮಾಡಿದರೆ ಅದು ಅನ್ನದಾತನಿಗೆ ಮಾಡುವ ಮೋಸ. ಹೀಗಾಗಿ ರೈತರಿಗೆ ಅನ್ಯಾಯವಾದಾಗ ನಮ್ಮದೇ ಸರ್ಕಾರ ಇದ್ದಾಗಲೇ ಟೀಕಿಸಿದ್ದೆ ಎಂದರು.
ಹೊಸ ಜಿಲ್ಲೆಗಳ ರಚನೆ ಸಂದರ್ಭದಲ್ಲಿ ಇಂಡಿಯನ್ನು ಜಿಲ್ಲಾಯನ್ನಾಗಿ ಮಾಡಬೇಕು. ಒಂದು ವೇಳೆ ಕಡೆಗಣಿಸಿದರೆ ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗ್ಯಾರಂಟಿ ಯೋಜನೆ ಕಡುಬಡವರಿಗೆ ದೊಡ್ಡ ಪ್ರಯೋಜನವಾಗಿದೆ. ಇದು ನಮ್ಮ ಬದ್ದತೆ. ಗ್ಯಾರಂಟಿಗಳು ಅತ್ಯಗತ್ಯ. ಅದರ ಜೊತೆಗೆ ಉಳಿದ ಅಭಿವೃದ್ಧಿ ಯೋಜನೆಗಳಿಗೂ ಆದ್ಯತೆ ನೀಡಬೇಕು ಎಂದರು.