ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಪದ್ಮಲತಾ, ವೇದವಲ್ಲಿ, ಸೌಜನ್ಯಾ ಮತ್ತು ಯಮುನಾ ಸೇರಿದಂತೆ ಹೆಣ್ಣುಮಕ್ಕಳ ಅಸಹಜ ಸಾವಿನ ಪ್ರಕರಣಗಳನ್ನು ಮರುತನಿಖೆಗೆ ಒಳಪಡಿಸಬೇಕು ಮತ್ತು ಹೆಣಗಳನ್ನು ಹೂತು ಹಾಕಲಾಗಿದೆ ಎನ್ನಲಾಗುವ ಪ್ರಕರಣದ ನ್ಯಾಯಯುತ ತನಿಖೆ ನಡೆಯಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಮ್ಮೇಳನ ಆಗ್ರಹಿಸಿತು.
ನಗರದಲ್ಲಿ ಭಾನುವಾರ ನಡೆದ ಸಮ್ಮೇಳನದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಈಶ್ವರಿ ಬಳ್ಳುಂಜ ನಿರ್ಣಯ ಮಂಡಿಸಿದರು. ಅಧ್ಯಕ್ಷೆ ಜಯಂತಿ ಬಿ.ಶೆಟ್ಟಿ ಅನುಮೋದಿಸಿದರು. ಸಭಿಕರು ಚಪ್ಪಾಳೆ ತಟ್ಟುವ ಮೂಲಕ ನಿರ್ಣಯಕ್ಕೆ ಬೆಂಬಲಿಸಿದರು.
ಈ ವೇಳೆ ಮುಖ್ಯ ಅತಿಥಿಯಾಗಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ ಭಾರತಕ್ಕೆ ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ಕಡಿಮೆಯಾಗದೇ ದಿನೇ ದಿನೆ ಹೆಚ್ಚುತ್ತಿದೆ. ಇತ್ತಿಚೀನ ದಿನಗಳಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ದಲಿತ ಹೆಣ್ಣಿನ ಮೇಲೆ ಹಾಗೂ ಎರಡು ನಿಮಿಷಕ್ಕೆ ಒಂದು ಹೆಣ್ಣಿನ ಮೇಲೆ ಅತ್ಯಾಚಾರ ನಡೆಯುತ್ತಿದೆ. ದೇಶ, ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ ಕಾಣೆಯಾದವರ ಬಗ್ಗೆ ದೂರು ದಾಖಲಾಗುತ್ತಿದೆ. ಆದರೆ ಕಾಣೆಯಾದವರು ಎಲ್ಲಿಗೆ ಹೋಗಿದ್ದಾರೆ ಎನ್ನುವುದು ಇವತ್ತಿಗೂ ನಿಗೂಢವಾಗಿದೆ. ಇದರ ಬಗ್ಗೆ ಸಮರ್ಪಕ ತನಿಖೆಯಾಗದೇ ಇರುವುದು ಬೇಸರದ ಸಂಗತಿ.

ಇದನ್ನೂ ಓದಿ: ಕುಪ್ಪೆಪದವಿನಲ್ಲೊಂದು ಸೌಹಾರ್ದತೆಯ ಸಂಕೇತ; ಧರ್ಮ ಬದಿಗಿಟ್ಟು ಸೋದರತೆ ಸಾರಿದ ಮಸೀದಿ
ಇನ್ನೂ ಕೆಲವರು ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ ಕೆಲವೇ ವರ್ಷಗಳಲ್ಲಿ ಅವರನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡುವುದು ವಿಷಾದನೀಯವಾಗಿದೆ. ದೇಶದಲ್ಲಿ ಬಿಜೆಪಿ ಸರ್ಕಾರ ಇರುವ ಕಡೆಯಲ್ಲಿ ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯವಾಗುತ್ತಿದೆ. ಇದ್ದರಿಂದ ಮಹಿಳೆಯರಿಗೆ ನ್ಯಾಯ ಸಿಗುತ್ತಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮಹಿಳಾ ಕುಸ್ತಿಪಟುಗಳ ಮೇಲೆ ದೌರ್ಜನ್ಯವಾಗಿದೆ ಎಂದು ರಸ್ತೆಗಳಿದ್ದು, ಹೋರಾಟ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ. ಮಹಿಳೆಯರು ಅನಾಯ್ಯದ ವಿರುದ್ಧ ಧ್ವನಿ ಎತ್ತಬೇಕು. ಸಂವಿಧಾನವು ನಮಗೆ ಪ್ರಶ್ನಿಸುವ ಹಕ್ಕನ್ನು ನೀಡಿದೆ ಎಂದರು.
ಧರ್ಮಸ್ಥಳ ವ್ಯಾಪ್ತಿಯಲ್ಲಿ ಅತ್ಯಾಚಾರ ನಡೆಸಿ ಕೊಲೆ ಮಾಡಲಾದ ಹಲವಾರು ಅಪರಿಚಿತ ಹೆಣ್ಣುಮಕ್ಕಳ ಮೃತದೇಹಗಳನ್ನು ನನ್ನಿಂದ ಬಲವಂತವಾಗಿ ಮಣ್ಣು ಮಾಡಿಸಿದ್ದಾರೆ ಎಂದು ಸ್ವಚ್ಛತಾ ಕಾರ್ಮಿಕ ಹೇಳಿಕೊಂಡ ನಂತರ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಹೆಣ್ಣುಮಕ್ಕಳ ಅಸಹಜ ಸಾವು, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪ್ರಕರಣಗಳ ತನಿಖೆಗೆ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಈ ತಂಡದಿಂದ ಸತ್ಯಾಂಶ ಹೊರಕ್ಕೆ ಬರಲಿದ್ದು, ಕೃತ್ಯವೆಸಗಿದ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದರು.
ಇದನ್ನೂ ಓದಿ: ಉಳ್ಳಾಲ | ವಿದ್ಯುತ್ ಕಂಬ ಉರುಳಿ ಬಿದ್ದು ಆಟೋ ರಿಕ್ಷಾ ಜಖಂ
ಸಮ್ಮೇಳನದ ಉದ್ಘಾಟಕರಾಗಿ ಮಾತನಾಡಿದ ಲೇಖಕಿ ಡಾ. ಸಬಿತಾ ಬನ್ನಾಡಿ ಸಮಾಜದಲ್ಲಿ ಮಹಿಳೆಯರ ಮೇಲೆ ಎಷ್ಟರಮಟ್ಟಿಗೆ ದೌರ್ಜನ್ಯ ಆಗುತ್ತಿದೆ ಎಂದು ನಮಗೆ ತಿಳಿಯುವುದು ಅವರವರ ಆತ್ಮಚರಿತ್ರೆಯ ಪುಸ್ತಕ ಹೊರಗೆ ಬಂದಾಗ ಮಾತ್ರ. ಹಲವು ದಿನಗಳಿಂದ ಮಣಿಪುರದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳು ಯಾರಿಗೂ ತಿಳಿಯುತ್ತಿಲ್ಲ. ಒಂದು ವೇಳೆ ಮಣಿಪುರದ ಮಹಿಳೆಯರ ಆತ್ಮಚರಿತ್ರೆ ಪುಸ್ತಕಗಳು ಹೊರೆಗೆ ಬಂದರೆ ದೇಶವೇ ತಲೆ ತಗ್ಗಿಸುವ ಪರಿಸ್ಥಿತಿ ಬರುತ್ತದೆ. ದೇಶದಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಹಿಂದೂ-ಮುಸ್ಲಿಂನವರ ಮಧ್ಯೆ ಕೋಮುದ್ವೇಷದ ಬೀಜ ಬಿತ್ತಿ ತಮ್ಮ ಬೆಳೆಕಾಳುಗಳನ್ನು ಬೇಯಿಸಿಕೊಳ್ಳುತ್ತಿದ್ದಾರೆ. ಚಿಕ್ಕವರು ಇದ್ದಾಗ ಯಾವುದೇ ಜಾತಿ, ಧರ್ಮ, ಭೇದ ಭಾವವಿಲ್ಲದೇ ಬೆಳೆಯುತ್ತಾರೆ. ದೊಡ್ಡವರು ಆಗುತ್ತಲೇ ಶತ್ರುಗಳು ಆಗುತ್ತಾರೆ. ಇದಕ್ಕೆ ಮುಖ್ಯ ಕಾರಣ ಧರ್ಮದ ರಕ್ಷಕರು ಎಂದು ಇರುವವರು.
ಇವರು ಗೋಮಾತೆಯ ಹೆಸರಿನಲ್ಲಿ ಕೊಲೆಗಳನ್ನು ಮಾಡಿಸುತ್ತಾರೆ. ಆದರೆ ಭಾರತವೂ ದನದ ಮಾಂಸ ರಫ್ತು ಮಾಡುವ ಮೊದಲ ಮೂರು ಸ್ಥಾನದಿಂದ ಎಂದಿಗೂ ಕೆಳಗೆ ಬರಲಲ್ಲಿ ಎನ್ನುವುದು ನೆನಪಿರಲಿ. ರಾಜ್ಯದಲ್ಲಿ ಹಲವು ವರ್ಷಗಳಿಂದ ಹಿಂದೂ ಯುವತಿಯರ, ಮಹಿಳೆಯರ ಹತ್ಯೆಯಾಗಿದ್ದರೂ ಯಾವ ಒಬ್ಬ ಹಿಂದೂ ನಾಯಕರು ಕೂಡ ಅವರಿಗೆ ನ್ಯಾಯ ಕೊಡಿಸುವಲ್ಲಿ ಮುಂದಾಗಲಿಲ್ಲ. ಅವರು ಹಿಂದೂ ಮುಸ್ಲಿಂನವರ ಮಧ್ಯೆ ಜಗಳ ಮಾಡಿಸಿ, ಆ ಗಲಭೆಯಲ್ಲಿ ಹಿಂದುಳಿದ ಸಮಾಜದ ಮಕ್ಕಳು ಹತ್ಯೆಯಾಗುವಂತೆ ಮಾಡುತ್ತಾರೆ. ಆದರೆ ಇವರ ಮಕ್ಕಳು ಮಾತ್ರ ವಿದೇಶದಲ್ಲಿ ಸುಖಕರ ಜೀವನ ಮಾಡುತ್ತಾರೆ. ತಾಯಿಂದಿರು ತಮ್ಮ ತಮ್ಮ ಮಕ್ಕಳನ್ನು ತಾವೇ ಕಾಪಾಡಿಕೊಳ್ಳಬೇಕು. ಇವರು ತಮ್ಮ ಲಾಭಕ್ಕಾಗಿ ನಮ್ಮ ಮನೆಯ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಸಮ್ಮೇಳನವನ್ನು ಉದ್ಧೇಶಿಸಿ ಮಾತನಾಡಿದ ಸಾಹಿತಿ ಚಂದ್ರಕಲಾ ನಂದಾವರ ಇತ್ತಿಚೀನ ದಿನಗಳಲ್ಲಿ ತಂದೆ-ತಾಯಿಗಳು ಕೋಮುವಾದವನ್ನು ಮಕ್ಕಳ ತಲೆಗೆ ತುಂಬುತ್ತಿದ್ದಾರೆ. ಬೇರೆ ಜಾತಿ, ಬೇರೆ ಧರ್ಮದವರ ಜತೆ ಸೇರಿದಂತೆ ಸೂಚಿಸುತ್ತಿದ್ದಾರೆ. ಎಲ್ಲಾ ಧರ್ಮದವರು ಒಂದು ಕಡೆ ಸೇರುವುದು ಶಾಲೆ ಕಾಲೇಜಿನಲ್ಲಿ ಮಾತ್ರ. ಈಗ ಅಲ್ಲೂ ಕೂಡ ಕೋಮುವಾದ ಬೆಳೆಯುತ್ತಿದೆ. 80ರ ದಶಕದಲ್ಲಿ ಈ ಕೋಮುವಾದದ ಎನ್ನುವುದೇ ತಿಳಿದಿರಲಿಲ್ಲ. ಅದರೇ ಈಗ ಕೋಮುವಾದವೂ ರಾಷ್ಟ್ರವ್ಯಾಪಿ ಹಬ್ಬಿದೆ ಎಂದರು.
ಇದನ್ನೂ ಓದಿ: ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ನಗರ, ಗ್ರಾಮಾಂತರ ಅಧ್ಯಕ್ಷರ ನೇಮಕ
ಸ್ವಾಗತ ಸಮಿತಿಯ ಅಧ್ಯಕ್ಷೆ ಪ್ಲೇವಿ ಕ್ರಾಸ್ತಾ ಅತ್ತಾವರ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನದಲ್ಲಿ ಜನವಾದಿಯ ರಾಜ್ಯ ಉಪಾಧ್ಯಕ್ಷರಾದ ಕೆ ಎಸ್ ಲಕ್ಷ್ಮೀ, ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ, ಮುಖಂಡರಾದ ಪ್ರಮೀಳಾ ಶಕ್ತಿನಗರ, ಶಮೀಮಾ ಭಾನು ತಣ್ಣೀರುಬಾವಿ, ಈಶ್ವರಿ ಪದ್ಮುಂಜ, ಲತಾ ಲಕ್ಷ್ಮಣ್, ಅಸುಂತಾ ಡಿ ಸೋಜ, ಮಾಧುರಿ ಬೋಳಾರ ಉಪಸ್ಥಿತರಿದ್ದರು. ಜನವಾದಿಯ ಜಿಲ್ಲಾಧ್ಯಕ್ಷೆ ಜಯಂತಿ ಬಿ ಶೆಟ್ಟಿ ಧ್ವಜಾರೋಹಣಗೈದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷೆ, ರಂಗ ಕಲಾವಿದೆ ಗೀತಾ ಸುರತ್ಕಲ್ ಸ್ವಾಗತಿಸಿದರು.
