ಮನರೇಗಾ ಯೋಜನೆ ಅನುಷ್ಠಾನ ಮತ್ತು ಕಾಮಗಾರಿಯಲ್ಲಿ ಕಳಪೆ ಸಾಧನೆ ಹಾಗೂ ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡುವಲ್ಲಿ ಬೇಜಬ್ದಾರಿತನ ಆರೋಪದ ಮೇಲೆ ಪಿಡಿಒ ಒಬ್ಬರನ್ನು ಅಮಾನತು ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾಂಪುರಹಳ್ಳಿ ಪಿಡಿಒ ಬಸವರಾಜು ಭಾಸಗಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಆದೇಶ ಹೊರಡಿಸಿದ್ದಾರೆ.
ರಾಂಪುರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಶುಚಿತ್ವ ಮತ್ತು ನೈರ್ಮಲ್ಯತೆ ಕಾಪಾಡುವಲ್ಲಿ ಹಾಗೂ ಸ್ವಚ್ಛತಾ ಕೆಲಸಗಳನ್ನು ನಿರ್ವಹಿಸುವಲ್ಲಿ ಪಿಡಿಒ ವಿಫಲರಾಗಿದ್ದಾರೆ. ಮನರೇಗಾ ಯೋಜನೆಯಡಿ ನೀಡಲಾಗುವ ಉದ್ಯೋಗಗಳ ಪ್ರಗತಿಯಲ್ಲಿ 50%ಗಿಂತ ಕಡಿಮೆ ಸಾಧನೆ ಮಾಡಲಾಗಿದೆ. ವಾಣಿಜ್ಯ ಕಟ್ಟಡಗಳ ತೆರಿಗೆ ಕುರಿತು ನಮೂನೆ-9ರಲ್ಲಿ ಭರ್ತಿ ಮಾಡುವಲ್ಲಿಯೂ ಬೇಜಬ್ದಾರಿತನ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಂಪುರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ತರಕಸಪೇಟೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ವೇಳೆ, ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಗಮನಿಸಿದ್ದ ಅವರು, ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು ಎಂದು ಕೂಡ ವರದಿಯಾಗಿದೆ.