ಕಲಬುರಗಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಮೊಟ್ಟೆ ಪೂರೈಕೆ ಮಾಡದೇ ಕೋಟಿಗಟ್ಟಲೆ ನಕಲಿ ರಸೀದಿ ಸೃಷ್ಟಿಸಿ ಭಾರಿ ಭ್ರಷ್ಟಾಚಾರ ನಡೆಸಲಾಗಿದ್ದು, ಈ ಪ್ರಕರಣದ ತನಿಖೆ ನಡೆಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಒತ್ತಾಯಿಸಿದರು.
ಕಲಬುರಗಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಗ್ರಾಮೀಣ ಪ್ರದೇಶದ ರೈತ, ಕೃಷಿ ಕಾರ್ಮಿಕರ ಮಕ್ಕಳಿಗೆ ಪೌಷ್ಟಿಕ ಆಹಾರ ದೊರಕಬೇಕೆಂಬ ಸದಾಶಯದೊಂದಿಗೆ ಸರ್ಕಾರ ಐಸಿಡಿಎಸ್ ಯೋಜನೆಯಡಿ ತತ್ತಿ ವಿತರಿಸಲಾಗುತ್ತಿದೆ. ಆದರೆ ಅಂಗನವಾಡಿಗಳಿಗೆ ಪ್ರತಿ ತಿಂಗಳು ತತ್ತಿ ಸರಬರಾಜು ಮಾಡಲು ಟೆಂಡರ್ ಪಡೆದಿರುವ ಏಜೆನ್ಸಿಯವರು ತತ್ತಿ ಸರಬರಾಜಿನಲ್ಲಿ ವ್ಯಾಪಕ ಅಕ್ರಮ ನಡೆಸುತ್ತಿದ್ದು, ಇದರಿಂದ ಮಕ್ಕಳಿಗೆ ಅನ್ಯಾಯವಾಗುತ್ತಿದೆ” ಎಂದು ಆರೋಪಿಸಿದರು.
“ಮುಂದಿನ ಒಂದು ತಿಂಗಳಲ್ಲಿ ಪ್ರಕರಣದ ತನಿಖೆ ಕೈಗೊಂಡು ಅಕ್ರಮ ಎಸಗಿದೆ ಎನ್ನಲಾಗುತ್ತಿರುವ ಏಜೆನ್ಸಿ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಡ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಎರಡು ವರ್ಷ ಗತಿಸಿದರೂ ಬದಲಾಗದ ʼಬಸ್ ನಿಲ್ದಾಣʼ ನಾಮಫಲಕ
ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಹ ಕಾರ್ಯದರ್ಶಿಗಳಾದ ದಿಲೀಪ್ ನಾಗೂರೆ, ರಾಯಪ್ಪ ಹುರಮುಂಜಿ ಇದ್ದರು.