ಬೀದರ್ ತಾಲೂಕಿನ ಕಮಠಾಣಾ ಗ್ರಾಮದಿಂದ ರಾಜನಾಳ್ ಕ್ರಾಸ್ ವರೆಗೆ ನಿರ್ಮಾಣವಾಗುತ್ತಿರುವ 3.50 ಕಿ.ಮೀ. ಡಾಂಬರೀಕರಣ ರಸ್ತೆ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು, ಕೂಡಲೇ ಕಾಮಗಾರಿ ತಡೆಹಿಡಿದು, ಗುಣಮಟ್ಟ ರಸ್ತೆ ನಿರ್ಮಿಸಲು ಆದೇಶಿಸಬೇಕೆಂದು ಅಹಿಂದ ಚಿಂತಕರ ವೇದಿಕೆ ಆಗ್ರಹಿಸಿದೆ.
ಈ ಕುರಿತು ಬೀದರ್ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಶಿವಶಂಕರ ಕಾಮಶೆಟ್ಟಿ ಅವರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.
“ಉತ್ತಮ ಗುಣಮಟ್ಟದ ಸಾಮಗ್ರಿ ಹಾಗೂ ಸರಕು ಬಳಸದೆ ರಸ್ತೆ ಕಾಮಗಾರಿ ಕೈಗೊಂಡಿದ್ದಾರೆ. ರಸ್ತೆ ಪಕ್ಕದಲ್ಲಿ ಜೆಸಿಬಿಯಿಂದ ಆಳವಾಗಿ ಕೊರೆದು ಹಳೆಯ ರಸ್ತೆಯನ್ನೇ ಒಡೆದು ರಸ್ತೆ ಬದಿಗೆ ಹಾಕಲಾಗಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಕಳಪೆ ಕಾಮಗಾರಿ ನಡೆಸುವ ಮೂಲಕ ಸರ್ಕಾರದ ಹಣ ದುರ್ಬಳಕೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗುಣಮಟ್ಟ ರಸ್ತೆ ನಿರ್ಮಾಣಕ್ಕೆ ಆದೇಶಿಸಿ ಅಗತ್ಯವಿರುವ ಕಡೆ ಬ್ರಿಜ್ ನಿರ್ಮಿಸಬೇಕು. ಮಳೆಗಾಲದಲ್ಲಿ ನೀರು ಹಾದು ಹೋಗಲು ದೊಡ್ಡ ಗಾತ್ರದ ಸಿಮೆಂಟ್ ಪೈಪ್ ಅಳವಡಿಸಲು ಸೂಕ್ತ ನಿರ್ದೇಶನ ನೀಡಬೇಕು. ಹಾಗೂ ಕಾಮಗಾರಿಯ ಬಿಲ್ ತಡೆಹಿಡಿಯಬೇಕು. ಇಲ್ಲವಾದಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗೋಸುಂಬೆಯನ್ನೂ ನಾಚಿಸಿದ ಕುಮಾರಸ್ವಾಮಿ
ಈ ಸಂದರ್ಭದಲ್ಲಿ ಅಹಿಂದ ಚಿಂತಕರ ವೇದಿಕೆಯ ಹೈದರಾಬಾದ್ ಕರ್ನಾಟಕ ಪ್ರದೇಶದ ಅಧ್ಯಕ್ಷ ದೀಲಿಪಕುಮಾರ್ ವರ್ಮಾ, ಆಲ್ ಇಂಡಿಯಾ ಹೂಮನ್ ರೈಟ್ಸ್ ಜಿಲ್ಲಾಧ್ಯಕ್ಷ ಅಶೋಕ್ ಬಾವಿದೊಡ್ಡಿ , ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಭಾರತಿಬಾಯಿ ಬಿರಾದರ್ ಹಾಗೂ ಕಾರ್ಯಕರ್ತರಾದ ಪ್ರವೀಣ್ ಕುಮಾರ್ ಹೊನ್ನ ಇದ್ದರು.