- ಆರೋಪ ಮಾಡಿದವರು ತಾವು ವರ್ಗಾವಣೆ ಮಾಡಿದ್ದು ದಂಧೆಯಾ?
- ಬಿಜೆಪಿ ಸರ್ಕಾರದ ಹಗರಣಗಳನ್ನು ನಾವು ತನಿಖೆ ಮಾಡುತ್ತೇವೆ: ಸಿಎಂ
ಅಧಿಕಾರಿಗಳ ವರ್ಗಾವಣೆ ಆಡಳಿತಾತ್ಮಕ ದೃಷ್ಟಿಯಿಂದ ಹೊಸ ಸರ್ಕಾರ ಮಾಡೇ ಮಾಡುತ್ತದೆ. ಅದನ್ನು ದಂಧೆ ಎನ್ನುವುದು ಹಾಸ್ಯಾಸ್ಪದ. ಹಾಗಾದರೆ ಆರೋಪ ಮಾಡಿದವರು ತಾವು ಅಧಿಕಾರಕ್ಕೆ ಬಂದಾಗ ವರ್ಗಾವಣೆ ಮಾಡಿದ್ದು ದಂಧೆಯಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಗುರುವಾರದ ಮಧ್ಯಾಹ್ನದ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುತ್ತ, “ಯಾವ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯದಂತೆ ನಾನು ನಮ್ಮ ಮಂತ್ರಿಮಂಡಲಕ್ಕೆ ಮನವಿ ಮಾಡಿರುವೆ. ಖಂಡತುಂಡವಾಗಿ ಪ್ರತಿಪಕ್ಷದ ನಾಯಕರು ಮಾಡಿರುವ ಆರೋಪವನ್ನು ನಾನು ಅಲ್ಲಗಳೆಯುತ್ತೇನೆ. ಲಂಚ ತಗೊಂಡಿರುವುದು ಯಾರಾದರೂ ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ” ಎಂದು ಸವಾಲು ಹಾಕಿದರು.
“ನನ್ನ ಇಲಾಖೆಯಲ್ಲಿ ಇನ್ನೂ ವರ್ಗಾವಣೆ ಮಾಡಿಲ್ಲ. ಏಕೆಂದರೆ ಬಜೆಟ್ ತಯಾರಿಯಲ್ಲಿ ಇದ್ದಿದ್ದರಿಂದ ನಾನು ನಮ್ಮ ಇಲಾಖೆಗಳಲ್ಲಿ ವರ್ಗಾವಣೆ ಆರಂಭಿಸಿಲ್ಲ. ನಮಗೆ ಗೊತ್ತಿಲ್ಲದ ರೀತಿಯಲ್ಲಿ ಭ್ರಷ್ಟಾಚಾರ ಮಾಡಿರಬಹುದು. ನಾನು ಅಲ್ಲಗಳೆಯುವುದಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯದಲ್ಲಿ ಮತ್ತೆ ಶುರುವಾಯಿತು ಹೆಣ ರಾಜಕಾರಣ
“ಬೊಮ್ಮಾಯಿ ಮತ್ತು ಕುಮಾರಸ್ವಾಮಿ ಅವರು ಮಾಡಿರುವ ಭ್ರಷ್ಟಾಚಾರದ ಆರೋಪ ಕೇವಲ ಕಪೋಲಕಲ್ಪಿತ. ಏಕೆಂದರೆ, ನಮ್ಮ ಸರ್ಕಾರದ ಮೇಲೆ ಹೇಳಲು ಯಾವುದೇ ವಿಷಯವಿಲ್ಲ ಅವರಿಗೆ. ಕೆಲವರಿಗೆ ರಾಜಕೀಯ ಭಯ ಆರಂಭವಾಗಿದೆ. ರಾಜಕೀಯ ಅಭದ್ರತೆ ಕಾಡುತ್ತಿದೆ. ಹೀಗಾಗಿ ಹತಾಶೆಯಿಂದ ಹೀಗೆ ಕೆಲವು ಆರೋಪ ಮಾಡುತ್ತ, ನಮ್ಮ ಸರ್ಕಾರದ ದಾರಿ ತಪ್ಪಿಸುತ್ತಿದ್ದಾರೆ” ಎಂದು ತಿರುಗೇಟು ನೀಡಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ 2013-2018ರವರೆಗಿನ ಭ್ರಷ್ಟಾಚಾರ ಪ್ರಕರಣ ತನಿಖೆ ಮಾಡಲು ಹತ್ತಾರು ಸಲ ಕೋರಿದ್ದೆ. ಮಾಡಲಿಲ್ಲ. ಅದರ ಅರ್ಥ ಅವರ ಬಳಿ ಯಾವುದೇ ದಾಖಲೆ ಸಿಕ್ಕಿಲ್ಲ. ಹೀಗಾಗಿ ತನಿಖೆ ಮಾಡಲಿಲ್ಲ. ಇದರ ಅರ್ಥ ಕೂಡ ನಮ್ಮ ಸರ್ಕಾರ ಭ್ರಷ್ಟಾಚಾರ ರಹಿತ ಸರ್ಕಾರ ಎಂಬುದು ಸಾಬೀತಾಗಿದೆ” ಎಂದರು.
ಬೊಮ್ಮಾಯಿ ಅವರು ಮಧ್ಯ ಎದ್ದು ನಿಂತು, “ಕಾಂಗ್ರೆಸ್ ಸರ್ಕಾರದ ಹಗರಣಗಳ ಬಗ್ಗೆ ತನಿಖೆಗೆ ನಾವು ಲೋಕಾಯುಕ್ತಕ್ಕೆ ವಹಿಸಿದ್ದೇವೆ” ಎಂದರು. ಸಿಎಂ ಪ್ರತಿಕ್ರಿಯಿಸಿ, ಲೋಕಾಯುಕ್ತ ತನಿಖೆ ನಡೆಸಿದರೆ ನಾವು ಬೇಡ ಅನ್ನಲ್ಲ. ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ನಾವು ಆರೋಪ ಮಾಡಿದ್ದೆವು. ಎಸ್‌ಐಟಿ ಮೂಲಕ ತನಿಖೆ ನಡೆಸುತ್ತೇವೆ” ಎಂದರು.