ಶಾಲೆಗಳು ಪ್ರಾರಂಭವಾಗಿ ತಿಂಗಳು ಕಳೆಯುತ್ತ ಬಂದರೂ ಕೂಡ ಸರ್ಕಾರಿ ಶಾಲೆಯ ಮಕ್ಕಳಿಗೆ ಷೂ-ಸಾಕ್ಸ್ ಸರಬರಾಜು ಆಗದಿರುವುದು ಶಿಕ್ಷಣಹಕ್ಕು ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ(ಪಾಫ್ರೆ) ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಜ್ಯದ ಎಲ್ಲ ಮಕ್ಕಳು ಶಿಕ್ಷಣ ಹಕ್ಕು ಕಾಯಿದೆ, 2009 ಅನ್ವಯ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಹೊಂದಿದ್ದು, ಈ ಹಕ್ಕನ್ನು ಸಾಕಾರಗೊಳಿಸುವುದು ಸರ್ಕಾರದ ಹೊಣೆಯಾಗಿದೆ. ಈ ಕಾಯಿದೆಯು ಮಕ್ಕಳಿಗೆ ಕೇವಲ ಶಾಲೆಗೆ ಹಾಜರಾಗುವ ಹಕ್ಕನ್ನು ಮಾತ್ರವಲ್ಲದೆ, ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸಕಾಲಿಕವಾಗಿ ಗುಣಮಟ್ಟದ ಪಠ್ಯಪೂರಕ ಸಾಮಗ್ರಿಗಳಾದ ಪಠ್ಯಪುಸ್ತಕ, ಸಮವಸ್ತ್ರ ಮತ್ತು ಷೂ ಹಾಗೂ ಸಾಕ್ಸ್ ಒದಗಿಸುವ ಬಾಧ್ಯತೆಯನ್ನೂ ಸರ್ಕಾರಕ್ಕೆ ಹೊಂದಿದೆ.
“ಕಾಯಿದೆಯ ಸೆಕ್ಷನ್ 3ರ ಅನ್ವಯ, ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಷೂ, ಸಾಕ್ಸ್ ಮತ್ತು ಪಠ್ಯಪುಸ್ತಕಗಳನ್ನು ಸರಿಯಾದ ಸಮಯಕ್ಕೆ ನೀಡದಿರುವುದು, ಅವರು ಗುಣಮಟ್ಟದ ಶಿಕ್ಷಣ ಪಡೆಯುವ ಹಕ್ಕಿಗೆ ಅಡ್ಡಿಯಾಗುತ್ತದೆ. ಇದು ಶಿಕ್ಷಣ ಹಕ್ಕು ಕಾಯಿದೆಯ ಉಲ್ಲಂಘನೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಜೂನ್ 25ರಂದು ಹೊರಡಿಸಿರುವ ಸುತ್ತೋಲೆ ಅನ್ವಯ ಕೂಡಲೇ ಮಕ್ಕಳಿಗೆ ಷೂ ಮತ್ತು ಸಾಕ್ಸ್ ಒದಗಿಸಲು ಒಂದು ಕಾಲಮಿತಿಯನ್ನು ನಿಗದಿಗೊಳಿಸಿ, ಶಿಕ್ಷಣ ಹಕ್ಕು ಕಾಯಿದೆ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು(ಬಿಇಒ) ಪೂರ್ಣ ಹೊಣೆಗಾರರನ್ನಾಗಿ ಮಾಡಬೇಕು” ಎಂದು ಪಾಫ್ರೆ ಒತ್ತಾಯಿಸಿದೆ.
“ಸುತ್ತೋಲೆ ಅನ್ವಯ, ಶಾಲಾ ಹಂತದಲ್ಲಿ ಕೂಡಲೇ ಷೂ ಮತ್ತು ಸಾಕ್ಸ್ ಖರೀದಿ ಸಮಿತಿಗಳನ್ನು ರಚಿಸಿ, ಈ ಸಮಿತಿಗಳು ಗುಣಮಟ್ಟದ ಷೂ ಮತ್ತು ಸಾಕ್ಸ್ ಖರೀದಿಸಲು ಅನುವಾಗುವಂತೆ ಶಿಕ್ಷಣ ಸಮನ್ವಯಕರು(EC), ಸಿಆರ್‌ಪಿ(CRP) ಮತ್ತು ಬಿಆರ್(BRP)ಗಳನ್ನು ಸುಗುಮಕಾರರಾಗಿ ನೇಮಿಸಬೇಕು. ಷೂ ಮತ್ತು ಸಾಕ್ಸ್ ಸರಬರಾಜು ಮಾಡುವ ಕಂಪೆನಿಗಳಿಂದ ಖರೀದಿಸಿದ ಷೂ ಮತ್ತು ಸಾಕ್ಸ್‌ಗಳಿಗೆ ಸರಿಯಾದ ರಶೀದಿ ಮತ್ತು ಕನಿಷ್ಠ ಒಂದು ವರ್ಷದ ವಾರಂಟಿ ಕಾರ್ಡ್ ನೀಡುವುದನ್ನು ಖರೀದಿ ಸಮಿತಿ ಖಾತರಿಪಡಿಸಿಕೊಳ್ಳಬೇಕು. ಈ ಅವಧಿಯಲ್ಲಿ ಮಕ್ಕಳ ಷೂಗಳು ಹಾನಿಯಾದಲ್ಲಿ ಅದನ್ನು ರಿಪೇರಿ ಮಾಡಿಕೊಡುವ ಹೊಣೆಯನ್ನು ಆಯಾ ಕಂಪನಿಗಳಿಗೆ ವಹಿಸಬೇಕು” ಎಂದು ಪಾಫ್ರೆ ಆಗ್ರಹಿಸಿದೆ.
ಇದನ್ನೂ ಓದಿದ್ದೀರಾ? ಮಂಗಳೂರು | ಬಿಎಸ್‌ಡಬ್ಲ್ಯೂಟಿ ಎರಡನೇ ಹಂತದ ಉಚಿತ ಹೊಲಿಗೆ ತರಬೇತಿ ಕೇಂದ್ರಗಳಿಗೆ ಅರ್ಜಿ ಆಹ್ವಾನ
“ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಪಠ್ಯಪುಸ್ತಕಗಳು ತಲುಪದಿದ್ದರೂ ಡೆಲಿವರಿ ಚಲನ್ ಅನ್ನು ಎಸ್‌ಟಿಎಸ್(STS) ತಂತ್ರಾಂಶದಲ್ಲಿ ಒತ್ತಾಯದಿಂದ ಹಾಕಿಸಿರುವ ಬಗ್ಗೆ ದೂರುಗಳು ಬಂದಿವೆ. ಪಠ್ಯಪುಸ್ತಕಗಳಿಲ್ಲದೆ ಕಾಟಾಚಾರಕ್ಕೆ ಸೇತುಬಂಧ ಕಾರ್ಯಕ್ರಮವನ್ನು ಮಾಡಲಾಗಿದೆ ಎಂದು ಎಸ್‌ಡಿಎಂಸಿಗಳು ತಿಳಿಸಿವೆ. ಇದಲ್ಲದೆ, 2-3ನೇ ತರಗತಿಗಳಿಗೆ ಅಭ್ಯಾಸ ಸಹಿತ ಪಠ್ಯಪುಸ್ತಕದಲ್ಲಿಯೇ ಸೇತುಬಂಧ ಇದೆ. ಆದರೆ ಈ ಪುಸ್ತಕಗಳೇ ಇನ್ನೂ ತಲುಪಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಕೂಡಲೇ ಬಗೆಹರಿಸಲು ಕ್ರಮ ಕೈಗೊಳ್ಳಬೇಕು” ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ(ಪಾಫ್ರೆ) ಪ್ರಧಾನ ಸಂಚಾಲಕ ನಿರಂಜನಾರಾಧ್ಯ ವಿ ಪಿ ಪ್ರಾಫ್ರೆ ಪರವಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.