ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಮಂದಿ ಸಾಧಕರಿಗೆ 2023 ರಿಂದ 2025 ನೇ ಸಾಲಿನ ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರಕಟಿಸಲಾಗಿದೆ. ಅದರಲ್ಲಿ, ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ದಸಂಸ ಹಿರಿಯ ಮುಖಂಡರಾದ ಇಂದೂಧರ ಹೊನ್ನಾಪುರ ಹಾಗೂ ಹರಿಹರ ಆನಂದ ಸ್ವಾಮಿ ಅವರಿಗೆ ಲಭಿಸಿದೆ.
ಅಂಬೇಡ್ಕರ್ ಜಯಂತಿಯಂದು ಕರ್ನಾಟಕ ಸರ್ಕಾರದಿಂದ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ, 2023 ರಿಂದ ಇದುವರೆಗೆ ಪ್ರಶಸ್ತಿ ಪ್ರಕಟವಾಗಿರಲಿಲ್ಲ. ಈ ಭಾರಿ 2023 ರಿಂದ 2025 ರ ವರೆಗೆ ಏಕಕಾಲದಲ್ಲಿ ಪ್ರಕಟಿಸಲಾಗಿದ್ದು ಏಪ್ರಿಲ್ 14 ರಂದು ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಲ್. ನರಸಿಂಹಮೂರ್ತಿ ಆದೇಶ ಹೊರಡಿಸಿದ್ದಾರೆ.
2023 ನೇ ಸಾಲಿಗೆ ಇಂದೂಧರ ಹೊನ್ನಾಪುರ (ಪತ್ರಿಕೋಧ್ಯಮ ), ಹರಿಹರ ಆನಂದಸ್ವಾಮಿ ( ಸಮಾಜ ಸೇವೆ ), ಸೀತವ್ವ ಜೋಡಟ್ಟಿ ( ದೇವದಾಸಿ ವಿಮೋಚನೆ ), ಕೆ.ಪುಂಡಲಿಕ ರಾವ್ ಶೆಟ್ಟಿ ಬಾ ( ಸಮಾಜ ಸೇವೆ/ ರಾಜಕೀಯ ), ರುದ್ರಪ್ಪ ಹಾನಗವಾಡಿ (ಆಡಳಿತ ) ಆಯ್ಕೆ ಮಾಡಲಾಗಿದೆ.
2024 ನೇ ಸಾಲಿಗೆ ಮುಲ್ಲಾ ಜಮ್ಮ ( ಸಮಾಜ ಸೇವೆ /ರಾಜಕೀಯ ), ಶ್ರೀಧರ ಕಲಿವೀರ (ಹೋರಾಟ ), ರಾಮದೇವ ರಾಕೆ (ಪತ್ರಿಕೋಧ್ಯಮ ), ಲಕ್ಷ್ಮೀಪತಿ ಕೋಲಾರ (ಸಾಹಿತ್ಯ /ಸಂಘಟನೆ ), ವೈ. ಬಿ. ಹಿಮ್ಮಡಿ (ಸಾಹಿತ್ಯ/ಸಮಾಜ ಸೇವೆ) ಆಯ್ಕೆ ಮಾಡಲಾಗಿದೆ.
2025 ನೇ ಸಾಲಿಗೆ ದತ್ತಾತ್ರೇಯ ಇಕ್ಕಳಗಿ (ಪ್ರಕಾಶನ ), ಮಾವಳ್ಳಿ ಶಂಕರ್ (ಹೋರಾಟ ), ಎಫ್. ಹೆಚ್. ಜಕ್ಕಪ್ಪನವರ್ (ಹೋರಾಟ ), ಹೊನ್ನೂರು ಗೌರಮ್ಮ (ಜಾನಪದ ಕಲೆ ), ಈರಪ್ಪ (ದಲಿತ ಹೋರಾಟ ) ಪ್ರಶಸ್ತಿ ಸಂದಿದೆ.
ಏ. 14 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನ ಮಾಡುವರು. ಪ್ರಶಸ್ತಿಯು 5 ಲಕ್ಷ ನಗದು,ಪ್ರಶಸ್ತಿ, ಫಲಕ ಒಳಗೊಂಡಿರುತ್ತದೆ.
ಇಂದೂಧರ ಹೊನ್ನಾಪುರ ಅವರು ದಸಂಸ ಹಿರಿಯ ಮುಖಂಡರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸಿದವರು. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕಿನ ಪುಟ್ಟಣ್ಣ ಕಣಗಾಲ್ ಸಮೀಪದ ಹೊನ್ನಾಪುರ ಗ್ರಾಮದವರು. ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷರಾಗಿ ನೂರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೈಕ್ಷಣಿಕ ಸೇವೆ ನೀಡುತ್ತಿದ್ದಾರೆ. ಮೈಸೂರಿನ ಪತ್ರಿಕೋಧ್ಯಮ ಪದವಿಧರರಾಗಿ, ವಿದ್ಯಾರ್ಥಿ ದಿಸೆಯಲ್ಲಿ ‘ಪಂಚಮ ‘ ಪತ್ರಿಕೆ ಪ್ರಕಟಿಸಿದ್ದರು. ದಲಿತ ಚಳುವಳಿಯಲ್ಲಿ ಸಕ್ರಿಯರಾಗಿ ನಾಡಿನಾದ್ಯಂತ ದಸಂಸ ಕಟ್ಟಿದವರಲ್ಲಿ ಒಬ್ಬರಾಗಿದ್ದಾರೆ.
ಪಿರಿಯಾಪಟ್ಟಣದಲ್ಲಿ ನಡೆದ 16ನೇ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ (2018) ಅಧ್ಯಕ್ಷರಾಗಿದ್ದರು. ಇದುವರೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ ಸಂದಿವೆ.’ ಬಂಡಾಯ’ಕವನ ಸಂಕಲನ ಹಾಗೂ ‘ಹೊಸದಿಕ್ಕು’ ಆಯ್ದ ಲೇಖನಗಳ ಸಂಕಲನ ಪ್ರಕಟಗೊಂಡಿದೆ.
ದಸಂಸ ಹಿರಿಯ ಮುಖಂಡರಾದ ಹರಿಹರ ಆನಂದ ಸ್ವಾಮಿ 14/01/1952 ರಲ್ಲಿ ಕೆ ಆರ್ ನಗರ ತಾಲ್ಲೂಕು ಬ್ಯಾಡರಹಳ್ಳಿಯಲ್ಲಿ ಜನಿಸಿದವರು. ತಂದೆ ನರಸಿಂಹಯ್ಯ ಅವರ ಮಾರ್ಗದರ್ಶನದಲ್ಲಿ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿ ಎಸ್ಸಿ ಪದವಿ ಶಿಕ್ಷಣ ಪಡೆದು 1976 ರಲ್ಲಿ ದಸಂಸ ಜಿಲ್ಲಾ ಸಂಚಾಲಕರಾಗಿ ಸಮಾಜ ಸೇವೆ ಪ್ರಾರಂಭಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಪತ್ರಿಕೆ ಸಮಾಜದ ಪ್ರತಿಬಿಂಬ : ಡಾ. ಕೂಡ್ಲಿ ಗುರುರಾಜ
ಬಸವಲಿಂಗಪ್ಪ ಅವರ ಬೂಸಾ ಚಳುವಳಿಯಿಂದ ಪ್ರೇರಿತರಾಗಿ ಅಂದಿನಿಂದ ಇದುವರೆಗೆ ದಸಂಸ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಹುಣಸೂರು ತಾಲ್ಲೂಕು, ರತ್ನಾಪುರಿ ಗ್ರಾಮದವರಗಿದ್ದು ಜಿಲ್ಲೆಯಲ್ಲಿ ದಸಂಸ ಹಿರಿಯ ಮುಖಂಡರಾಗಿ ಜನಪರ ಹೊರಟಗಳನ್ನ ಮುನ್ನಡೆಸುತ್ತಿದ್ದಾರೆ.