ರಾಷ್ಟ್ರದ ಪ್ರಜೆಗಳ ಸಮಾನತೆಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಾಮಾಜಿಕ ಚಿಂತಕ ಜಗದೀಶ್ವರ ಬಿರಾದಾರ್ ಹೇಳಿದರು.
ಔರಾದ ಪಟ್ಟಣದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಹಾಗೂ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ, ಉಪನ್ಯಾಸ ಹಾಗೂ ಸಾಧಕರ ಸಮ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
“ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿ ರಚಿತವಾದ ಸಂವಿಧಾನ ರಾಷ್ಟ್ರದ ಕಾನೂನಿಗೆ ಅಡಿಪಾಯವಾಗಿದೆ, ದೇಶದ ಸೌಹಾರ್ದತೆ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಪ್ರಜೆಗಳಿಗೆ ಸಂವಿಧಾನದಡಿ ನೀಡಿರುವ ಹಕ್ಕುಗಳನ್ನು ಪಡೆಯಲು ತೋರುವ ಆಸಕ್ತಿ, ಕರ್ತವ್ಯ ನಿರ್ವಹಣೆಗೂ ನೀಡಬೇಕು” ಎಂದು ಕರೆ ನೀಡಿದರು.
“ಬಾಬಾ ಸಾಹೇಬರು ಜಗತ್ತು ಕಂಡ ಶ್ರೇಷ್ಠ ಚಿಂತಕರು. ಅಸ್ಪೃಶ್ಯತೆ, ಅಸಮಾನತೆ, ಅವೈಜ್ಞಾನಿಕ ಸಂಪ್ರದಾಯಗಳು ಕಿತ್ತೊಗೆದು ಬಡವರ, ದಿನ, ದಲಿತ, ನಿರ್ಗತಿಕ, ಶೋಷಿತರ ಧ್ವನಿಯಾಗಿದ್ದಾರೆ. ಅಂಬೇಡ್ಕರ್ ಆಶಯದಂತೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕಾಗಿದೆ. ಜಾತಿ, ಮತ, ಧರ್ಮ ಬೇಧ, ಭಾವ ಇಲ್ಲದೆ ಎಲ್ಲ ವರ್ಗದವರಿಗೂ ಸಮಾನ ಹಕ್ಕು ನೀಡಿ ವಿಶ್ವಕ್ಕೆ ಮಾದರಿಯಾದ ವ್ಯಕ್ತಿತ್ವ ಅಂಬೇಡ್ಕರ್ ಅವರದ್ದಾಗಿದೆ, ಅವರ ಚಿಂತನೆಗಳು ಎಂದೆಂದಿಗೂ ಸಮಾಜಕ್ಕೆ ಆದರ್ಶವಾಗಿವೆ” ಎಂದು ನುಡಿದರು.
ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ಡೊಂಗರೆ ಮಾತನಾಡಿ, “ಶೋಷಿತ, ದಮನಿತರ ಏಳಿಗೆಗಾಗಿ ಅಂಬೇಡ್ಕರ್ ತತ್ವಗಳ ಅಳವಡಿಕೆ ಅಗತ್ಯವಾಗಿದೆ. ವಿದ್ಯಾರ್ಥಿಗಳು ಅಂಬೇಡ್ಕರ್ ಚಿಂತನೆ ಹಾಗೂ ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಪಡೆದು, ಕರ್ತವ್ಯಗಳನ್ನು ಸಹ ಪರಿಣಾಮಕಾರಿಯಾಗಿ ನಿರ್ವಹಿಸಿ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು” ಎಂದು ಹೇಳಿದರು.
ಔರಾದ ತಹಸೀಲ್ದಾರ್ ನಾಗಯ್ಯ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ಭಂತೆ ಬೋಧಿರತ್ನ ಅವರು ಸಾನಿಧ್ಯ ವಹಿಸಿದರು. ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ
ಕಾರ್ಯಕ್ರಮದಲ್ಲಿ ತಾಪಂ ಇಒ ವೆಂಕಟ ಶಿಂಧೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅನೀಲಕುಮಾರ್ ಮೆಲ್ದೊಡ್ಡಿ, ಡಾ. ಮನ್ಮತ್ ಡೋಳೆ, ವೀರಶೆಟ್ಟಿ ರಾಠೋಡ್, ರವೀಂದ್ರ ಮೇತ್ರೆ, ಪಿಎಸ್ಐ ಉಪೇಂದ್ರ ಕುಮಾರ್, ನರಸಿಂಗ ಕೊಂಡೆ, ಆನಂದ ಕಾಂಬಳೆ, ಸೂರ್ಯಕಾಂತ ಸಿಂಗೆ, ಪಂಡರಿ ಆಡೆ, ವಿಶ್ವನಾಥ ಬಿರಾದಾರ್, ತುಳಸಿರಾಮ ಬೇಂದ್ರೆ, ಮಹಾದೇವ ಚಿಟಗೀರೆ, ಬಿಎಂ ಅಮರವಾಡಿ, ಪ್ರಕಾಶ ಭಂಗಾರೆ, ಸುನೀಲ ಮಿತ್ರಾ, ಆದರ್ಶ ನಾಗೂರೆ, ಸೈದಪ್ಪ, ಧನರಾಜ ಮಾನೆ ಸೇರಿದಂತೆ ಇನ್ನಿತರರಿದ್ದರು.