ಹೆರಿಗೆಗಾಗಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ನಿಂತಿದ್ದ ಟ್ರ್ಯಾಕ್ಟರ್‌ಗೆ ಢಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಗರ್ಭಿಣಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹೂವಿನಹಿಪ್ಪರಗಿಯಲ್ಲಿ ಘಟನೆ ನಡೆದಿದೆ ಮಗು ಕೂಡ ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ತಾಳಿಕೋಟೆಯಿಂದ ವಿಜಯಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ಯವಾಗ ದುರ್ಘಟನೆ ಸಂಭವಿಸಿದೆ.
ತಾಳಿಕೋಟೆ ತಾಲೂಕಿನ ನಾವದಗಿ ಗ್ರಾಮದ ಭಾಗ್ಯಶ್ರೀ ರಾವುತಪ್ಪ ಪಾರಣ್ಣನವರ ಮೃತದ ದುರ್ದೈವಿ. ಭಾಗ್ಯಶ್ರೀ ಅವರಿಗೆ ಶನಿವಾರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಆಕೆಯನ್ನು ತಾಳಿಕೋಟೆ ಆಸ್ಪತ್ರೆಗೆ ಕರೆತಂದಿದ್ದರು. ಆದರೆ, ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಹಾಗಾಗಿ, ಆಕೆಯನ್ನು ಆ್ಯಂಬುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಮಾರ್ಗ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಭಾಗ್ಯಶ್ರೀ ಸಾವನ್ನಪ್ಪಿದ್ದಾರೆ. ಗರ್ಭಿಣಿಯ ಕುಟುಂಬಸ್ಥರು ತಾಳಿಕೋಟೆ ಸಮುದಾಯ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಆ್ಯಂಬುಲೆನ್ಸ್‌ನಲ್ಲಿದ್ದ ಇಬ್ಬರು ಸ್ಟಾಫ್ ನರ್ಸ್ ಮತ್ತು ಒಬ್ಬ ಸಹಾಯಕನಿಗೆ ಅಪಘಾತದಲ್ಲಿ ಗಾಯವಾಗಿವೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.