ಭೀಮ ಘರ್ಜನೆ ಸಂಘಟನೆಯ ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಅಮಿತ ಜೋಗಳೆಕರ ಆಯ್ಕೆಯಾಗಿದ್ದಾರೆ.
ಶಿರಸಿ ತಾಲೂಕಿನ ಭೀಮ ಘರ್ಜನೆ ಸಂಘಟನೆ ಮತ್ತು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಪುನರ್ ಆಯ್ಕೆ ಸಭೆಯು ದಾಸನಕೊಪ್ಪ ಗ್ರಾಮ ಪಂಚಾಯತ್ ಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ಅಮಿತ್ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ನೂತನ ಭೀಮ ಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಅರ್ಜುನ ಎಂ, ಉಪಾಧ್ಯಕ್ಷರಾಗಿ ಅಮಿತ ಜೋಗಳೆಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶ್ಯಾಮ ದೇಶಬಾಗ್ ಹಾಗೂ ಜಿಲ್ಲಾ ಖಜಾಂಚಿಯಾಗಿ ನವೀನ ಖಾನಡೆ ಆಯ್ಕೆಯಾಗಿದ್ದಾರೆ. ಇನ್ನು ತಾಲೂಕು ಅಧ್ಯಕ್ಷರಾಗಿ ಪುನೀತ್ ಮರಾಠೆ, ತಾಲೂಕು ಉಪಾಧ್ಯಕ್ಷರಾಗಿ ಶಿವರಾಜ ಹಾವೇರಿ, ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷಯ ದೋತ್ರೆ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಂಘಟನೆಯ ಜಿಲ್ಲಾ ಸಂಚಾಲಕ ಲೋಕೇಶ್ ನೇರಲಗಿ ಮಾತಾಡುತ್ತ, “ಒಂಟಿ ಜೀವನ ಮಾಡಿದಾಗ ಉಳ್ಳವರು ಇಲ್ಲದವರ ಮೇಲೆ ದರ್ಪ ದೌರ್ಜನ್ಯ ಮಾಡುತ್ತಾರೆ. ಸಂಘಟಿತರಾಗಿ ಒಗ್ಗಟ್ಟಿನಿಂದ ಇದ್ದರೆ ಎಲ್ಲರೂ ಸೇರಿ ನಮ್ಮ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಡಬಹುದು ಹಾಗೂ ನಮ್ಮ ಹಕ್ಕುಗಳನ್ನು ಸರ್ಕಾರದಿಂದ ಪಡೆಯಬಹುದು” ಎಂದು ವಿವರಿಸಿದರು.
ಇದನ್ನೂ ಓದಿ: ಉತ್ತರ ಕನ್ನಡ | 261 ದೇಸಿ ಸಾಂಪ್ರದಾಯಿಕ ಬೆಳೆ, ತಳಿಗಳ ಸಂರಕ್ಷಣೆ
ಕಾರ್ಯಕ್ರಮದಲ್ಲಿ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಎಸ್. ಫಕೀರಪ್ಪ, ಬದನಗೋಡ ಗ್ರಾಮ ಪಂಚಾಯಿತಿಯ ಅಧ್ಯಕ್ಷ ನಟರಾಜ ಹೊಸೂರು ಸೇರಿದಂತೆ ಶಿರಸಿ ತಾಲೂಕಿನ ಎಲ್ಲಾ ಹೋಬಳಿ ಮತ್ತು ಗ್ರಾಮ ಮಟ್ಟದ ಪದಾಧಿಕಾರಿಗಳ ಭಾಗವಹಿಸಿದ್ದರು.