ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯು ಈಗ ಭಾರೀ ವಿವಾದ ಸೃಷ್ಟಿಸಿದೆ. ಗೃಹ ಸಚಿವರ ಈ ಹೇಳಿಕೆ ಖಂಡಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಪದಾಧಿಕಾರಿಗಳು ಬೀದರ್‌ನಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಜಮಾಯಿಸಿದ ಒಕ್ಕೂಟದ ಪ್ರಮುಖರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಅಂಬೇಡ್ಕರ್ ವಿರುದ್ಧದ ಹೇಳಿಕೆ ನೀಡಿದ ಅಮಿತ್ ಶಾ ಕೂಡಲೇ ಕ್ಷಮೆಯಾಚಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಅಮಿತ್ ಶಾ ತಮ್ಮ ಭಾಷಣದಲ್ಲಿ ʼಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್… ಎನ್ನುವುದು ಈಗ ಒಂದು ಫ್ಯಾಷನ್ ಆಗಿಬಿಟ್ಟಿದೆ. ನೀವು ಇಷ್ಟು ಸಲ ದೇವರ ಹೆಸರು ತೆಗೆದುಕೊಂಡಿದ್ದರೆ, ಏಳೇಳು ಜನ್ಮಗಳಲ್ಲಿ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು” ಎಂದು ಹೇಳಿದ್ದು ಖಂಡನೀಯವಾಗಿದೆ. ದೇಶದ ಅಸ್ಪೃಶ್ಯರು, ಮಹಿಳೆಯರು ಮತ್ತು ಶೋಷಿತ ವರ್ಗಗಳಿಗೆ ಮಾನವೀಯ ಬದುಕಿಗೆ ಸಂವಿಧಾನ ನೀಡಿದ ಬಾಬಾ ಸಾಹೇಬರನ್ನು ಅಪಮಾನಿಸಿದ್ದ ಸಹಿಸುವುದಿಲ್ಲ. ಇದರಿಂದ ದೇಶದ ಕೋಟ್ಯಾಂತರ ಅಂಬೇಡ್ಕರ್ ಅನುಯಾಯಿಗಳಿಗೆ ನೋವುಂಟು ಮಾಡಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಬೇಡ್ಕರ್‌ರನ್ನು ಅವಮಾನಿಸಿದ ಅಮಿತ್ ಶಾ ಕ್ಷಮೆಯಾಚನೆಗೆ ಆಗ್ರಹ
ಎನ್ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಫೀರೋಜ್ ಖಾನ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಸಂತೋಷಕುಮಾರ್ ಚಿಮಕೋಡೆ, ಉಪಾಧ್ಯಕ್ಷ ಮುಕೇಶ ಚಲ್ವಾ ಸೇರಿದಂತೆ ಒಕ್ಕೂಟದ ಪ್ರಮುಖರಾದ ಭೀಮರಾವ್ ಮಾಲಗತ್ತಿ, ಲೊಕೇಶ್ ದೊಮ್ಮೆ ವಿಶಾಲ್ ಕುದ್ರೆ, ಸಿದ್ದಾರ್ಥ ಭಾವಿದೊಡ್ಡಿ, ಇಮ್ರಾನ್ ಖಾನ್, ಗೌತಮ್ ಮುತ್ತಂಗಿಕರ್, ಸಚೀನ್ ಶೆಟಕಾರ್, ಆದಿತ್ಯ ದಂಡಿ, ಹಾಲಿದ್ ಪೈಲವಾನ್, ಸತೀಶ್, ರಾಜಕುಮಾರ್, ವಿಶಾಲ್, ಪ್ರಮೋದ್, ಪವನ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.