ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಬಳ್ಳಾರಿ ರೈಲ್ವೆ ಸೇರಿದಂತೆ ಭಾರತೀಯ ರೈಲ್ವೆಯ ಮೇಲೆ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಪಾರಂಪರಿಕ ಕಟ್ಟಡವಾದ ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿರುವ ಅಮೃತ್ ಭಾರತ್ ನಿಲ್ದಾಣ ಯೋಜನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಂಸದ ದೇವೇಂದ್ರಪ್ಪ ಮಾತನಾಡಿ, “ಬಳ್ಳಾರಿ ರೈಲ್ವೆ ನಿಲ್ದಾಣ, ರೈಲ್ವೆ ಸಂಪರ್ಕ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವ ಪ್ರಯತ್ನ ಮಾಡುವೆ. ಸುಧಾ ಕ್ರಾಸ್ ಮೇಲುರಸ್ತೆ ನಿರ್ಮಾಣ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಆದಷ್ಟು ಬೇಗ ಮೇಲುರಸ್ತೆ ನಿರ್ಮಾಣ ಮಾಡಲಾಗುವುದು” ಎಂದು ತಿಳಿಸಿದರು.
ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ, “ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ 150ವರ್ಷಗಳ ಇತಿಹಾಸ ಇದೆ. ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸುವ ಸಲುವಾಗಿ ರೈಲ್ವೆ ನಿಲ್ದಾಣದಲ್ಲಿ ಸುಮಾರು 8ಗಂಟೆಗಳ ಕಾಲ ವಾಸ್ತವ್ಯ ಹೂಡಿದ್ದರು. ಅಂತಹ ರೈಲು ನಿಲ್ದಾಣವನ್ನು ಅಭಿವೃದ್ಧಿ ಮಾಡಬೇಕಾಗಿದೆ. ರೈಲ್ವೆ ಝೋನ್ ಅಭಿವೃದ್ಧಿ ಪಡಿಸಲು ಪರ್ಮಿಷನ್ ಬೇಕಾಗುತ್ತದೆ. ಪರ್ಮಿಷನ್ ಬೇಗ ಬಂದರೆ ರಾಜ್ಯ ಸರ್ಕಾರದಿಂದ ಝೋನ್ ಅಭಿವೃದ್ಧಿ ಪಡಿಸಲಾಗುವುದು. ಪಕ್ಷಾತೀತವಾಗಿ ಸಂಸದ ದೇವೇಂದ್ರಪ್ಪ ಅವರಿಗೆ ಬೆಂಬಲ ನೀಡುತ್ತೇವೆ” ಎಂದರು.
“ಅಮೃತ್ ಭಾರತ್ ನಿಲ್ದಾಣ ಯೋಜನೆ ಅಡಿಯಲ್ಲಿ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ನಗರದಲ್ಲಿನ ಐತಿಹಾಸಿಕ ಕಟ್ಟಡವಾದ ಬಳ್ಳಾರಿ ರೈಲ್ವೆ ನಿಲ್ದಾಣ ಆಯ್ಕೆಯಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ರೈಲ್ವೆ ಸಚಿವಾಲಯದ 508 ರೈಲ್ವೆ ನಿಲ್ದಾಣಗಳ ಪುನಾರಾಭಿವೃದ್ಧಿಗೆ ಆಗಸ್ಟ್ 6ರ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು” ಎಂದು ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಮಹೇಶ್ವರಯ್ಯ ಸ್ವಾಮಿ ತಿಳಿಸಿದ್ದಾರೆ.
“ನಗರದಲ್ಲಿನ ಬ್ರಿಟೀಷ್ ಕಾಲದ ಕಟ್ಟಡಗಳಲ್ಲಿ ಒಂದಾದ ರೈಲ್ವೆ ನಿಲ್ದಾಣ 1920ರಲ್ಲಿ ಲೋಕಾರ್ಪಣೆ ಆಗಿದ್ದು, ಸ್ವಾತಂತ್ರ್ಯಪೂರ್ವದಲ್ಲಿ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸಲು ಬಳ್ಳಾರಿಯಲ್ಲಿನ ರೈಲು ನಿಲ್ದಾಣಕ್ಕೆ ಆಗಮಿಸಿದ್ದು, ಸುಮಾರು 8 ಗಂಟೆಗಳ ಕಾಲ ಈ ನಿಲ್ದಾಣದಲ್ಲಿ ವಿಶ್ರಾಂತಿ ಪಡೆದಿರುವುದು ಇದೀಗ ಐತಿಹಾಸಿಕ ಘಟನೆೆ. ದಿನಕ್ಕೆ 46 ಪ್ಯಾಸೆಂಜರ್ ರೈಲುಗಳು ಹಾಗೂ 80ಕ್ಕೂ ಹೆಚ್ಚಿನ ಗೂಡ್ಸ್ ರೈಲುಗಳು ಇಲ್ಲಿ ಸಂಚರಿಸುತ್ತಿವೆ” ಎಂದು ಹೇಳಿದರು.
“ಪ್ರಧಾನ ಮಂತ್ರಿ ಅವರು ಮೊದಲ ಹಂತದ ಅಮೃತ್ ಭಾರತ್ ನಿಲ್ದಾಣ ಯೋಜನೆ ಅಡಿಯಲ್ಲಿ ದೇಶಾದ್ಯಂತ 508 ರೈಲ್ವೆ ನಿಲ್ದಾಗಳಿಗೆ ವಿಡಿಯೋ ಕಾನ್ಫರೆಸ್ ಮೂಲಕ ಗುರುವಾರ ಶಿಲಾನ್ಯಾಸ ಮಾಡಿದ್ದಾರೆ. ಇದರಲ್ಲಿ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ 6 ಮತ್ತು ಮೈಸೂರು ವಿಭಾಗದ 2 ನಿಲ್ದಾಣಗಳು ಸೇರಿವೆ” ಎಂದರು.
ಯಾವ ಯಾವ ರೈಲು ನಿಲ್ದಾಣಗಳ ಆಯ್ಕೆ?
ಅಮೃತ್ ಭಾರತ್ ನಿಲ್ದಾಣ ಯೋಜನೆ ಅಡಿಯಲ್ಲಿ ಹುಬ್ಬಳ್ಳಿ ವಿಭಾಗದ ಅಳ್ನಾವರ್, ಘಟಪ್ರಭಾ, ಗೋಕಾಕ್ ರೋಡ್ ಸೇರಿದಂತೆ ಗದಗ, ಕೊಪ್ಪಳ, ಬಳ್ಳಾರಿ ರೈಲು ನಿಲ್ದಾಣಗಳು ಆಯ್ಕೆಯಾಗಿದ್ದು, ಮೈಸೂರು ವಿಭಾಗದ ಅರಸಿಕೇರೆ, ಹರಿಹರ ರೈಲು ನಿಲ್ದಾಣಗಳೂ ಆಯ್ಕೆ ಆಗಿವೆ.
“ಅಮೃತ್ ಭಾರತ್ ನಿಲ್ದಾಣ ಯೋಜನೆ ಅಡಿಯಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ರೈಲು ನಿಲ್ದಾಣದ ನಿರಂತರ ಅಭಿವೃದ್ಧಿಗೆ ನಾಂದಿ ಹಾಡಲಾಗುತ್ತದೆ. ಪ್ರವೇಶ ದ್ವಾರ, ಸಂಚಾರ ಪ್ರದೇಶ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಶೌಚಾಲಯ, ದಿವ್ಯಾಂಗ ಪ್ರಯಾಣಿಕರಿಗೆ ಅನುಕೂಲವಾಗುವ ಲಿಫ್ಟ್ ಮತ್ತು ಎಸ್ಕಲೇಟರ್, ನಿಲ್ದಾಣ ಸ್ವಚ್ಛತೆ, ಉಚಿತ ವೈ-ಫೈ, ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಒಂದು ನಿಲ್ದಾಣ ಒಂದು ಉತ್ಪನ್ನಮಳಿಗೆ ಮೂಲಕ ಪ್ರಯಾಣಿಕರಿಗೆ ತಲುಪಿಸುವ ವ್ಯವಸ್ಥೆ, ಎಕ್ಸಿಕ್ಯೂಟಿವ್ ಲೌಂಜ್, ರಿಟೇಲ್(ಚಿಲ್ಲರೆ ವ್ಯಾಪಾರ) ಮಳಿಗೆಗಳಿಗೆ ಸ್ಥಳ, ನಿಲ್ದಾಣದ ವಿನ್ಯಾಸ ಸೇರಿದಂತೆ ಅನೇಕ ಸೌಕರ್ಯಗಳನ್ನು ಅಳವಡಿಸಲಾಗುವುದು” ಎಂದು ಅವರು ತಿಳಿಸಿದರು.
“ನಿಲ್ದಾಣದ ಕಟ್ಟಡವನ್ನು ಆಧುನಿಕ ವಸ್ತುವಿನ್ಯಾಸದೊಂದಿಗೆ ಸುಧಾರಣೆ, ನಿಲ್ದಾಣದ ಎರಡು ಬದಿಗಳನ್ನು ನಗರದೊಂದಿಗೆ ಸಂಪರ್ಕಿಸುವ ವ್ಯವಸ್ಥೆ ಸುಸ್ಥಿರ ಮತ್ತು ಪರಿಸರಸ್ನೇಹಿ ಅಭಿವೃದ್ಧಿ, ಜೆಲ್ಲಿಕಲ್ಲುರಹಿತ ಟ್ಯಾಂಕ್‌ಗಳ ನಿರ್ಮಾಣ, ರೂಫ್ ಪ್ಲಾಜಾಗಳು ಮತ್ತು ನಿಲ್ದಾಣಗಳನ್ನು ನಗರ ಕೇಂದ್ರಗಳನ್ನಾಗಿ (ಸಿಟಿ ಸೆಂಟರ್) ರೂಪಿಸುವ ಗುರಿಯನ್ನು ಹೊಂದಿದೆ” ಎಂದರು.
“2023ರ ಬಜೆಟ್‌ನಲ್ಲಿ ಅಮೃತ್ ಭಾರತ್ ನಿಲ್ದಾಣ ಯೋಜನೆ ಅಡಿಯಲ್ಲಿ ದೇಶಾದ್ಯಂತ 1,275 ನಿಲ್ದಾಣಗಳನ್ನು ಪುನರ್ ಅಭಿವೃದ್ಧಿ ಮಾಡಲಾಗುವುದು ಎಂದು ಘೋಷಿಸಿದಂತೆ ಕರ್ನಾಟಕದ 55 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ” ಎಂದು ಅವರು ತಿಳಿಸಿದರು.
ನಗರದ ಪಾರಂಪರಿಕ ಕಟ್ಟಡವಾದ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ಭಾನುವಾರ ವೇದಿಕೆ ಕಾರ್ಯಕ್ರಮದಲ್ಲಿ ಸಂಸದ ದೇವೇಂದ್ರಪ್ಪ, ಶಾಸಕ ನಾರಾ ಭರತ್ ರೆಡ್ಡಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.