ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿರುವ ಯೋಜನೆಗಳಾದ ಎಂಡಿಎಂ, ಐಸಿಡಿಎಸ್, ಎನ್ಎಚ್ಎಂ, ಐಸಿಪಿಎಸ್ , ಎಸ್ಎಸ್ಎ, ಮನರೇಗಾ ಸೇರಿದಂತೆ ಅನೇಕ ಯೋಜನೆಗಳನ್ನು ಕಾಯಂಗೊಳಿಸುವ ಮೂಲಕ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು. ಈ ಯೋಜನೆಯಲ್ಲಿ ದುಡಿಯುತ್ತಿರುವ ಒಂದು ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕೊಟ್ಟು ನೌಕರರ ಬೇಡಿಕೆಗಳು ಮುಂಬರುವ ಬಜೆಟ್ ಅಧಿವೇಶನದಲ್ಲಿ ಘೋಷಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ಹಾಗೂ ಬಿಸಿಯೂಟ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಜಿಲ್ಲಾ ಸಮಿತಿ ಬೀದರ್ನಲ್ಲಿ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಪಾಪನಾಶ ದೇವಸ್ಥಾನದ ಕಮಾನ್ದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ನೂರಾರು ಕಾರ್ಯಕರ್ತೆಯರು ಕೇಂದ್ರ ಸಚಿವ ಭಗವಂತ ಖೂಬಾ ಅವರ ಗೃಹ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ, ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
“ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಯಿಂದಾಗಿ ಕೋಟ್ಯಂತರ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸಿನಂತೆ ಈ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿ ಸೇರಿದಂತೆ ಒಂದು ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕಲ್ಪಿಸಿ ನೌಕರರೆಂದು ಪರಿಗಣಿಸಬೇಕು” ಎಂದು ಒತ್ತಾಯಿಸಿದರು.
“3-6 ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ನೀಡಲು ಕಾನೂನು ರಚಿಸಬೇಕು. ಈ ಯೋಜನೆಗಳಲ್ಲಿ ದುಡಿಯುವ ಗುತ್ತಿಗೆ, ಒಳಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಿ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. 49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು, 21 ವರ್ಷಗಳಿಂದ ದುಡಿಯುವ ಬಿಸಿಯೂಟದ ನೌಕರರಿಗೆ ಆಶಾ ಮತ್ತು ಇತರೆ ಸಿಬ್ಬಂದಿಗೆ 31 ಸಾವಿರ ರೂ. ಕನಿಷ್ಠ ವೇತನ ಜಾರಿ ಮಾಡಬೇಕು. ಕನಿಷ್ಠ 10 ಸಾವಿರ ರೂ. ಪಿಂಚಣಿ ಕೊಡಬೇಕು” ಎಂದು ಆಗ್ರಹಿಸಿದರು.
ಕೇಂದ್ರ ಸಚಿವ ಭಗವಂತ ಖೂಬಾ ಅವರು ಸ್ಥಳೀಯವಾಗಿ ಲಭ್ಯವಿರಲಿಲ್ಲ, ಸಚಿವರು ಬರುವರೆಗೂ ಪ್ರತಿಭಟನೆ ಮುಂದುವರೆಸಲಾಗುವುದು ಎಂದು ಪಟ್ಟು ಹಿಡಿದಿದ್ದರು. ನಂತರ ಸಚಿವರು ಫೋನ್ ಮೂಲಕ ಸಂಘಟನೆ ಮುಖಂಡರೊಂದಿಗೆ ಮಾತನಾಡಿ ಜ.29ರಂದು ಸಭೆ ನಡೆಸಿ, ನಿಮ್ಮ ಬೇಡಿಕೆಗಳ ಕುರಿತು ಚರ್ಚಿಸುವೆ ಎಂದು ಭರವಸೆ ನೀಡಿದರು. ನಂತರ ಸಚಿವರ ಆಪ್ತ ಕಾರ್ಯದರ್ಶಿಯವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ದಲಿತ ವಿದ್ಯಾರ್ಥಿಗೆ ʼಜೈ ಶ್ರೀರಾಮ್ʼ ಹೇಳುವಂತೆ ಒತ್ತಾಯ; ಹಲ್ಲೆ ಆರೋಪ
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಸುಶೀಲಾ ಹತ್ತಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜೈಶ್ರೀ ಮೆಂಡೋಳೆ, ಕಾರ್ಯದರ್ಶಿ ಶ್ರೀದೇವಿ ಚಿವಡೆ, ಪದಾಧಿಕಾರಿಗಳಾದ ಶಕುಂತಾಲಾ ಸೋನಿ, ಶಾಂತ ನಾಗುರೆ, ಪದ್ಮಾವತಿ ಸ್ವಾಮಿ, ಉಷಾ ಗುತ್ತೆದಾರ, ರೇಖಾ ಅನೀಲಕುರಕರ್ , ಪುಷ್ಪಾ ಸೇರಿದಂತೆ ನೂರಾರು ಅಂಗನವಾಡಿ ಹಾಗೂ ಅಕ್ಷರ ದಾಸೋಹ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.