ಅಂಕೋಲಾ: ತಾಲೂಕಿನ ಪ್ರಸಿದ್ಧ ಬೆಳಂಬಾರ ಕಡಲ ತೀರದಲ್ಲಿ ಶನಿವಾರ ಸುಮಾರು 8 ಅಡಿ ಉದ್ದದ ಅಪರೂಪದ ಡಾಲ್ಫಿನ್ನ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಮೀನುಗಾರರು ಕಡಲ ತೀರಕ್ಕೆ ಆಗಮಿಸಿ ಡಾಲ್ಫಿನ್ ಅನ್ನು ವೀಕ್ಷಿಸಿದರು.
ಸ್ಥಳೀಯ ನಿವಾಸಿ ನಂದನ ಖಾರ್ವಿ ಹಾಗೂ ಮೀನುಗಾರರು ಸಮುದ್ರ ತೀರಕ್ಕೆ ತೆರಳಿದ್ದ ವೇಳೆ ಡಾಲ್ಫಿನ್ನ ಮೃತದೇಹವನ್ನು ಗಮನಿಸಿ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಅರಣ್ಯ ಇಲಾಖೆ ಹಾಗೂ ಸಾಗರ ವನ್ಯಜೀವಿ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಡಾಲ್ಫಿನ್ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ತಂದೆ ಹತ್ಯೆ, ತಾಯಿ ಜೈಲು ಪಾಲು; ಅನಾಥರಾದ ಮಕ್ಕಳ ನೆರವಿಗೆ ಧಾವಿಸಿದ ಶಾಸಕ ಭೀಮಣ್ಣ ನಾಯ್ಕ್
ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತ ಡಾಲ್ಫಿನ್ ‘ಇಂಡೋ-ಪೆಸಿಫಿಕ್ ಹಂಪ್ಬ್ಯಾಕ್ ಡಾಲ್ಫಿನ್’ (Indo-Pacific Humpback Dolphin) ಪ್ರಭೇದಕ್ಕೆ ಸೇರಿರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಬೂದು ಅಥವಾ ಕಪ್ಪು ಬಣ್ಣದಲ್ಲಿರುವ ಈ ಡಾಲ್ಫಿನ್, ಸಾವಿನ ಬಳಿಕ ಬಿಳಿ ಬಣ್ಣಕ್ಕೆ ತಿರುಗಿರುವುದು ಕಂಡುಬಂದಿದ್ದು, ಕೆಲ ದಿನಗಳ ಹಿಂದೆಯೇ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಡಾಲ್ಫಿನ್ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ಸುರಿದ ಭಾರೀ ಮಳೆ, ಬಿರುಗಾಳಿ ಹಾಗೂ ಪ್ರಕ್ಷುಬ್ಧ ಸಮುದ್ರದ ಅಲೆಗಳ ಅಬ್ಬರದಿಂದ ದಾರಿ ತಪ್ಪಿ ಬಂಡೆಗೆ ಡಿಕ್ಕಿ ಹೊಡೆದಿರುವುದು ಅಥವಾ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.
ವಯೋಸಹಜ ಕಾರಣ ಅಥವಾ ಅನಾರೋಗ್ಯವೂ ಸಾವಿಗೆ ಕಾರಣವಾಗಿರಬಹುದೆಂಬ ಸಾಧ್ಯತೆಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಡಾಲ್ಫಿನ್ಗಳು ಭಾರತದಲ್ಲಿ ಸಂರಕ್ಷಿತ ಸಮುದ್ರ ಜೀವಿಗಳ ಪಟ್ಟಿಗೆ ಸೇರಿರುವುದರಿಂದ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮುದ್ರ ಪರಿಸರ ವ್ಯವಸ್ಥೆಯಲ್ಲಿ ಡಾಲ್ಫಿನ್ಗಳು ಪ್ರಮುಖ ಪಾತ್ರವಹಿಸುವ ಜೀವಿಗಳಾಗಿದ್ದು, ಅವುಗಳ ಸಾವಿನ ನೈಜ ಕಾರಣ ಪತ್ತೆಹಚ್ಚುವುದು ಸಮುದ್ರ ಪರಿಸರದ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.





