ಶಿರಸಿ: ತಂದೆ ಹತ್ಯೆಯಾಗಿ, ತಾಯಿ ಜೈಲು ಸೇರಿರುವ ಕಾರಣದಿಂದ ಅನಾಥರಾಗಿ ಬೀದಿಗೆ ಬಂದಿದ್ದ ಇಬ್ಬರು ಪುಟ್ಟ ಮಕ್ಕಳ ಕರುಣಾಜನಕ ಸ್ಥಿತಿಗೆ ಶಿರಸಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಭೀಮಣ್ಣ ನಾಯ್ಕ್ ಅವರು ಮಾನವೀಯತೆಯಿಂದ ಸ್ಪಂದಿಸಿದ್ದಾರೆ.
ತಂದೆಯನ್ನು ಕಳೆದುಕೊಂಡು, ತಾಯಿಯ ಅಕ್ಕರೆಯಿಂದ ವಂಚಿತರಾಗಿರುವ ಈ ಮಕ್ಕಳ ದುರ್ದೈವದ ಕಥೆಯನ್ನು ಅರಿತ ಶಾಸಕರು, ತಕ್ಷಣವೇ ವೈಯಕ್ತಿಕವಾಗಿ ನೆರವಿಗೆ ಧಾವಿಸಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರ ಹೆಸರಿನಲ್ಲಿ ತಲಾ 20,000 ರೂಪಾಯಿಯಂತೆ ಒಟ್ಟು 40,000 ರೂಪಾಯಿಗಳ ಎರಡು ಬಾಂಡ್ಗಳನ್ನು ಮಾಡಿಸಿಕೊಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಸಂತೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅರಿವು ಅಭಿಯಾನ; ಜುಲೈ 29ರೊಳಗೆ ಗಣತಿ ನಮೂನೆ ಸಲ್ಲಿಸಲು ಕರೆ
ಈ ಮೂಲಕ ಮಕ್ಕಳ ಮುಂದಿನ ವಿದ್ಯಾಭ್ಯಾಸ ಮತ್ತು ಭವಿಷ್ಯದ ಅಗತ್ಯಗಳಿಗೆ ಆರ್ಥಿಕ ಭದ್ರತೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಜೈಲಿನಲ್ಲಿರುವ ತಾಯಿ ಮನೆಗೆ ಮರಳುವವರೆಗೆ ಆ ಮಕ್ಕಳ ದೈನಂದಿನ ಜೀವನ ಹಾಗೂ ಮನೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು, ತುರ್ತು ಖರ್ಚಿಗಾಗಿ 10,000 ರೂಪಾಯಿ ನಗದು ಹಣವನ್ನೂ ಕೂಡ ನೀಡಿದ್ದಾರೆ.
ಹೀಗೆ ಒಟ್ಟು 50,000 ರೂಪಾಯಿಗಳ ವೈಯಕ್ತಿಕ ಆರ್ಥಿಕ ನೆರವು ನೀಡುವ ಮೂಲಕ ಶಾಸಕರು ಸಂಕಷ್ಟದಲ್ಲಿರುವ ಕುಟುಂಬದ ಬಾಳಿನಲ್ಲಿ ಭರವಸೆಯ ಬೆಳಕಾಗಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳ ಆರೈಕೆ ಹಾಗೂ ಅವರ ಶಿಕ್ಷಣದ ಕುರಿತು ವಿಶೇಷ ಕಾಳಜಿ ವಹಿಸುವುದಾಗಿ ಭರವಸೆ ನೀಡಿರುವ ಶಾಸಕ ಭೀಮಣ್ಣ ನಾಯ್ಕ್, ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಶಾಸಕರ ಈ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಸಂಕಷ್ಟದಲ್ಲಿರುವ ಕುಟುಂಬದ ನೆರವಿಗೆ ಧಾವಿಸಿರುವ ಅವರ ಸಾಮಾಜಿಕ ಕಾಳಜಿಯನ್ನು ಶ್ಲಾಘಿಸಿದ್ದಾರೆ.




