ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರ ಸಂಖ್ಯೆ ಹೆಚ್ಚುತ್ತಿರುವ ಪ್ರಸ್ತುತ ದಿನಗಳಲ್ಲಿ, ಮತ್ತೊಂದು ಸರ್ಕಾರಿ ಮಾದರಿ ಶಾಲೆಯ ಸ್ಥಿತಿಯು ಈ ಅಭಿಪ್ರಾಯಕ್ಕೆ ಪೂರಕ ಉದಾಹರಣೆಯಾಗಿದೆ.
ಶಿವಮೊಗ್ಗದ ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಭದ್ರಾ ನದೀ ಯೋಜನೆಯಲ್ಲಿರುವ ಬಿಆರ್ ಪ್ರಾಜೆಕ್ಟ್ (ಬಿಆರ್‌ಪಿ) ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಳೆದ ಆರು ದಶಕಗಳಿಂದ ವಿದ್ಯಾಭ್ಯಾಸದ ಬೆಳಕು ಹರಡುತ್ತಿದ್ದ ಒಂದು ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿತ್ತು. 1963ರಲ್ಲಿ ಸ್ಥಾಪಿತವಾದ ಈ ಶಾಲೆಯು ಕನ್ನಡ ಹಾಗೂ ಆಂಗ್ಲ ಮಾಧ್ಯಮಗಳಲ್ಲಿ ಒಂದರಿಂದ ಎಂಟನೇ ತರಗತಿವರೆಗಿನ ಪಠ್ಯಕ್ರಮವನ್ನು ಒದಗಿಸುತ್ತಿದೆ.
ಕಳೆದ ಎರಡು ವರ್ಷಗಳಿಂದ ಶಾಲೆಯ ಸ್ಥಿತಿ ದಿನೇದಿನೇ ಕುಸಿಯುತ್ತಿದ್ದು, ಇದೀಗ ಅದು ಅನಾರೋಗ್ಯದ ಹಂತ ತಲುಪಿದೆ. ಮೂಲಭೂತ ಸೌಲಭ್ಯಗಳ ಕೊರತೆ, ನಿರಂತರ ನಿರ್ಲಕ್ಷ್ಯ, ಹಾಗೂ ನಿರ್ವಹಣೆಯ ಕೊರತೆಯು ಶಾಲೆಯ ಒಟ್ಟು ಕಾರ್ಯಕ್ಷಮತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಈ ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ 230ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಆದರೆ ಪ್ರಸಕ್ತ ವರ್ಷ ಈ ಸಂಖ್ಯೆ 150-160ರ ಒಳಗೆ ಇಳಿದಿರುವುದು ಉಲ್ಬಣಗೊಳ್ಳುತ್ತಿರುವ ಸಮಸ್ಯೆಯ ನಿಖರ ಸೂಚಕವಾಗಿದೆ. ಶಾಲೆಯ ವಿಶ್ವಾಸಾರ್ಹತೆ ಮತ್ತು ಆಡಳಿತಾತ್ಮಕ ಸ್ಥಿರತೆ ಕುರಿತು ಪೋಷಕರು, ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಶಾಲೆಯನ್ನು ಕುವೆಂಪು ವಿಶ್ವವಿದ್ಯಾಲಯ ದತ್ತು ಪಡೆದು ನಿರ್ವಹಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ. ಆದರೆ ನಿರ್ವಹಣಾ ಮಟ್ಟದಲ್ಲಿ ಅಗತ್ಯವಾದ ಬದಲಾವಣೆಗಳು ಅಥವಾ ನವೀಕರಣದ ಚಟುವಟಿಕೆಗಳು ಸರಿಯಾಗಿ ಜರುಗದಿರುವುದು ಸಹ ಪೋಷಕರು ಮತ್ತು ಸ್ಥಳೀಯರ ನಿರಾಸೆಗೆ ಕಾರಣವಾಗಿದೆ.

ಬಿಆರ್ ಪಿ ಮಾದರಿ ಶಾಲೆಯಲ್ಲಿರುವ ಶೌಚಾಲಯಗಳ ಸ್ಥಿತಿ ವಿದ್ಯಾರ್ಥಿಗಳ ನಿತ್ಯ ಯಾತನೆಗೆ ಕಾರಣವಾಗಿದೆ. ಹೆಸರಿಗಷ್ಟೇ ಅಸ್ತಿತ್ವದಲ್ಲಿರುವ ಶೌಚಾಲಯಗಳು ಬಳಸಲು ಅಸಾಧ್ಯವಾಗಿರುವಷ್ಟು ಗಲೀಜಾಗಿ, ಕೊಳಕಿನಿಂದ ತುಂಬಿ ನಾರುತ್ತಿವೆ. ಇದು ಮಕ್ಕಳ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುವುದು ಸ್ಪಷ್ಟವಾಗಿದೆ. ಶೌಚಾಲಯದ ಬಾಗಿಲುಗಳಿಲ್ಲದಿರುವುದು ಅವರ ಗೌರವಕ್ಕೂ ಧಕ್ಕೆಯಾಗುತ್ತಿದೆ. ಎಲ್ಲೆಲ್ಲೂ ಗಬ್ಬು, ದುರ್ಗಂಧ ಹಾಗೂ ಸ್ವಚ್ಛತೆಯ ದರ್ಶನವೇ ಇಲ್ಲದ ಈ ಪರಿಸ್ಥಿತಿಯಲ್ಲಿ ಶೌಚಾಲಯ ಬಳಸುವುದೇ ವಿದ್ಯಾರ್ಥಿಗಳಿಗೆ ಒಂದು ಸಂಕಟವಾಗಿದೆ.
ಹೊಸವಾಗಿ ಶೌಚಾಲಯವನ್ನು ನಿರ್ಮಿಸಿರುವುದು ಗ್ರಾಮ ಪಂಚಾಯತಿ ಯೋಜನೆಯ ಭಾಗವಾಗಿ ನಡೆದರೂ, ಇದುವರೆಗೆ ಆ ಶೌಚಾಲಯವನ್ನು ವಿದ್ಯಾರ್ಥಿಗಳು ಬಳಸಬಹುದಾದಂತೆ ನಿರ್ವಹಣೆ ಮಾಡಿಲ್ಲ. ಬೀಗದ ಕೈ ನೀಡದೆ, ಬಾಗಿಲುಗಳನ್ನು ತೆರೆಯದೇ ನಿರ್ಲಕ್ಷ್ಯದಿಂದಾಗಿ ಮಕ್ಕಳಿಗೆ ಅದು ಲಭ್ಯವಾಗಿಲ್ಲ. ಈ ಸ್ಥಿತಿಯಲ್ಲಿ ಪೋಷಕರಿಗೆ ತಮ್ಮ ಮಕ್ಕಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದ್ದು, ಶಿಕ್ಷಣದ ಜತೆಗೆ ಆರೋಗ್ಯದ ಭದ್ರತೆಗೆ ಸಹ ಈ ಪರಿಸ್ಥಿತಿ ಆತಂಕದ ಸಂಗತಿಯಾಗಿ ಪರಿಣಮಿಸಿದೆ.

ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟ ಯೋಜನೆಯ ಸ್ಥಿತಿಯೂ ಶೋಚನೀಯವಾಗಿದೆ. ಅಡುಗೆ ತಯಾರಿಗಾಗಿ ಪ್ರತ್ಯೇಕ ಅಡುಗೆ ಕೋಣೆ ಇಲ್ಲದ ಕಾರಣದಿಂದ, ಶಾಲೆಯ ಒಂದು ತರಗತಿಯನ್ನೇ ಅಡುಗೆ ಮಾಡುವ ಸ್ಥಳವನ್ನಾಗಿ ಬಳಸಲಾಗುತ್ತಿದೆ. ಇದು ತರಗತಿ ಕ್ರಮದ ವ್ಯವಸ್ಥೆಗೆ ಗಂಭೀರ ಧಕ್ಕೆಯುಂಟುಮಾಡಿದೆ.
ಅದೇ ರೀತಿ, ಮಕ್ಕಳಿಗೆ ಊಟ ಮಾಡುವ ಸೂಕ್ತ ವ್ಯವಸ್ಥೆ ಕೂಡ ಇಲ್ಲ. ಬಹುತೇಕ ಸಮಯ ಅವರು ಕಸ-ಕೊಚ್ಚೆಯ ಜಾಗದಲ್ಲಿ, ಗಲೀಜು ಪರಿಸರದ ಮಧ್ಯೆ ಕುಳಿತು ಊಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಅನಾರೋಗ್ಯದ ಅಪಾಯ ಹೆಚ್ಚಿದ್ದು, ಬಡ ಕುಟುಂಬದ ವಿದ್ಯಾರ್ಥಿಗಳ ಶಾರೀರಿಕ ಕ್ಷೇಮಕ್ಕೆ ಇದು ಅಡ್ಡಿಯಾಗುತ್ತಿದೆ.
ಈ ಮಧ್ಯೆ, ಶಾಲೆಯ ಕೆಲವು ಕಟ್ಟಡಗಳು ಶಿಥಿಲಗೊಂಡಿದ್ದು, ಅವುಗಳನ್ನು ಸರಿಪಡಿಸುವತ್ತ ಶಿಕ್ಷಣ ಇಲಾಖೆಯು ಅಗತ್ಯ ಕ್ರಮ ಕೈಗೊಂಡಿಲ್ಲ. ಶಾಲೆಯ ಹಳೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಸುರಕ್ಷತೆಯೂ ಇಲ್ಲದ ಪರಿಸ್ಥಿತಿಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಈ ಸಂಬಂಧ ಕಳೆದ ನಾಲ್ಕು ವರ್ಷಗಳಿಂದ ಗ್ರಾಮ ಪಂಚಾಯತಿ ಹಾಗೂ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನಗಳು ನಡೆದರೂ ಸಹ ಯಾವುದೇ ಸ್ಪಂದನೆ ದೊರೆತಿಲ್ಲ. “ಈ ಸಮಸ್ಯೆಗಳು ನಮ್ಮವಲ್ಲ” ಎಂಬ ರೀತಿಯಲ್ಲಿ ಅಧಿಕಾರಿಗಳು ನಿಷ್ಕ್ರಿಯತೆ ತೋರಿಸುತ್ತಿದ್ದಾರೆ ಎಂಬುದು ಸ್ಥಳೀಯರ ಆಕ್ರೋಶ.
SDMC ಸದಸ್ಯೆಯ ಮನವಿ
ಈ ಎಲ್ಲ ಸಮಸ್ಯೆಗಳ ಕುರಿತು ಶಾಲೆಯ ಎಸ್.ಡಿ.ಎಂ.ಸಿ ಸದಸ್ಯೆಯಾಗಿರುವ ನಾಗರತ್ನಾ ಈದಿನ ಡಾಟ್ ಕಾಮ್ನೊಂದಿಗೆ ಮಾತನಾಡಿ, ಐದು ವರ್ಷಗಳಿಂದ ಸ್ಥಳೀಯ ಆಡಳಿತ ಮತ್ತು ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಾಮಾಣಿಕ ಸ್ಪಂದನೆ ಇಲ್ಲವೆಂದು ತೀವ್ರ ಅಸಹನೆ ವ್ಯಕ್ತಪಡಿಸಿದರು. “ಈ ಪರಿಸ್ಥಿತಿಯಲ್ಲಿ ಪೋಷಕರು ಹೇಗೆ ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸಲು ಧೈರ್ಯ ಮಾಡುತ್ತಾರೆ?” ಎಂದು ಪ್ರಶ್ನಿಸಿದರು. ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳ ಗಮನ ಸೆಳೆಯಲು ಮನವಿ ಮಾಡಿದ್ದಾರೆ. ಸಮಸ್ಯೆಗಳ ಶೀಘ್ರ ಪರಿಹಾರ ಹಾಗೂ ಶಾಲೆಯ ಪುನಶ್ಚೇತನಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬದು ಅವರ ಆಗ್ರಹ.

ಗ್ರಾಮದ ನಿವಾಸಿ ಹಾಗೂ ಪೋಷಕರಾದ ಪೂಜಾ ಮಾತನಾಡಿ, “ಮಕ್ಕಳಿಗಾಗಿ ಶೌಚಾಲಯದ ಸರಿಯಾದ ವ್ಯವಸ್ಥೆ ಇಲ್ಲ. ಹೆಣ್ಣುಮಕ್ಕಳಿಗೆ ಬಾಗಿಲಿಲ್ಲದ ಶೌಚಾಲಯವನ್ನು ಬಳಸುವುದು ಅಪಾಯಕಾರಿಯಾಗಿದೆ. ಊಟ ತಯಾರಿಗಾಗಿ ಪ್ರತ್ಯೇಕ ಕೊಠಡಿ ಇಲ್ಲ. ಈ ವಿಷಯಗಳನ್ನು ನಾವು ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಫಲವಿಲ್ಲ” ಎಂದರು. ಪೂಜಾ ಸೇರಿದಂತೆ ಹಲವಾರು ಪೋಷಕರು, “ಸಮಸ್ಯೆ ಬಗೆಹರಿಯದಿದ್ದರೆ ಶಾಲೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು. ಮಕ್ಕಳ ಆರೋಗ್ಯ ಹಾಗೂ ಭವಿಷ್ಯದ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು” ಎಚ್ಚರಿಸಿದರು.
“ಹಣವಂತರು ಖಾಸಗಿ ಶಾಲೆಗೆ ಕಳುಹಿಸುತ್ತಾರೆ, ಆದರೆ ದಿನಗೂಲಿ ಕಾರ್ಮಿಕರು, ರೈತರು, ಬಡವರು – ಇಂತಹವರು ಏನು ಮಾಡಬೇಕು? ನಮಗೂ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಬೇಕು. ಆದರೆ ಈಗಿನ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ” ಎಂದು ಪೋಷಕರು ಅಳಲು ತೋಡಿಕೊಂಡರು.

ಆನಂದ್ ಎಂಬುವವರು ಮಾತನಾಡುತ್ತಾ, “ಮೂರು ವರ್ಷಗಳ ಹಿಂದೆ ಶಾಲೆಗೆ ಶೌಚಾಲಯಕ್ಕಾಗಿ ನಾಲ್ಕು ಲಕ್ಷ ರೂಪಾಯಿಗಳಷ್ಟು ಹಣ ಬಿಡುಗಡೆ ಆಗಿದೆ ಎಂದು ಹೇಳುತ್ತಾರೆ. ಆದರೆ ಶೌಚಾಲಯ ಕಟ್ಟಿದರೂ, ಬಾಗಿಲು ತೆಗೆಯದೇ ಹಾಗೇ ಬೀಗ ಹಾಕಿ ಇಟ್ಟಿದ್ದಾರೆ. ಹೆಣ್ಣು ಮಕ್ಕಳ ಹಳೆಯ ಶೌಚಾಲಯಕ್ಕೆ ತೆರಳುವಾಗ ಬಾಗಿಲು ಮುಚ್ಚಲು ಯಾವುದೇ ವ್ಯವಸ್ಥೆಯಿಲ್ಲ. ಶೌಚಾಲಯದ ಸುತ್ತ ಕೇವಲ ನಾಲ್ಕು ಅಡಿ ಎತ್ತರದ ಕಾಂಪೌಂಡ್ ಮಾತ್ರವಿದ್ದು, ಯಾರಾದರೂ ಬಂದು ಮೊಬೈಲ್‌ಫೋನ್‌ನಲ್ಲಿ ವಿಡಿಯೋ ತೆಗೆದರೆ, ಅಥವಾ ಏನಾದರೂ ಅಹಿತಕರ ಘಟನೆ ನಡೆದರೆ, ಅದಕ್ಕೆ ಯಾರು ಹೊಣೆ? ಮಳೆಗಾಲದಲ್ಲಿ ಶೌಚಾಲಯದ ಸುತ್ತಮುತ್ತೆಲ್ಲ ನೆಲ ಹಸಿಯಾಗಿದ್ದು, ಕೊಚ್ಚೆಯ ನೀರು ಹರಿದು ಗಲೀಜು ಪರಿಸರದಲ್ಲಿಯೇ ಮಕ್ಕಳಿಗೆ ಊಟ ನೀಡಲಾಗುತ್ತಿದೆ. ಇಂತಹ ಅವ್ಯವಸ್ಥೆಯ ಮಧ್ಯೆ ನಮ್ಮ ಮಕ್ಕಳು ಆರೋಗ್ಯವಂತರಾಗಿ ವಿದ್ಯಾಭ್ಯಾಸ ಮಾಡುವುದು ಹೇಗೆ?” ಎಂದು ಆತಂಕ ವ್ಯಕ್ತಪಡಿಸಿದರು.

ಶಾಲೆಯ ಮುಖ್ಯ ಶಿಕ್ಷಕರು ಮೇ ತಿಂಗಳಲ್ಲಿ ನಿವೃತ್ತರಾಗಿದ್ದು, ಶಾಲೆಗೆ ಹೊಸ ಮುಖ್ಯ ಶಿಕ್ಷಕರನ್ನು ಇನ್ನೂ ನಿಯೋಜಿಸಿಲ್ಲ. ಈ ಸಂದರ್ಭದಲ್ಲಿ ಕೆಲವೊಂದು ನಿರ್ಧಾರಾತ್ಮಕ ವಿಷಯಗಳಿಗೂ ಸ್ಪಷ್ಟತೆ ಇಲ್ಲದೇ ಇರುತ್ತದೆ. ಪ್ರಸ್ತುತ ಶಾಲೆಯ ಇಂಚಾರ್ಜ್ ಶಿಕ್ಷಕರೇ ನಿರ್ವಹಣಾ ಜವಾಬ್ದಾರಿ ಹೊತ್ತಿದ್ದಾರೆ. ಆದರೆ ಸ್ಥಿತಿಗತಿಯ ಗಂಭೀರತೆ ಹಾಗೂ ನಿರಂತರ ಅಭಿವೃದ್ಧಿಗೆ ನೇತೃತ್ವದ ಕೊರತೆ ಸ್ಪಷ್ಟವಾಗಿದೆ.
“ನಾನು ಶೌಚಾಲಯ ಕಟ್ಟಿಸಿದ್ದೇನೆ. ಆದರೆ ಸರ್ಕಾರ ಇನ್ನೂ ನನ್ನ ಹಣ ಪಾವತಿಸಿಲ್ಲ. ಹಾಗಾಗಿ ಬೀಗದ ಕೀ ನೀಡುವುದಿಲ್ಲ” ಎಂಬುದು ಗ್ರಾಮ ಪಂಚಾಯತ್ ವತಿಯಿಂದ ನೂತನವಾಗಿ ನಿರ್ಮಿಸಲಾದ ಶೌಚಾಲಯಗಳ ಕಂಟ್ರಾಕ್ಟರ್ ನಿಲುವು. ಇದರಿಂದಾಗಿ ಹೊಸ ಶೌಚಾಲಯ ಇದ್ದರೂ ಅದು ಬಳಕೆಗೆ ಲಭ್ಯವಿಲ್ಲ.

ಶಾಲೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳ ಕುರಿತು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಮಾತನಾಡಿ, “ಶಾಲೆಯ ಸ್ಥಿತಿಗತಿಯನ್ನು ನಾವು ನಿರಂತರವಾಗಿ ಗಮನದಲ್ಲಿಟ್ಟುಕೊಂಡಿದ್ದೇವೆ. ಆದರೆ ಸರ್ಕಾರದಿಂದ ಪ್ರತ್ಯಕ್ಷ ಹಣಕಾಸು ನೆರವು ಸರಿಯಾಗಿ ಲಭಿಸದ ಕಾರಣ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಅಡಚಣೆ ಉಂಟಾಗಿದೆ. ಶಾಲಾ ಕಟ್ಟಡಕ್ಕೆ ಶೀಟ್ ಅಳವಡಿಸಿರುವುದರಿಂದ ಮಳೆಗಾಲದಲ್ಲಿ ಭಾರೀ ಶಬ್ದ ಉಂಟಾಗಿ ಮಕ್ಕಳಿಗೆ ತರಗತಿ ನಡೆಸಲು ತೊಂದರೆಯಾಗುತ್ತಿದೆ. ಅದೇ ರೀತಿ ಬೇಸಿಗೆಯಲ್ಲಿ ಸೆಕೆಯಿಂದ ಬಳಲುವಂತಾಗಿದೆ”
“ಹಾಗಾಗಿ ಶೀಟ್ ಪರಿಷ್ಕರಣೆ ಮಾಡುವ ಅಗತ್ಯವಿದೆ ಎಂಬುದನ್ನು ಸಂಬಂಧಪಟ್ಟ ಇಲಾಖೆಗೆ ಈಗಾಗಲೇ ತಿಳಿಸಲಾಗಿದೆ.ನಾನು ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಮೇಲೆ, ಭದ್ರಾವತಿ ಕ್ಷೇತ್ರದ ಶಾಸಕರು 7.5 ಲಕ್ಷ ರೂ. ಹಣವನ್ನು ಶಾಲೆ ಅಭಿವೃದ್ಧಿಗೆ ಕೊಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪರವರ ಗಮನಕ್ಕೂ ಈ ಬಗ್ಗೆ ಮನವಿ ಮಾಡಲಾಗಿದೆ. ಅಡುಗೆ ಮನೆ ನಿರ್ಮಾಣಕ್ಕೆ 7.5 ಲಕ್ಷ ರೂ., ಶೌಚಾಲಯ ನಿರ್ಮಾಣಕ್ಕೆ 90,000 ರೂ. ವೆಚ್ಚವಾಗಿದ್ದು, ಈ ಧನವನ್ನು ಗ್ರಾಮ ಪಂಚಾಯತ್ ವತಿಯಿಂದ ವ್ಯಯಿಸಲಾಗಿದೆ. ಆದರೆ, ಈ ಕೆಲಸಗಳಲ್ಲಿನ ನಿರಂತರ ಜವಾಬ್ದಾರಿ ನಿರ್ವಹಿಸಲು ಸರ್ಕಾರದ ಸಮರ್ಪಿತ ನೆರವು ಅಗತ್ಯವಾಗಿದೆ” ಎಂದರು.

ಇದೇ ಶಾಲೆಗೆ ‘ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ಕಲ್ಯಾಣ’ ಹೆಸರಿನಲ್ಲಿ ಒಂದೂವರೆ ವರ್ಷದ ಹಿಂದೆಯೇ ಟೈಲ್ಸ್ ಹಾಕಿಸಲು ಮೀಸಲಿಟ್ಟ ಹಣವನ್ನು ದುರುಪಯೋಗಗೊಳಿಸಲಾಗಿದೆ ಎಂಬುದು ಸ್ಥಳೀಯರ ಗಂಭೀರ ಆರೋಪ. ಈ ಹಣದ ಅನಿಯಮಿತ ಬಳಕೆಯ ವಿರುದ್ಧ ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಅಕ್ಷೇಪ ವ್ಯಕ್ತಪಡಿಸಿದ್ದಕ್ಕೆ, ನಂತರ ಜಿಲ್ಲಾ ಪಂಚಾಯತ್‌ನಿಂದ ಹೊಸ ಅನುದಾನ ಪಡೆದು ಮತ್ತೆ ಟೈಲ್ಸ್ ಹಾಕಿಸಲಾಗಿದೆ ಎಂದು ವರದಿಯಾಗಿದೆ. ಇದೇ ರೀತಿ ನರೇಗಾ ಯೋಜನೆಯ ಹಣವನ್ನು ಶಾಲಾ ಅಭಿವೃದ್ಧಿಯ ಹೆಸರಿನಲ್ಲಿ ಬಳಸಲಾಗಿದೆ ಎಂಬುದೂ ಆರೋಪವಾಗಿದೆ.
ಈ ಕುರಿತು ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್, “ಹೌದು, ಸಾಕಷ್ಟು ಅವ್ಯವಹಾರಗಳಾಗಿವೆ. ನಾನು ಹಲವು ಬಾರಿ ಮಾತನಾಡಿದ್ದೇನೆ. ಆದರೂ ಕ್ರಮವಾಗಿಲ್ಲ. ಈಗ ಸಮಗ್ರ ತನಿಖೆ ನಡೆಯಬೇಕು. ಗ್ರಾಮ ಪಂಚಾಯತಿ ಒಳಗೂ ಹಲವು ರೀತಿಯ ಅಕ್ರಮ ಅವ್ಯವಹಾರಗಳು ನಡೆಯುತ್ತಿವೆ. ಅಧಿಕಾರಿಗಳು ಇದನ್ನೂ ಗಂಭೀರವಾಗಿ ಪರಿಗಣಿಸಿ, ಪ್ರಾಮಾಣಿಕ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.

ಇನ್ನು ಶಾಲೆ ಸಂಬಂಧ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನ ಸಂಪರ್ಕಿಸಿದಾಗ, ಲೋಕಾಯುಕ್ತ ಸಭೆಯಲ್ಲಿರುವುದಾಗಿ ಹಾಗೂ ಸಭೆ ಮುಗಿದ ಬಳಿಕ ಕರೆ ಮಾಡುವುದಾಗಿ ತಿಳಿಸಿರುತ್ತಾರೆ. ಮತ್ತೆ ಸಂಪರ್ಕಕ್ಕೆ ಲಭ್ಯವಾಗಿಲ್ಲ.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸುಮಿತ್ರಾ ಮಾತನಾಡಿ, “ನಾನು ಇಲ್ಲಿ ನಿಯೋಜನೆಯಾಗಿ ಕೇವಲ ಮೂರು ತಿಂಗಳಷ್ಟೇ ಆಗಿದ್ದು, ಈ ಅವಧಿಯಲ್ಲಿ ಶಾಲೆಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಈಗ ಕ್ರಮ ಕೈಗೊಳ್ಳಲಾಗಿದೆ. ಶಾಲೆಯ ಶೌಚಾಲಯ ಕಾಮಗಾರಿ ಇನ್ನೂ ಭಾಗಶಃ ಬಾಕಿ ಇದೆ. ಮುಂದಿನ ಹತ್ತು ದಿನಗಳೊಳಗೆ ಶೌಚಾಲಯವನ್ನು ಪೂರ್ಣವಾಗಿ ಕಾರ್ಯನಿರ್ವಹಣೆಗೆ ತರುವ ಕಾರ್ಯವನ್ನು ಆರಂಭಿಸಿದ್ದೇವೆ. ಬಿಸಿಯೂಟದ ಅಡುಗೆ ಕೋಣೆ ಕಾರ್ಯ ನರೇಗಾ ಯೋಜನೆಯಡಿ ಅನುಮೋದನೆಗೊಂಡಿದ್ದು, ಅದನ್ನು ತ್ವರಿತವಾಗಿ ಜಾರಿಗೆ ತರಬೇಕಿದೆ” ಎಂದು ಭರವಸೆ ನೀಡಿದರು.

ಸಮಸ್ಯೆ ಕುರಿತಾಗಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹೇಮಂತ್ ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ ಹಾಗೂ ವಾಟ್ಸಾಪ್ ಸಂದೇಶಕ್ಕೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಶಿವಮೊಗ್ಗ ಜಿಲ್ಲೆಯವರೇ ಆದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹೋದಲ್ಲಿ ಬಂದಲ್ಲಿ “ನಾನು ಶಿಕ್ಷಣ ಇಲಾಖೆಯಲ್ಲಿ, ಸರ್ಕಾರಿ ಶಾಲೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುತಿದ್ದೇನೆ. ದೇವಸ್ಥಾನದಲ್ಲಿ ಗಂಟೆ ಬಾರಿಸತ್ತೋ ಬಿಡತ್ತೋ; ಶಾಲೆಯಲ್ಲಿ ಗಂಟೆ ಬಾರಿಸುತ್ತೆ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಅನುಕೂಲ ಆಗಲಿದೆ ಎನ್ನುತ್ತಾರೆ. ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗಾಗಿ ನಾನು ಪಣ ತೊಟ್ಟು ನಿಂತಿದ್ದೀನೆ. ನಾನು ಶಿಕ್ಷಣ ಸಚಿವ ಆದಮೇಲೆ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುತ್ತಿದೆ” ಎಂದು ಬೆನ್ನು ತಟ್ಟಿಕೊಳ್ಳುತ್ತಾರೆ.
ʼನಮ್ಮ ಶಾಲೆ, ನಮ್ಮ ಜವಾಬ್ದಾರಿ ನನ್ನ ಕನಸು. ಹೀಗಾಗಿ ಸರ್ಕಾರಿ ಶಾಲೆ ಉಳಿಸಬೇಕುʼ ಎಂದು ಹೇಳಿಕೊಳ್ಳುವ ಶಿಕ್ಷಣ ಸಚಿವರು ತಮ್ಮ ಇಲಾಖೆಯ ಕುರಿತಾಗಿ ಮಾಹಿತಿಗಳನ್ನು ಪರಿಶೀಲನೆ ಮಾಡಿ, ಸೂಕ್ತ ಕ್ರಮ ಜರುಗಿಸುವ ಮೂಲಕ ಮಾದರಿ ಸಚಿವರಾಗಬೇಕಿದೆ.

ಶಿಕ್ಷಣ ಸಚಿವರಿಗೆ ನಿಜವಾಗಲೂ ಕಾಳಜಿ ಇದ್ದದ್ದೇ ಆದಲ್ಲಿ ಮೊದಲು ರಾಜಕೀಯ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಎಲ್ಲೆಲ್ಲಿ ಯಾವಯಾವ ಸರ್ಕಾರಿ ಶಾಲೆಗಳಿಗೆ ತೊಂದರೆ ಆಗುತ್ತಿದೆ, ಅಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ಮೂಲಕ ಸರ್ಕಾರಿ ಶಾಲೆಗೆ ಬರುವ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಲಿ ಜೊತೆಗೆ ಸರ್ಕಾರದ ಹಣ ಪೋಲಾಗದಂತೆ ನೋಡಿಕೊಳ್ಳಲಿ. ಇಲಾಖೆ ಬಗ್ಗೆ ಗಮನ ಹರಿಸಿ ಸೂಕ್ತ ರೀತಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಡೆ ಗಮನಹರಿಸಬೇಕಿದೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.