ವಾಡಿಕೆಗಿಂತ ಕಡಿಮೆ ಮಳೆಯಾಗಿ ಉಂಟಾಗುವ ಬರಗಾಲ, ಕ್ಷಾಮ ಹಾಗೂ ಆಹಾರ ಅಭಾವಗಳಿಗೆ ಸರ್ಕಾರಗಳ ಜನ ವಿರೋಧಿ ಧೋರಣೆಗಳೇ ಕಾರಣ. ಸರ್ಕಾರಗಳು ತಮ್ಮ ವೈಫಲ್ಯ ಮರೆ ಮಾಚಲು ಪ್ರಕೃತಿಯನ್ನು ದೂಷಿಸುತ್ತಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಆರೋಪಿಸಿದರು.
ಶಹಾಪುರ ತಾಲ್ಲೂಕಿನ ರಸ್ತಾಪೂರ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಆಯೋಜಿಸಿರುವ ರಾಜ್ಯ ಮಟ್ಟದ ಮೂರು ದಿನಗಳ ಅಧ್ಯಯನ ಶಿಬಿರದ ಸಮಾರೋಪ ಉದ್ದೇಶಿಸಿ ಮಾತನಾಡಿದರು.
“ರಾಜ್ಯದ್ಯಂತ ತೀವ್ರ ಬರಗಾಲ ಜನತೆಯನ್ನು ಭಾದಿಸುತ್ತಿರುವಾಗ ಸಮರೋಪಾದಿಯಲ್ಲಿ ಬರಗಾಲ ಪರಿಹಾರ ಮಾಡಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಅಧ್ಯಯನ ಪ್ರವಾಸದ ನೆಪದಲ್ಲಿ ಕಾಲಹರಣ ಮಾಡುತ್ತಿವೆ. ಬರಗಾಲ ಪರಿಹಾರದ ಕ್ರಮವಾಗಿ ಉದ್ಯೋಗ ಖಾತ್ರಿ, ರೇಷನ್, ಮೇವು, ಕುಡಿಯುವ ನೀರು ಸಮರ್ಪಕವಾಗಿ ಒದಗಿಸುವ ಕೆಲಸವನ್ನು ನಿರ್ಲಕ್ಷಿಸುತ್ತಿವೆ” ಎಂದು ಅಪಾದಿಸಿದರು.
“ಪ್ರಕೃತಿ ದೂಷಿಸಿ ಕಾಲಹರಣ ಮಾಡುವುದು ನಾಗರಿಕ ಸರ್ಕಾರಗಳಿಗೆ ಶೋಭೆ ತರುವುದಿಲ್ಲ. ಅಣೆಕಟ್ಟುಗಳಲ್ಲಿ ನೀರಿಲ್ಲದೇ ನೀರಾವರಿ ಪ್ರದೇಶಗಳಲ್ಲಿ ಬೆಳೆ ಒಣಗುತ್ತಿದೆ. ಮಳೆ ಆಶ್ರಿತ ಪ್ರದೇಶದಲ್ಲಿ ಗುಳೆ ಹೋಗುವ ಪರಿಸ್ಥಿತಿ ಉದ್ಭವವಾಗಿದೆ. ಉದ್ಯೋಗ ಖಾತ್ರಿ ಹಾಗೂ ಸಾರ್ವತ್ರಿಕ ಪಡಿತರ ವ್ಯವಸ್ಥೆ ಎಲ್ಲರಿಗೂ ದೊರಕಿಸಲು ರಾಜ್ಯದ್ಯಂತ ರೈತ ಸಂಘ ಹೋರಾಟ ನಡೆಸಲಿದೆ” ಎಂದು ತಿಳಿಸಿದರು.
“ಬಗರ್ ಹುಕಂ ಹಾಗೂ ಅರಣ್ಯ ಸಾಗುವಳಿ ರೈತರನ್ನು ಒಕ್ಕಲೆಬ್ಬಿಸಬಾರದು, ವಿದ್ಯುತ್ ಖಾಸಗೀಕರಣ ವಿರೋಧಿಸಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಕನಿಷ್ಟ ಎಂಟು ಗಂಟೆಗಳ ಕಾಲ ತ್ರಿ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು, ಭೂ ಸ್ವಾಧೀನ ನಿಲ್ಲಿಸಬೇಕು. ಬಳಕೆಯಾಗದಿರುವ ಕೆಐಎಡಿಬಿ ಭೂ ಸ್ವಾಧೀನದ ಭೂಮಿಯನ್ನು ವಾಪಸ್ ರೈತರಿಗೆ ನೀಡಬೇಕು, ಮಳೆ ಆಶ್ರಿತ ಹಾಗೂ ಗೇಣಿ ರೈತರ ಹಿತರಕ್ಷಣೆಗೆ ವಿಶೇಷ ಯೋಜನೆ ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.
ರಾಜ್ಯ ಉಪಾಧ್ಯಕ್ಷ ಯು. ಬಸವರಾಜ ಮಾತನಾಡಿ, “ರೈತಾಪಿ ಬೇಸಾಯ ಪದ್ದತಿಯನ್ನು ಕಡೆಗಣಿಸಿ ಕಂಪನಿ ಬೇಸಾಯ ಪದ್ದತಿ ಜಾರಿ ಮಾಡುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಕೃಷಿ ಭೂಮಿ ರೈತರ ಕೈಯಲ್ಲಿ ಉಳಿದರೆ ಮಾತ್ರ ದೇಶದ ಜನರಿಗೆ ಆಹಾರದ ಭದ್ರತೆ ದೊರಕುತ್ತದೆ. ಇಲ್ಲದಿದ್ದರೆ ಭಾರತವು ಹಸಿವಿನ ಸಾಮ್ರಾಜ್ಯವಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ, ತೆಲಂಗಾಣ ಮತ್ತು ಛತ್ತೀಸ್‌ಗಢ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಸಮಾರಂಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಚನ್ನಪ್ಪ ಆನೇಗುಂದಿ, ಕೃಷಿ ಕೂಲಿಕಾರರ ರಾಜ್ಯ ಉಪಾಧ್ಯಕ್ಷ ದಾವಲ್ ಸಾಬ್ ನದಾಫ್, ಬೀಮರಾಯ ಪೂಜಾರಿ, ಎಸ್ ಎಂ ಸಾಗರ್, ಮಲ್ಲಣ್ಣಗೌಡ, ಹೆಚ್ ಆರ್ ನವೀನ್ ಕುಮಾರ್, ಶಾಂತಾರಾಮ ನಾಯಕ, ಜಿ. ನಾಗರಾಜ, ಎನ್. ಎಲ್. ಭರತ್ ರಾಜ್ , ಜೈಲಾಲ ತೋಟದಮನಿ, ಡಾ. ಸಾಯಬಣ್ಣ ಗುಡುಬಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.