ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪಕ್ಕೆ ಪರಿಷ್ಕೃತ ಮೊತ್ತ ₹742 ಕೋಟಿಗಳಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಕಾಮಗಾರಿ ಗುಣಮಟ್ಟ ಜಾಗರೂಕತೆ ವಹಿಸಿ 2026ರ ಮೇ ತಿಂಗಳಲ್ಲಿ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ನೂತನ ಅನುಭವ ಮಂಟಪ ನಿರ್ಮಾಣದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
12ನೇ ಶತಮಾನದ ಶರಣರ ಅನುಭವ ಮಂಟಪ, ಸಂಸತ್ ಇಡೀ ದೇಶಕ್ಕಷ್ಟೇ ಅಲ್ಲದೇ ವಿಶ್ವಕ್ಕೆ ಮಾದರಿಯಾಗಿದೆ. ನೂತನ ಅನುಭವ ಮಂಟಪ ಯೋಜನೆಯು ಜಾಗತಿಕ ಮಟ್ಟದ ಸ್ಮಾರಕವಾಗಲಿದ್ದು, ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರೀತಿಯ ತೊಡಕು ಬಾರದಂತೆ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಮುಂಜಾಗೃತೆ ವಹಿಸಬೇಕುʼ ಎಂದು ತಿಳಿಸಿದರು.
ಇದುವರೆಗೆ ನೆಲಮಹಡಿ ಸೇರಿದಂತೆ ಐದು ಅಂತಸ್ತಿನ ಕಟ್ಟಡಗಳು ಪೂರ್ಣಗೊಂಡಿದ್ದು, ಒಟ್ಟು ₹271 ಕೋಟಿ ಖರ್ಚಾಗಿದೆ, ಭೌತಿಕವಾಗಿ ಶೇ 63 ರಷ್ಟು ಪ್ರಗತಿಯಾಗಿದೆ. ಅನುಭವ ಮಂಟಪದ ಪ್ರಗತಿ ಕುರಿತಂತೆ ಮುಂದಿನ ವಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದರು.
ʼ770 ಶರಣರ ವಚನಗಳನ್ನು 770 ಕಂಬಗಳಲ್ಲಿ ಕೆತ್ತುವಾಗ ವಚನಗಳನ್ನು ಹಾಗೂ ಚರಿತ್ರೆಗಳಲ್ಲಿ ಅಕ್ಷರಗಳ ಕೆತ್ತನೆಯಲ್ಲಿ ತಪ್ಪುಗಳು ಆಗದಂತೆ ಮುಂಜಾಗೃತೆ ವಹಿಸಬೇಕು. ಪ್ರತಿಯೊಬ್ಬ ಶರಣರ ವಚನಗಳನ್ನು ವಿದ್ವಾಂಸರಿಂದ ಪರಿಶೀಲಿಸತಕ್ಕದ್ದು. ವಚನಗಳ ಸ್ವಷ್ಟತೆ, ಶರಣರ ಹೆಸರು, ಕಾಯಕದ ವಿವರಗಳನ್ನು ಸಹ ನುರಿತ ತಜ್ಞರ ಸಮಿತಿಯಿಂದ ಅನುಮೋದಿಸತಕ್ಕದ್ದು, ಮಕ್ಕಳಿಗೆ ಯುವಕರಿಗೆ, ಜನಸಾಮಾನ್ಯರಿಗೆ ಅರ್ಥವಾಗುವ ಮಹತ್ವದ ವಚನಗಳಿಗೆ ಆದ್ಯತೆ ನೀಡಬೇಕುʼ ಎಂದು ಸೂಚಿಸಿದರು.

157 ಶರಣರ ಕಿರು ಚಿತ್ರಗಳನ್ನು ಉನ್ನತ ಮಟ್ಟದ ತಜ್ಞರಿಂದ ನಿರ್ಮಿಸಲಾಗುತ್ತಿದೆ. ಶರಣ ಪರಂಪರೆಯ ಆಧಾರದ ಮೇಲೆ ವಿವಿಧ ಆಚರಣೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಲಾಗುವುದು. ಶರಣರ ರೂಪದ ರೊಬೊಟಿಕ್ಸ್‌ಗಳ ನಿರ್ಮಾಣ, ಶರಣ ಗ್ರಾಮ 7ಡಿ ಥಿಯೇಟರ್, ವಿಜ್ಞಾನ ಮ್ಯೂಸಿಯಂ ವೈಜ್ಞಾನಿಕ ಇಷ್ಟಲಿಂಗ ಶಿವಯೋಗದ ಗ್ಯಾಲರಿ ಸೇರಿದಂತೆ ವಿವಿಧ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪ್ರವಾಸಿಗರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ತ್ರಿಸ್ಟಾರ್ ಹೋಟೆಲ್ ಕಟ್ಟಡದೊಳಗೆ ವಾಟರ ಬೋಟಿಂಗ್, ಲ್ಯಾಂಡ್ ಸ್ಕೇಪಿಂಗ್ ಕುರಿತ ಚರ್ಚಿಸಲಾಯಿತು.
ಬಸವಕಲ್ಯಾಣದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ತಾವು ಇತ್ತೀಚೆಗೆ ಬಸವಕಲ್ಯಾಣಕ್ಕೆ ಭೇಟಿ ನೀಡಿದಾಗ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಕಂಡುಬಂದಿದ್ದು, ರಸ್ತೆಗೆ ಕೆಕೆಆರ್‍ಡಿಬಿ ಅನುದಾನ ಒದಗಿಸಲಾಗುವುದು ಎಂದರು. ಸ್ವಚ್ಛತೆ ಕಾಪಾಡುವಂತೆ ಕಸ ವಿಲೇವಾರಿಗೆ ಒತ್ತು ನೀಡುವಂತೆ ಉಪವಿಭಾಗಾಧಿಕಾರಿ ಮುಕುಲ ಜೈನ್‍ರಿಗೆ ಸೂಚಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ‘ದೇಶದ ಶತ್ರು’ ಎಂದ ಅರ್ನಬ್ ಗೋಸ್ವಾಮಿ: ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಅಪರ ಜಿಲ್ಲಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಜಗನ್ನಾಥ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.