ಉತ್ತರಪ್ರದೇಶದ ಅಯೋಧ್ಯೆಯಲ್ಲಿ ದಲಿತ ಯುವತಿಯ ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ರಾಷ್ಟ್ರೀಯ ವಿದ್ಯಾರ್ಥಿ ಮತ್ತು ಯುವ ವೇದಿಕೆ (ಎನ್‌ಎಸ್‌ವೈಎಫ್) ಆಗ್ರಹಿಸಿದೆ.
ಈ ಸಂಬಂಧ ಮಂಗಳವಾರ ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಔರಾದ್ ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರಿಗೆ ಸಲ್ಲಿಸಿದರು.
ʼಅಯ್ಯೋಧ್ಯೆಯ ಫೈಜಾಬಾದ್‌ನಲ್ಲಿ 22 ವರ್ಷದ ದಲಿತ ಸಮುದಾಯದ ಯುವತಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿ ಬೆತ್ತಲೆ ದೇಹವನ್ನು ಕಾಲುವೆಯಲ್ಲಿ ಎಸೆದಿರುವ ಘಟನೆ ಮಾನವ ಸಮಾಜ ತಲೆತಗ್ಗಿಸುವ ಹೇಯ ಕೃತ್ಯ. ಇದನ್ನು ತೀವ್ರವಾಗಿ ಖಂಡಿಸುತ್ತೇವೆʼ ಎಂದರು.
ʼಜನವರಿ 30ರಂದು ಯುವತಿ ನಾಪತ್ತೆಯಾಗಿದ್ದಳು. ಪೊಲೀಸರಿಗೆ ದೂರನ್ನೂ ನೀಡಲಾಗಿತ್ತು. ಆದರೆ ಪತ್ತೆಹಚ್ಚುವಲ್ಲಿ ವಿಳಂಬವಾಗಿ, ಫೆಬ್ರುವರಿ 1ನೇ ತಾರೀಖು ಕಾಲುವೆಯಲ್ಲಿ ಮೃತದೇಹ ಸಿಕ್ಕಿತ್ತು. ʼನಾಪತ್ತೆಯಾಗಿದ್ದ ನಮ್ಮ ಮಗಳನ್ನು ಕೊಲೆ ಮಾಡಲಾಗಿದೆ, ಆಕೆಯ ಕಣ್ಣುಗಳನ್ನು ಕಿತ್ತು ಹಾಕಲಾಗಿದೆ, ಮೃತದೇಹದ ಮೇಲೆ ಭೀಕರ ಗಾಯಗಳು ಕಂಡು ಬಂದಿದೆʼ ಎಂದು ಯುವತಿ ಕುಟುಂಬ ಹೇಳಿದೆ. ಆದರೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದರೂ ಅಯೋಧ್ಯೆಯ ಬಂದೋಬಸ್ತ್‌ನಲ್ಲಿದ್ದೇವೆ ಎಂದು ಹೇಳಿ ಯುವತಿಯ ಕೊಲೆಗೆ ಕಾರಣರಾಗಿದ್ದಾರೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಬಹುಜನ ವಿರೋಧಿ ಬಿಜೆಪಿ ನೇತ್ರತ್ವದ ಆಡಳಿತ ಇರುವ ಉತ್ತರಪ್ರದೇಶದಲ್ಲಿ ಅನ್ಯಾಯ, ಅತ್ಯಾಚಾರ, ಕೊಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ರಾಮಜನ್ಮಭೂಮಿಯಲ್ಲಿ ಇಂಥ ಘಟನೆ ನಡೆದಿರುವುದು ಅಘಾತಕಾರಿ ಸಂಗತಿಯಾಗಿದೆ. ಆರೋಪಿಗಳನ್ನು ಗಲ್ಲಿಗೇರಿಸಬೇಕು. ಆಡಳಿತ ವರ್ಗದ ವಿರುದ್ಧ ಕ್ರಮ ಜರುಗಿಸಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಯೋಧ್ಯೆ ಅತ್ಯಾಚಾರ ಪ್ರಕರಣ; ಶೋಷಿತ ಸಮುದಾಯಕ್ಕೆ ಸಿಗದ ರಕ್ಷಣೆ
ಈ ಸಂದರ್ಭದಲ್ಲಿ ಎನ್‌ಎಸ್‌ವೈಎಫ್ ರಾಜ್ಯ ಸಂಚಾಲಕ ಶಿವಕುಮಾರ್ ಕಾಂಬಳೆ ಸೇರಿದಂತೆ ರವಿ ಯರನಾಳೆ, ಆನಂದ ಕಾಂಬಳೆ, ದಿನೇಶ ಶಿಂಧೆ, ಪ್ರಕಾಶ ಭಂಗಾರೆ, ಸುಜೀತ ಶಿಂಧೆ, ಸತ್ಯಾಪಾಲ ವಾಘಮಾರೆ, ಆದರ್ಶ ನಾಗೂರೆ, ವಿನೋದ ಡೋಳೆ, ವಿಶಾಲ ಕಾಂಬಳೆ, ಸುಬುದ್ಧ ನಾಲಂದೆ, ದಯಾನಂದ ಮದನೂರೆ, ದೀಪಕ ಯರನಾಳೆ, ಯೇಶುರಾಜ ಮಾಳಗೆ ಇದ್ದರು.