ಮೈಸೂರು ಜಿಲ್ಲೆ, ಹುಣಸೂರಿಗೆ ಗಜ ಪಯಣದ ಸಲುವಾಗಿ ಆಗಮಿಸಿದ್ದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆಯವರನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಸಂಸ ಮುಖಂಡರ ನಿಯೋಗ ಸಂವಿಧಾನ ವೃತ್ತದಲ್ಲಿ ಭೇಟಿ ಮಾಡಿ ಮಾನವ – ವನ್ಯಜೀವಿ ಸಂಘರ್ಷ, ಭೂ ವಿವಾದ, ಸೂಕ್ತ ಪರಿಹಾರ ಹಾಗೂ ರಕ್ಷಣೆ ಸೇರಿದಂತೆ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಪತ್ರ ಸಲ್ಲಿಸಿದರು.
ದಿನಾಂಕ-25-07-2025 ರಂದು ಹುಣಸೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನಾ ಮೆರವಣಿಗೆ ನಡೆಸಿ ಹುಣಸೂರು ವನ್ಯಜೀವಿ ನಿರ್ದೇಶಕರಾದ ಸೀಮಾ ಅವರ ಮೂಲಕ ರೈತರ ಸಮಸ್ಯೆಗಳ ಸಮಗ್ರ ಮಾಹಿತಿಯನ್ನು ಮನವಿ ಪತ್ರದ ಮೂಲಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ಸಲ್ಲಿಸಲಾಗಿತ್ತು.
ಇಂದು ಮೈಸೂರು ದಸರಾ ಹಿನ್ನಲೆಯಲ್ಲಿ ಹುಣಸೂರಿನ ವೀರನ ಹೊಸಹಳ್ಳಿಯಿಂದ ಗಜಪಯಣ ಸಾಂಪ್ರದಾಯಕ ಚಾಲನೆಗೆ ಆಗಮಿಸಿದ್ದ ಅರಣ್ಯ ಸಚಿವರಾದ ಈಶ್ವರ್ ಬಿ. ಖಂಡ್ರೆ ಅವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ ” ನಿರಂತರವಾಗಿ ಕಾಡಂಚಿನ ಭಾಗದಲ್ಲಿ ಕಾಡಾನೆಗಳ ಹಾವಳಿ, ಚಿರತೆ, ಹುಲಿ ಮತ್ತು ಮಂಗಗಳಿಂದ ಪ್ರಾಣಹಾನಿ, ಜಾನುವಾರು ಮೇಲಿನ ದಾಳಿ, ಫಸಲು ನಷ್ಟ ಹೆಚ್ಚಾಗಿದ್ದು, ಸದರಿ ಭಾಗದ ಜನರ ಜೀವನವು ಕಷ್ಟಕರವಾಗಿದೆ. ಆದ್ದರಿಂದ, ಅರಣ್ಯ ಸಚಿವರು ರೈತರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಕಾಡಂಚಿನ ಜನರ ರಕ್ಷಣೆಗೆ ಮುಂದಾಗಬೇಕೆಂದು ” ಮನವಿ ಮಾಡಿದರು.
ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಮಾತನಾಡಿ ” ತಾವು ಸಲ್ಲಿಸಿರುವ ಮನವಿಯಂತೆ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿದ್ದು, ತಕ್ಷಣದಲ್ಲೇ ಆನೆಯನ್ನು ತಡೆಗಟ್ಟಲು ರೈಲ್ವೆ ಕಂಬಿಗಳ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಜೊತೆಯಲ್ಲಿಯೇ ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಅತೀ ಹೆಚ್ಚು ಗಮನ ಹರಿಸುವ ಮೂಲಕ ನಿಯಂತ್ರಣ ಮಾಡುವ ವೈಜ್ಞಾನಿಕವಾದ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ತಕ್ಷಣದಲ್ಲೇ ಈ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು. ಹಾಗೂ ಅರಣ್ಯ ಸಮಿತಿಗಳನ್ನು ಮುಂದಿನ ದಿನಗಳಲ್ಲಿ ಇಲಾಖೆಯ ಸಹಕಾರದೊಂದಿಗೆ ಸಕ್ರೀಯವಾಗಿ ಅರಣ್ಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುವುದು. ತಮ್ಮ ಮನವಿ ಪತ್ರದಲ್ಲಿ ತಿಳಿಸಿರುವಂತಹ 11 ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಮತ್ತು ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳ ಮಟ್ಟದಲ್ಲಿ ಬಗೆಹರಿಸಲು ಸೂಕ್ತ ನಿರ್ದೇಶನ ನೀಡಲಾಗುವುದು ” ಎಂದು ತಿಳಿಸಿದರು.
ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ ‘ ಗಿರಿಜನರಿಗೆ ಪೌಷ್ಠಿಕ ಆಹಾರವನ್ನು ವಿತರಣೆ ಮಾಡದೆ ತೊಂದರೆಗೀಡಾಗಿರುತ್ತಾರೆ. ತಾವುಗಳು ಗಮನಹರಿಸಿ ಪೌಷ್ಠಿಕ ಆಹಾರ ಮತ್ತು ಉತ್ತಮ ಶಿಕ್ಷಣದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ‘ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ವಿಷಕಾರಿ ಹಣ್ಣು ಸೇವನೆ; ಮಹಿಳೆ ಸೇರಿ ಹನ್ನೆರೆಡು ಮಕ್ಕಳು ಅಸ್ವಸ್ಥ
ಮನವಿ ಸಲ್ಲಿಸುವಾಗ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಜಿಲ್ಲಾ ಉಪಾಧ್ಯಕ್ಷ ಆಲಿಜಾನ್, ಕಟ್ಟೆಮಳಲವಾಡಿ ಮಹದೇವು, ಬಸವರಾಜು, ಕಲ್ಲಹಳ್ಳಿ ವಿಷಕಂಠಪ್ಪ, ತಟ್ಟೆಕೆರೆ ರಾಮಕೃಷ್ಣೇಗೌಡ, ಹರಳಹಳ್ಳಿ ಬಸವರಾಜೇಗೌಡ, ಕುರುಬರ ಹೊಸಹಳ್ಳಿ ವೆಂಕಟೇಶ್, ಕಾಳೇನಹಳ್ಳಿ ಮುತ್ತು, ದಸಂಸ ಮುಖಂಡರಾದ ಚಿಕ್ಕಹುಣಸೂರು ರಾಜು, ಸಿದ್ದೇಶ್, ಗಜೇಂದ್ರ ಕಿರಿಜಾಜಿ, ದೇವೇಂದ್ರ ಕುಳುವಾಡಿ, ಧರ್ಮಾಪುರ ಗ್ರಾಮ ಘಕಟದ ಅಧ್ಯಕ್ಷ ವೆಂಕಟಾಚಲಪತಿ, ಅರಣ್ಯ ಸಮಿತಿಯ ಅಧ್ಯಕ್ಷ ಗೋವಿಂದ, ಸದಸ್ಯರುಗಳಾದ ರಾಮೇಗೌಡ, ವೆಂಕಟೇಶ್, ಶೇಖರ್, ಜಾಲಿ ಸೇರಿದಂತೆ ಮಹಿಳೆಯರು ಇದ್ದರು.