- ಶಿವಮೊಗ್ಗದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು
- ನಾಡಕಚೇರಿಗಳಿಗೆ ದಿಢೀರ್ ಭೇಟಿ, ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಕೃಷ್ಣ ಭೈರೇಗೌಡ
ರಾಜ್ಯದಲ್ಲಿ 2000 ಹೆಚ್ಚುವರಿ ಪರವಾನಿಗೆ ಸರ್ವೇಯರ್ಗಳನ್ನು (ಭೂ ಮಾಪಕರು) ಡಿಸೆಂಬರ್ ತಿಂಗಳ ಒಳಗಾಗಿ ನೇಮಕ ಮಾಡಲಾಗುವುದು. ಇದಲ್ಲದೇ 354 ಸರ್ಕಾರಿ ಭೂಮಾಪಕರನ್ನು ಹಾಗೂ 1800 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಕ್ಕೆ ಅವಶ್ಯಕ ಕ್ರಮವಹಿಸಲು ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, “ರಾಜ್ಯ ಸರ್ಕಾರ ಬರ ಘೋಷಣೆಗೆ ಸಿದ್ದತೆ ನಡೆಸುತ್ತಿದ್ದು, ಜಿಲ್ಲೆಯಾದ್ಯಂತ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಮತ್ತು ಬೆಳೆ ಪರಿಶೀಲನೆ ನಡೆಸಿ ವಾರಾಂತ್ಯದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರು.
“ಸೆಪ್ಟೆಂಬರ್ 19ರಲ್ಲಿದ್ದಂತೆ 113 ತಾಲೂಕುಗಳ ಪೈಕಿ ಜಂಟಿ ಸಮೀಕ್ಷೆಯಲ್ಲಿ ಮಾರ್ಗಸೂಚಿ ಅನ್ವಯ 62 ತಾಲೂಕುಗಳ ಬರ ಘೋಷಣೆಗೆ ಅರ್ಹವಾಗಿದೆ. ಆದರೆ, ಜಂಟಿ ಸಮೀಕ್ಷೆಯ ನಂತರ ಬೆಳೆ ಪರಿಸ್ಥಿತಿ ಮತ್ತೆ ಕುಸಿದಿದೆ ಎಂದು ವರದಿಗಳು ಬಂದಿರುತ್ತವೆ. ಹೀಗಾಗಿ 134 ತಾಲೂಕುಗಳಲ್ಲಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಮಾಡಲು ಸಚಿವ ಸಂಪುಟ ಉಪಸಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ರೈತರಿಗೆ ಮತ್ತಷ್ಟು ಸಹಾಯವಾಗಲಿದೆ” ಎಂದರು.
“ರಾಜ್ಯದಲ್ಲಿ ಆರಂಭದಲ್ಲಿಯೇ 2023ರ ಮುಂಗಾರು ದುರ್ಬಲಗೊಂಡು, ಜೂನ್ ತಿಂಗಳಿನಲ್ಲಿ ಶೇ.56ರಷ್ಟು ಮಳೆ ಕೊರತೆಯಾಗಿತ್ತು. ನಂತರ ಜುಲೈ ತಿಂಗಳಿನಲ್ಲಿ ಉತ್ತಮವಾಗಿ ಮಳೆಯಾದರೂ, ಆಗಸ್ಟ್ ತಿಂಗಳಿನಲ್ಲಿ ಶೇ.73 ರಷ್ಟು ಮಳೆ ಕೊರತೆಯಾಗಿದೆ. ಒಟ್ಟಾರೆ ಪ್ರಸಕ್ತ ಮುಂಗಾರು ಜೂನ್ 1 ರಿಂದ ಸೆಪ್ಟೆಂಬರ್ 4ರವರೆಗೆ ವಾಡಿಕೆಯಾಗಿ 711ಮಿ.ಮೀ ಮಳೆಯಾಗಬೇಕಿದ್ದು, ಕೇವಲ 526 ಮಿ.ಮೀ ಮಳೆಯಾಗಿದೆ. ಶೇಕಡಾ 26ರಷ್ಟು ಮಳೆ ಕೊರತೆಯಾಗಿದ್ದು, ಬರ ಪರಿಸ್ಥಿತಿ ತಲೆದೋರಿದೆ” ಎಂದು ಹೇಳಿದರು.
ತಕರಾರು ಪ್ರಕರಣ; ವಿಲೇವಾರಿಗೆ ಒಂದು ವಾರದ ಗಡುವು
ತಕರಾರು ಅರ್ಜಿಗಳ ವಿಲೇವಾರಿ ವಿಚಾರದಲ್ಲಿ ಈ ಹಿಂದಿಗಿಂತಲೂ ಶಿವಮೊಗ್ಗ ಪ್ರಸ್ತುತ ಉತ್ತಮ ಸಾಧನೆ ಮಾಡಿದೆ. ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ಸೂಚಿಸಿದ ಸಚಿವರು, ಜಿಲ್ಲೆಯಲ್ಲಿ ನೂರಾರು ತಕರಾರು ಪ್ರಕರಣಗಳು ಈಗಲೂ ಬಾಕಿ ಇವೆ ಎಂದು ಗಮನ ಸೆಳೆದರು. ಅಲ್ಲದೆ, ಈ ಎಲ್ಲ ಪ್ರಕರಣಗಳನ್ನೂ ಶೀಘ್ರದಲ್ಲೇ ವಿಲೇವಾರಿ ಮಾಡಬೇಕು. ಪ್ರತಿಯೊಂದು ಪ್ರಕರಣವನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಗೊಳಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಿದರು.
ವಿಚಾರಣೆಯಾಗಿ ಆದೇಶಕ್ಕಾಗಿ ಕಾಯ್ದಿರಿಸಲ್ಪಟ್ಟ ಪ್ರಕರಣಗಳ ಬಗ್ಗೆಯೂ ಗಮನ ಸೆಳೆದ ಸಚಿವರು, “ಸಾಗರ ಉಪ ವಿಭಾಗದಲ್ಲಿ 76 ಪ್ರಕರಣಗಳ ವಿಚಾರಣೆ ಮುಗಿದು ಆದೇಶಕ್ಕಾಗಿ ಕಾಯ್ದಿರಿಸಲ್ಪಟ್ಟಿದ್ದರೂ ಆದೇಶ ಪ್ರಕಟವಾಗಿರುವುದಿಲ್ಲ. ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆದೇಶಕ್ಕೆ ಕಾಯ್ದಿರಿಸಲ್ಪಟ್ಟ ಪ್ರಕರಣಗಳ ವಿಲೇವಾರಿಗೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಆದೇಶಕ್ಕೆ ಕಾಯ್ದಿರಿಸಲ್ಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ 15 ದಿನಗಳೊಳಗಾಗಿ ಆದೇಶ ಹೊರಡಿಸಬೇಕು ಎಂಬ ಕಾನೂನು ಇದೆ. ಕಾನೂನಿನನ್ವಯ ಅಧಿಕಾರಿಗಳು ತುರ್ತಾಗಿ ಆದೇಶ ಹೊರಡಿಸಬೇಕು” ಎಂದು ಸಚಿವ ಕೃಷ್ಣಭೈರೇಗೌಡ ತಾಕೀತು ಮಾಡಿದರು.
ಈ ಸುದ್ದಿ ಓದಿದ್ದೀರಾ? 2019ರ ಚುನಾವಣೆಗಾಗಿ ಕೇಂದ್ರಕ್ಕೆ 3 ಲಕ್ಷ ಕೋಟಿ ರೂ.ಹಣ ವರ್ಗಾವಣೆಗೆ ನಿರಾಕರಿಸಿದ್ದ ಆರ್ಬಿಐ
ನಮೂನೆ 57ರ ಅಕ್ರಮ-ಸಕ್ರಮಕ್ಕೆ ಆ್ಯಪ್
“ನಮೂನೆ 57ರ ಅಕ್ರಮ ಸಕ್ರಮ ಪ್ರಕರಣಗಳೂ ಆದಷ್ಟು ಶೀಘ್ರದಲ್ಲಿ ಇತ್ಯರ್ಥ ಮಾಡಬೇಕು. ಈ ನಿಟ್ಟಿನಲ್ಲಿ ಅಕ್ರಮ-ಸಕ್ರಮ ಸಮಿತಿಯನ್ನು ಶೀಘ್ರದಲ್ಲಿ ನೇಮಕ ಮಾಡಲಾಗುವುದು. ಈ ಪ್ರಕರಣಗಳ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ತಾಂತ್ರಿಕ ಸಹಾಯವನ್ನೂ ಒದಗಿಸಲಾಗುವುದು ಎಂದು ಸಭೆಯಲ್ಲಿ” ಸಚಿವರು ತಿಳಿಸಿದರು.
“ಅಕ್ರಮ-ಸಕ್ರಮ ಅರ್ಜಿದಾರರು ನಿಜಕ್ಕೂ ಆ ಭೂಮಿಯಲ್ಲಿ ಕೃಷಿಯಲ್ಲಿ ತೊಡಗಿದ್ದಾರಾ? ಎಂಬ ಮಾಹಿತಿಯನ್ನು ಗೂಗಲ್ ಇಮೇಜ್ ಮೂಲಕ ಅಧಿಕಾರಿಗಳಿಗೆ ಒದಗಿಸಲಾಗುವುದು. ಈ ಸಂಬಂಧ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಜಿಯೋ ಫೆನ್ಸಿಂಗ್ ಅನ್ನು ಅಳೆಯಲು, ಸ್ಥಳಕ್ಕೆ ಭೇಟಿ ನೀಡಲು ಮತ್ತು ಸಂಬಂಧಿತ ವಿವರಗಳನ್ನು ಗ್ರಾಮ ಆಡಳಿತ ಅಧಿಕಾರಿಗಳು ಅಪ್ಲಿಕೇಷನ್ ಮೂಲಕ ಅಪ್ಲೋಡ್ ಮಾಡಬಹುದು. ಇದರ ಸಹಾಯದಿಂದ ನಮೂನೆ 57ರ ಪ್ರಕರಣವನ್ನು ಇತ್ಯರ್ಥಗೊಳಿಸಬಹುದು” ಎಂದು ಅವರು ಮಾಹಿತಿ ನೀಡಿದರು.
ಹೊಸ ಆ್ಯಪ್ ಅಭಿವೃದ್ಧಿ
“ಸರ್ಕಾರಿ ಭೂಮಿಯನ್ನು ಪತ್ತೆ ಹಚ್ಚುವ ಹಾಗೂ ಒತ್ತುವರಿಯಾಗದಿರುವುದನ್ನು ತಡೆಯುವ ಸಲುವಾಗಿ ಮತ್ತೊಂದು ಆ್ಯಪ್ ಅಭಿವೃದ್ಧಿಪಡಿಸುವ ಚಿಂತನೆಯೂ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಗ್ರಾಮ ಲೆಕ್ಕಾಧಿಕಾರಿ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಜಮೀನಿಗೆ ಭೇಟಿ ನೀಡಿ ವರದಿ ಸಲ್ಲಿಸುವ “ಬೀಟ್” ವ್ಯವಸ್ಥೆಗೆ ಈ ಆ್ಯಪ್ ಸಹಕಾರಿಯಾಗಲಿದೆ” ಎಂದು ಅವರು ತಿಳಿಸಿದರು.
ಬಾಕಿ ಕಾಮಗಾರಿಗಳಿಗೆ ಗಡುವು!
ಸಾರ್ವಜನಿಕ ಆಸ್ತಿಗಳಿಗೆ ಉಂಟಾಗಿರುವ ಹಾನಿ ದುರಸ್ಥಿಗೆ 2019 ರಿಂದ 2022 ರ ಅವಧಿಯಲ್ಲಿ ಮಂಜೂರಾಗಿ ಇನ್ನೂ ಪೂರ್ಣಗೊಳ್ಳದ 137 ಕಾಮಗಾರಿಗಳನ್ನು(ಕೊರೋನಾ ಸೇರಿದಂತೆ) ಮುಂದಿನ 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com