ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲು ಔರಾದ್ ತಾಲ್ಲೂಕು ಕಸಾಪ ಅಧ್ಯಕ್ಷರನ್ನಾಗಿ ಬಿ.ಎಂ.ಅಮರವಾಡಿ ಅವರನ್ನು ನೇಮಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ತಿಳಿಸಿದ್ದಾರೆ.
ʼಕನ್ನಡ ಸಾಹಿತ್ಯ ಪರಿಷತ್ತಿನ ಹಿಂದಿನ ಅಧ್ಯಕ್ಷರಾಗಿದ್ದ ಡಾ.ಶಾಲಿವಾನ ಉದಗಿರೆ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನಾಗಿ ಅಮರವಾಡಿ ಅವರನ್ನು ನೇಮಿಸಲಾಗಿದ್ದು, ನಿಕಟಪೂರ್ವ ಅಧ್ಯಕ್ಷ ಶಾಲಿವಾನ ಉದಗೀರೆ ಅವರು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕ್ರಿಯಾಶೀಲರಾಗಿ ಅನೇಕ ಕನ್ನಡ ಕಾರ್ಯಚಟುವಟಿಕೆಗಳನ್ನು ಸಂಘಟಿಸಿದ್ದಾರೆʼ ಎಂದು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼವೃತ್ತಿಯಲ್ಲಿ ಶಿಕ್ಷಕರಾದ ಬಿ.ಎಂ.ಅಮರವಾಡಿ ಅವರು ಸ್ವತಃ ಸಾಹಿತಿಗಳಾಗಿದ್ದು, ಹಲವು ವರ್ಷಗಳಿಂದ ಸಾಹಿತ್ಯ, ಸಾಂಸ್ಕೃತಿಕ ಸಂಘಟಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದಿನ ಎರಡು ಅವಧಿಗೆ ಔರಾದ ತಾಲ್ಲೂಕಿನ ಕಸಾಪ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ ಶ್ರೇಯಸ್ಸು ಅವರದಾಗಿದೆʼ ಎಂದು ಹೇಳಿದ್ದಾರೆ.
ಗಡಿ ಭಾಗದಲ್ಲಿ ಅನೇಕ ವರ್ಷಗಳಿಂದ ನಾಡು-ನುಡಿಯ ನಿಷ್ಠಾವಂತ ಸೇವಕರಾಗಿ ಕವಿ, ಸಾಹಿತಿಗಳಾಗಿ ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇವರ ಸೇವೆ, ಸಾಧನೆಗಳನ್ನು ಗುರುತಿಸಿ ಬೀದರ ಜಿಲ್ಲಾಡಳಿತದಿಂದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಕಸಾಪ ವತಿಯಿಂದ ಬೀದರ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಕಸಾಪ ಗೌರವಿಸಿತ್ತು.
ಈ ಸುದ್ದಿ ಓದಿದ್ದೀರಾ? ಬೀದರ್ ಲೋಕಸಭಾ ಕ್ಷೇತ್ರಕ್ಕೆ 50,380 ಮನೆ ಮಂಜೂರು : ಸಂಸದ ಸಾಗರ್ ಖಂಡ್ರೆ
ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅಮರವಾಡಿಯವರನ್ನ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಸದರಿಯವರು ಹುದ್ದೆಯನ್ನು ಸ್ವೀಕರಿಸಿ ಕಾರ್ಯ ಪ್ರವೃತ್ತರಾಗಲು ಜಿಲ್ಲಾ ಕಸಾಪ ಸೂಚಿಸಿದೆ.
ತುಂಬ ಖುಷಿಯ ವಿಷಯ
ಅಭಿನಂದನೆಗಳು ಸರ್ 💐