ಕಳೆದ ಚುನಾವಣೆಯಲ್ಲಿ 136 ಸ್ಥಾನ ಗೆಲ್ಲಿಸಿದ್ದೀರಾ, 2028ರಲ್ಲೂ ಇದೇ ರೀತಿ ಆಶೀರ್ವಾದ ಮಾಡಬೇಕು. ದೇಶದಲ್ಲೇ ಕರ್ನಾಟಕದ ತಲಾ ಆದಾಯ ಹೆಚ್ಚಳವಾಗಿದ್ದು, ಇದಕ್ಕೆ ನಾವು ಜಾರಿ ಮಾಡಿರುವ ಪಂಚ ಗ್ಯಾರೆಂಟಿ ಯೋಜನೆಗಳೇ ಕಾರಣ. ಕಾಂಗ್ರೆಸ್ ಮಾತ್ರ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಸರ್ಕಾರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಹಾಸನ ಜಿಲ್ಲೆಯ ಅರಸೀಕೆರೆ ನಗರದಲ್ಲಿಂದು ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, “ವಿಪಕ್ಷದವರು ಗ್ಯಾರಂಟಿ ಯೋಜನೆಗಳಿಂದ ಹಣ ಇಲ್ಲ, ಅಭಿವೃದ್ಧಿ ಆಗುತ್ತಿಲ್ಲವೆಂದು ಟೀಕಿಸುತ್ತಿದ್ದಾರೆ. ಆದರೆ ಅದು ಸುಳ್ಳು, ಇಡೀ ದೇಶದಲ್ಲೇ ತಲಾ ಆದಾಯ ಹೆಚ್ಚಿರುವುದು ಕರ್ನಾಟಕದಲ್ಲಿ ಮಾತ್ರ. ಇದಕ್ಕೆ ಕಾರಣ ಗ್ಯಾರೆಂಟಿ ಯೋಜನೆ” ಎಂದರು.
“ಬಿಜೆಪಿ ಅವರಿಗೆ ಎಕಾನಾಮಿಕ್ಸ್ ಗೊತ್ತಿಲ್ಲ, ಗೊತ್ತಿದ್ದರೆ ಹೀಗೆ ಮಾತನಾಡುವುದಿಲ್ಲ. ಗ್ಯಾರೆಂಟಿ ಯೋಜನೆಯಿಂದ ಜನರಲ್ಲಿ ಕೊಳ್ಳುವ ಶಕ್ತಿ ಜಾಸ್ತಿಯಾಗಿದೆ. ಅದಕ್ಕಾಗಿ ವಿ ಆರ್ ನಂಬರ್ ಒನ್ ಆಗಿದ್ದೇವೆ. ಇದು ವಿರೋಧಿಗಳಿಗೆ ಅರ್ಥವಾಗಬೇಕು” ಎಂದು ಕುಟುಕಿದರು.
“ಗ್ಯಾರೆಂಟಿಗಳಿಂದ ರಾಜ್ಯ ದಿವಾಳಿ ಆಗಿದ್ದರೆ, ತಲಾ ಆದಾಯದಲ್ಲಿ ನಂಬರ್ ಒನ್ ಆಗಲು ಸಾಧ್ಯವಾಗುತ್ತಿರಲಿಲ್ಲ. ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ. ನಮ್ಮದು ಕೊಟ್ಟ ಮಾತಿನಂತೆ ನಡೆಯುವ ಸರ್ಕಾರ, ನಾವು ನುಡಿದಂತೆ ನಡೆದಿದ್ದೇವೆ. ನಾವು ಕೊಟ್ಟ ಭರವಸೆ ಈಡೇರಿಸುತ್ತೇವೆ, ಬಿಜೆಪಿಯವರು ಶೇ.10ರಷ್ಟನ್ನೂ ಈಡೇರಿಸಿಲ್ಲ. ಅವರು ಯಾವತ್ತೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದವರಲ್ಲ” ಎಂದು ವಾಗ್ದಾಳಿ ನಡೆಸಿದರು.
“ಅಧಿಕಾರ ಸಿಕ್ಕಾಗಲೆಲ್ಲಾ ಜನರ ಪರ ಕೆಲಸ ಮಾಡಲಿಲ್ಲ. ಎಲ್ಲವನ್ನೂ ಲೂಟಿ ಮಾಡಿದ್ದಾರೆ. ಈಗ ಆರೋಪ ಮಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಆರೋಪದಲ್ಲಿ ಹುರುಳಿಲ್ಲ. ಕುಮಾರಸ್ವಾಮಿ ಎತ್ತಿನಹೊಳೆ ಯೋಜನೆ ಸಾಧ್ಯವಿಲ್ಲ ಎಂದಿದ್ದರು, ನಾವು ಮೊದಲ ಹಂತದ ಕೆಲಸ ಮುಗಿಸಿ 2ನೇ ಹಂತದ ಕೆಲಸ ಶುರುವಾಗಿದೆ. ಇನ್ನೆರೆಡು ವರ್ಷದಲ್ಲಿ ಯೋಜನೆ ಮುಗಿಸಿ 7 ಜಿಲ್ಲೆಗಳಿಗೆ ನೀರು ಕೊಡುತ್ತೇವೆ” ಹೆಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿದರು.
“ಎತ್ತಿನಹೊಳೆ ಯೋಜನೆ ಮುಖ್ಯವಾಗಿ ಕುಡಿಯುವ ನೀರಿನ ಯೋಜನೆ 24 ಟಿಎಂಸಿಯಲ್ಲಿ 10 ಟಿಎಂಸಿ ಕೆರೆಗಳಿಗೆ, 14 ಟಿಎಂಸಿ ನೀರು ಕುಡಿಯಲು ಕೊಡುತ್ತೇವೆ. ಮೊದಲು ಕುಡಿಯಲು ನೀರು ಕೊಡೋಣ, ಬಳಿಕ 520 ಕೆರೆ ತುಂಬಿಸುವ ಕೆಲಸ ಮಾಡುತ್ತೇವೆ” ಎಂದರು.
“ತೆಂಗು ಬೆಳೆಗೆ ರೋಗ ಬಂದಿರುವುದಾಗಿ ಶಿವಲಿಂಗೇಗೌಡ ಮನವಿ ಕೊಟ್ಟಿದ್ದಾರೆ. ಎಷ್ಟೇ ಹಣ ಖರ್ಚಾದರೂ ಬೆಳೆ ಉಳಿಸುವ ಕೆಲಸ ಮಾಡುತ್ತೇವೆ. ನಾವು ಬಡವರು, ರೈತರು, ಮಹಿಳೆಯರಿಗೆ ಒತ್ತು ಕೊಟ್ಟು ಕೆಲಸ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಹಾಸನದಲ್ಲಿ ಏಳಕ್ಕೆ ಏಳೂ ಸೀಟುಗಳನ್ನು ಗೆಲ್ಲಿಸುವ ಕೆಲಸ ಮಾಡಿ” ಎಂದು ಮನವಿ ಮಾಡಿದರು.
ಇದನ್ನೂ ಓದಿದ್ದೀರಾ? ಅರಸೀಕೆರೆ | ಕನಕಪುರ, ವರುಣಾ ಕ್ಷೇತ್ರಕ್ಕಿಂತ ಶಿವಲಿಂಗೇಗೌಡರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿಸುತ್ತಿದ್ದಾರೆ: ಡಿಸಿಎಂ ಡಿ ಕೆ ಶಿವಕುಮಾರ್
ಸಿದ್ದರಾಮಯ್ಯ ಭಾಷಣದ ನಡುವೆ ಶಿವಲಿಂಗೇಗೌಡ ಅವರನ್ನು ಮಂತ್ರಿ ಮಾಡಿ ಎಂದು ಜನರು ಕೂಗಲು ಆರಂಭಿಸಿದರು. ಏಯ್ ಕೂತ್ಕೊಳ್ರಿ ಅಂದ್ರೂ ಕೇಳಲಿಲ್ಲ. ದನಿ ಜೋರಾದಾಗ ಸಿಎಂ ಸಿಟ್ಟಾಗಿ ಮಾತು ನಿಲ್ಲಿಸಿ ಕುಳಿತರು. ಆಗ ಸಚಿವ ರಾಜಣ್ಣ ಮತ್ತು ಶಿವಲಿಂಗೇಗೌಡ ಮನವೊಲಿಸಿ ಕರೆತಂದರು. ಮತ್ತೆ ಮಾತು ಆರಂಭಿಸಿದ ಸಿಎಂ, ಸಚಿವ ಸ್ಥಾನ ಕೊಡುವುದು ಹೈ ಕಮಾಂಡ್ ಹಾಗೂ ಸರ್ಕಾರ, ಶಿವಲಿಂಗೇಗೌಡ ಸಿಎಂ ಆಗುವ ಎಲ್ಲ ಅರ್ಹತೆ ಹೊಂದಿದ್ದಾರೆ. ಈಗಾಗಲೇ 4 ಬಾರಿ ಗೆಲ್ಲಿಸಿರುವ ನೀವು, ಮುಂದೆಯೂ ಗೆಲ್ಲಿಸಿ ಎಂದು ಮನವಿ ಮಾಡಿ, ಶಿವಲಿಂಗೇಗೌಡರ ಕಾರ್ಯವೈಖರಿಯನ್ನು ಸಿಎಂ ಶ್ಲಾಘಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಸಂಸದ ಶ್ರೇಯಸ್ ಪಟೇಲ್ ಕೂಡ ಶಿವಲಿಂಗೇಗೌಡರನ್ನು ಮಂತ್ರಿ ಮಾಡಿ ಎಂಬ ಬೇಡಿಕೆಯನ್ನು ಮುಂದಿಟ್ಟರು.