ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ನನ್ನ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ಮಾಡಿಕೊಟ್ಟಿದ್ದಾರೆ. ಆದರೆ ಎತ್ತಿನಹೊಳೆ ನೀರಿನ ಕೊರಗು ಕಾಡುತ್ತಿದ್ದು, ಅದೊಂದು ಕೊರತೆ ನೀಗಿಸಿಕೊಡಿ ಎಂದು ಸ್ಥಳೀಯ ಶಾಸಕರೂ ಆದ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ ಎಂ ಶಿವಲಿಂಗೇಗೌಡ ಮನವಿ ಮಾಡಿದರು.
ಹಾಸನ ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಪಲಾನುಭವಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಅರಸೀಕೆರೆಯಲ್ಲಿ ಎಂಜಿನಿಯರಿಂಗ್ ಕಾಲೇಜು ಉದ್ಘಾಟನೆಗೊಂಡಿದೆ. ವಸತಿ ಶಾಲೆ ಸೇರಿ ಅನೇಕ ಕಾಮಗಾರಿಗಳಿಗೆ ಶಂಕುಸ್ಥಾಪನೆ ಆಗಿದೆ. ಅರಸೀಕೆರೆ ಈವರೆಗೆ ನತದೃಷ್ಟ ತಾಲೂಕಾಗಿತ್ತು. ಕುಡಿಯುವ ನೀರಿರಲಿಲ್ಲ, ಅದೂ ಸೇರಿದಂತೆ ಎಲ್ಲ ಕೆಲಸವನ್ನು ಮಾಡಿಕೊಟ್ಟಿದ್ದು ಸಿದ್ರಾಮಣ್ಣ” ಎಂದು ಹೇಳಿದರು.
“ಇನ್ನೊಂದು ಕೊರಗಿದೆ. ಹೇಮಾವತಿ ನದಿ ಹಾಸನದಲ್ಲಿದ್ದರೂ ನೀರು ಬರಲಿಲ್ಲ. ಕೃಷ್ಣ ದಂಡೆ ಎಂದು ಕಾಲಹಣರ ಮಾಡಿದರು. ಕೆರೆಗಳು ತುಂಬಲಿಲ್ಲ, ಎತ್ತಿನಹೊಳೆ ಯೋಜನೆಗೆ ನಮ್ಮ ಪಕ್ಷದವರೇ ವಿರೋಧ ಮಾಡಿದ್ರು, ಅರಸೀಕೆರೆ ತಾಲೂಕಿಗೆ ಎತ್ತಿನಹೊಳೆ ನೀರು ಬರಬೇಕು, ಡಿ ಕೆ ಶಿವಕುಮಾರ್ ಅವರು ನೀರಾವರಿ ಮಂತ್ರಿ ಆಗಿದ್ದಾರೆ. ಹತ್ತು ಬಾರಿ ದೆಹಲಿಗೆ ಹೋಗಿ ಬಂದಿದ್ದಾರೆ, ಎತ್ತಿನಹೊಳೆ ನೀರು ಎಲ್ಲೆಲ್ಲೋ ಹರಿದು ಹೋಗ್ತಿದೆ, ಮೊನ್ನೆ ಸಂಪುಟ ಸಭೆಯಲ್ಲೂ ಅನುಮೋದನೆ ನೀಡಿದ್ದೀರಿ, ಸಿಎಂ-ಡಿಸಿಎಂ ಆಪದ್ಭಾಂದವರಾಗಿ ನನ್ನ ಕ್ಷೇತ್ರಕ್ಕೆ ಎತ್ತಿನಹೊಳೆ ನೀರು ಕೊಡಿ” ಎಂದು ಮನವಿ ಮಾಡಿದರು.

“ನಿಮ್ಮಿಬ್ಬರಿಗೂ ಕೈಮುಗಿದು ಬೇಡುತ್ತೇನೆ, ಇಬ್ಬರು ಸೇರಿ ಮಾಡಿಕೊಡಿ ನಿಮ್ಮ ಋಣ ಮರೆಯೋದಿಲ್ಲ. ನಾವು ಬರಗಾಲ ಪ್ರದೇಶದವರು, ಹಿಂದೆ ನಮ್ಮ ತಾಲೂಕನ್ನು ಬೇರೆ ರೀತಿ ನೋಡಿದ್ರು ಎಂದು ಮನವರಿಕೆ ಮಾಡಿದರು. ತೆಂಗಿನ ಮರಗಳಿಗೆ ನಾಲ್ಕು ತರಹದ ರೋಗ ಬಂದಿದೆ. ಉತ್ತಮ ಬೆಲೆ ಇರುವಾಗ ಮರಗಳು ಸರ್ವನಾಶ ಆಗುತ್ತಿವೆ. ಸರ್ಕಾರ ಸಮರೋಪಾದಿಯಲ್ಲಿ ಕಲ್ಪತರು ನಾಡನ್ನು ಉಳಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಅರಸೀಕೆರೆ | ದೇಶದಲ್ಲೇ ರಾಜ್ಯದ ತಲಾ ಆದಾಯ ಹೆಚ್ಚಳಕ್ಕೆ ಪಂಚ ಗ್ಯಾರೆಂಟಿಗಳೇ ಕಾರಣ: ಸಿಎಂ ಸಿದ್ದರಾಮಯ್ಯ
“ವಿರೋಧ ಪಕ್ಷದವರು ಸರ್ಕಾರ ಹೋಗುತ್ತೆ ಅಂತರೆ, ಸರ್ಕಾರ ದಿವಾಳಿಯಾಗಿದೆ ಅಂತರೆ, ಅವರಿಗೆ ಕೆಲಸವಿಲ್ಲ, ರಾಜ್ಯದಲ್ಲಿ ಬಡವರ ಬಗ್ಗೆ ಕಾಳಜಿ ಇಟ್ಟಿರುವುದು ಸಿದ್ರಾಮಣ್ಣನ ಸರ್ಕಾರ, ʼನಿಮಗೆ ತಾಕತ್ ಇದ್ರೆ ಗ್ಯಾರಂಟಿ ರದ್ದು ಮಾಡಿʼ ಎಂದು ಸವಾಲು ಹಾಕಿತು. ಆಗ ಜನ ಏನು ಮಾಡುತ್ತಾರೆ ನಿಮಗೆ ಗೊತ್ತಾಗುತ್ತೆಂದು ಎಚ್ಚರಿಸಿದರು. ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ, ಬರೀ ಗೂಬೆ ಕೂರಿಸುವ ಕೆಲಸ ಮಾಡಬೇಡಿರೆಂದು ಸಿಡಿದೆದ್ದರು. ಈಗ ಕಾರ್ಯಕ್ರಮಕ್ಕೆ ಹೆಚ್ಚು ಜನರ ಆಗಮಿಸಿದ್ದು ಸಂತಸ ತಂದಿದೆ. ಇಷ್ಟು ಜನ ಸೇರಿ ಇತಿಹಾಸ ಸೃಷ್ಟಿಸಿದ್ದೀರಿ, ಇದರಿಂದ ಸಿದ್ದರಾಮಯ್ಯ ಸರ್ಕಾರ ಬಡವರ ಪರ ಕೆಲಸ ಮಾಡಿದೆ ಎಂಬುದನ್ನು ಸಾಬೀತು ಮಾಡಿದ್ದೀರಿ” ಎಂದರು.
“ಎಂಜಿನಿಯರಿಂಗ್ ಕಾಲೇಜಿಗೆ 240 ಸೀಟುಗಳ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ. ಅರಸೀಕೆರೆಯವರೇ 200 ಮಂದಿ ವಿದ್ಯಾರ್ಥಿಗಳು ಓದುವುದಕ್ಕೆ ತಯಾರಾಗಿದ್ದಾರೆ. ಇಲ್ಲಿ ಪಾಲಿಟೆಕ್ನಿಕ್ ಓದಿ ಬೆಂಗಳೂರಿಗೆ ಹೋದ್ರೆ ಒಳ್ಳೆ ಸಂಬಳ ಸಿಗುತ್ತೆ, ಇದಕ್ಕೆ ಅವಕಾಶ ಮಾಡಿಕೊಟ್ಟ ನಮ್ಮ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ” ಎಂದು ಶಾಸಕ ಶಿವಲಿಂಗೇಗೌಡ ಅವರು ಕೃತಜ್ಞತೆ ವ್ಯಕ್ತಪಡಿಸಿದರು.