ಬೆಂಗಳೂರಿನ ಪ್ರಾಂತೀಯ ಮಹಾ ಧರ್ಮಾಧ್ಯಕ್ಷರಾದ ವಂದನೀಯ ಡಾ. ಪೀಟರ್ ಮಚಾದೊ ರವರು, ಭುಬನೇಶ್ವರದ ವಿಶ್ವವಿದ್ಯಾನಿಲಯಲ್ಲಿ ನಡೆಯುತ್ತಿರುವ 36ನೇ ಸಿಸಿಬಿಐನ ಸಾರ್ವತ್ರಿಕ ಸಭೆಯಲ್ಲಿ ಭಾರತೀಯ ಕೆಥೋಲಿಕ್ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಬೆಂಗಳೂರಿನ ಆರ್ಚ್ ಡಯಾಸೀಸ್ ತಿಳಿಸಿದೆ.
ಜನವರಿ 28ರಂದು ಪ್ರಾರಂಭವಾಗಿರುವ ಸಿಸಿಬಿಐನ ಸಾರ್ವತ್ರಿಕ ಸಭೆಯು ಫೆಬ್ರವರಿ 4ರಂದು ಮುಕ್ತಾಯಗೊಳ್ಳಲಿದೆ. ಸಮ್ಮೇಳನವು ಕಾರ್ಡಿನಲ್ ಫೆಲಿಪೆ ನೇರಿ ಫೆರೊರವರನ್ನು ಅಧ್ಯಕ್ಷರನ್ನಾಗಿ ಮರು ಚುನಾಯಿಸಿತು. ಅದೇ ವೇಳೆಯಲ್ಲಿ ರಾಂಚಿಯ ಮಹಾ ಧರ್ಮಾಧ್ಯಕ್ಷರಾದ ವಿನ್ಸೆಂಟ್ ಐಂಡ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

ಮಹಾಧರ್ಮಾಧ್ಯಕ್ಷರಾದ ಪೀಟರ್ ಮಚಾದೋ(70) ಮೇ 26, 1954 ರಂದು ಜನಿಸಿದ್ದು, ಡಿಸೆಂಬರ್ 8, 1978 ರಂದು ಕಾರವಾರ ಧರ್ಮಕ್ಷೇತ್ರದಲ್ಲಿ ಯಾಜಕ ದೀಕ್ಷೆಯನ್ನು ಸ್ವೀಕರಿಸಿದ್ದರು.
ರೋಮ್‌ನ ಪಾಂಟಿಫಿಕಲ್ ಅರ್ಬನ್ ವಿಶ್ವವಿದ್ಯಾಲಯದಿಂದ ‘ಧರ್ಮಸಭೆಯ ಕಾನೂನುಗಳಲ್ಲಿ’ ಉನ್ನತ ಶಿಕ್ಷಣವನ್ನು ಮುಗಿಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಅವರ ಪಾಲನಾ ಸೇವೆಯ ಪ್ರಯಾಣದಲ್ಲಿ ಅವರನ್ನು ಫೆಬ್ರವರಿ 2, 2006 ರಂದು ಬೆಳಗಾವಿಯ ಧರ್ಮಾಧ್ಯಕ್ಷರನ್ನಾಗಿ ನೇಮಿಸಲಾಯಿತು ಮತ್ತು ನಂತರ ಮಾರ್ಚ್ 19, 2018 ರಂದು ಬೆಂಗಳೂರಿನಲ್ಲಿ ಮಹಾಧರ್ಮಾಧ್ಯಕ್ಷರಾಗಿ ನೇಮಕಗೊಂಡಿದ್ದರು.
ಇದನ್ನು ಓದಿದ್ದೀರಾ? ಮಂಗಳೂರು | ಇಡಿ ಅಧಿಕಾರಿಗಳ ಸೋಗಿನಲ್ಲಿ ಬೀಡಿ ಉದ್ಯಮಿ ಮನೆಗೆ ದಾಳಿ ಪ್ರಕರಣ: ಮತ್ತೋರ್ವನ ಬಂಧನ
ಮೇ 31, 2018 ರಂದು ಮಹಾಧರ್ಮಾಧ್ಯಕ್ಷರ ಧರ್ಮಾಧ್ಯಕ್ಷೀಯ ದೀಕ್ಷೆಯನ್ನು ಸ್ವೀಕರಿಸಿದ್ದ ಅವರು, ಕರ್ನಾಟಕ ಪ್ರಾದೇಶಿಕ ಧರ್ಮಾಧ್ಯಕ್ಷರುಗಳ ಮಂಡಳಿಯ ಅಧ್ಯಕ್ಷರಾಗಿಯೂ (KRCBC), ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹೂಮನ್ ರೈಟ್ಸ್ (AKUCFHR) ಅಧ್ಯಕ್ಷರಾಗಿಯೂ ಮತ್ತು ಶ್ರೀಸಾಮಾನ್ಯರ ಆಯೋಗದ ಸಿಸಿಬಿಐನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬೆಂಗಳೂರಿನ ಆರ್ಚ್ ಡಯಾಸೀಸ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಜೆ ಎ ಕಾಂತರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
